ಪ್ಯಾರಿಸ್: ಟ್ರ್ಯಾಕ್ ಮತ್ತು ಫೀಲ್ಡ್ ಅಥ್ಲೀಟ್‌ಗಳ ಅಮೋಘ ಪ್ರದರ್ಶನದಿಂದ ಭಾರತವು ಪ್ಯಾರಾಲಿಂಪಿಕ್ಸ್‌ನಲ್ಲಿ ಕಳೆದ ಆವೃತ್ತಿಯ ಪೋಡಿಯಂ ಫಿನಿಶ್‌ಗಳ ಸಂಖ್ಯೆಯನ್ನು ಹಿಂದಿಕ್ಕುವ ಮೂಲಕ ತನ್ನ ಅತ್ಯುತ್ತಮ ಪದಕ ಪಟ್ಟಿಯನ್ನು ಮಂಗಳವಾರ(ಸೆ 3) ದಾಖಲಿಸಿದೆ.
ಮೂರು ವರ್ಷಗಳ ಹಿಂದೆ ಟೋಕಿಯೊ ಪ್ಯಾರಾಲಿಂಪಿಕ್ ಕ್ರೀಡಾಕೂಟದಲ್ಲಿ 19 ಪದಕಗಳ ಹಿಂದಿನ ಅತ್ಯುತ್ತಮ ಸಾಧನೆಯನ್ನು ಮೀರಿಸಿದೆ. ಪದಕಗಳ ಪಟ್ಟಿಯಲ್ಲಿ ಭಾರತದ ಸಂಖ್ಯೆಯನ್ನು 20ಕ್ಕೇರಿದೆ. ಇದರಲ್ಲಿ 3 ಚಿನ್ನ, 7 ಬೆಳ್ಳಿ, 10 ಕಂಚಿನ ಪದಕಗಳಿವೆ. ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತ ಐದು ಚಿನ್ನ, ಎಂಟು ಬೆಳ್ಳಿ ಮತ್ತು ಆರು ಕಂಚಿನ ಪದಕಗಳನ್ನು ಗೆದ್ದಿತ್ತು.
ಭಾರತೀಯ ಪ್ಯಾರಾ ಕ್ರೀಡೆಗಳ ಸುವರ್ಣಾಕ್ಷರದಲ್ಲಿ ಬರೆದಿಡುವ ದಿನ ದಂದು, ಟ್ರ್ಯಾಕ್ ಮತ್ತು ಫೀಲ್ಡ್ ಅಥ್ಲೀಟ್‌ಗಳು ಫ್ರಾನ್ಸ್‌ನಲ್ಲಿ ಸತತ ಎರಡನೇ ದಿನ ತಮ್ಮ ಶಕ್ತಿಯನ್ನು ಪ್ರದರ್ಶಿಸಿದರು, ಚತುರ್ವಾರ್ಷಿಕ ಕ್ರೀಡಾಕೂಟದ ಆರನೇ ದಿನ ಮುಕ್ತಾಯದಂದು ಐದು ಪದಕಗಳನ್ನು (ಎರಡು ಬೆಳ್ಳಿ ಮತ್ತು ಮೂರು ಕಂಚಿನ ಪದಕ) ಜಯಿಸಿದರು. ಭಾರತ ಪದಕ ಪಟ್ಟಿಯಲ್ಲಿ 19 ನೇ ಸ್ಥಾನದಲ್ಲಿದೆ.
ಎಫ್ 46 ವಿಭಾಗದಲ್ಲಿ ಭಾರತದ ಜಾವೆಲಿನ್ ಎಸೆತಗಾರರಾದ ಅಜೀತ್ ಸಿಂಗ್ ಮತ್ತು ಸುಂದರ್ ಸಿಂಗ್ ಗುರ್ಜರ್ ಕ್ರಮವಾಗಿ 65.62 ಮೀ ಮತ್ತು 64.96 ಮೀಟರ್ ಎಸೆದು ಬೆಳ್ಳಿ ಮತ್ತು ಕಂಚಿನ ಪದಕವನ್ನು ಗೆದ್ದರು.
ಹೈ ಜಂಪ್ ನ ಟಿ63 ಫೈನಲ್‌ನಲ್ಲಿ ಶರದ್ ಕುಮಾರ್ ಮತ್ತು ಟೋಕಿಯೊ ಪ್ಯಾರಾಲಿಂಪಿಕ್ಸ್ ಚಿನ್ನದ ಪದಕ ವಿಜೇತ ಮರಿಯಪ್ಪನ್ ತಂಗವೇಲು ಅವರು ಕ್ರಮವಾಗಿ 1.88ಮೀ ಮತ್ತು 1.85ಮೀ ಜಿಗಿತಗಳೊಂದಿಗೆ ಬೆಳ್ಳಿ ಮತ್ತು ಕಂಚಿನ ಪದಕ ಗೆದ್ದುಕೊಡರು.
ವಿಶ್ವ ಚಾಂಪಿಯನ್ ಸ್ಪ್ರಿಂಟರ್ ದೀಪ್ತಿ ಜೀವನ್ ಜಿ ಮಹಿಳೆಯರ 400 ಮೀ (ಟಿ 20) ಸ್ಪರ್ಧೆಯಲ್ಲಿ 55.82 ಸೆಕೆಂಡ್‌ಗಳೊಂದಿಗೆ ಭಾರತಕ್ಕೆ ಮತ್ತೊಂದು ಕಂಚಿನ ಪದಕವನ್ನು ಖಚಿತಪಡಿಸಿದರು.