Advertisement

ಪೀಂಚಲು ಪಿಸುಮಾತು

11:26 AM Feb 17, 2018 | |

ಸೊಂಟಕ್ಕೆ ಸೀರೆ ಸುತ್ತಿ, ಗೊಬ್ಬೆ ಸೆರಗು ಹಾಕಿ ಕಟ್ಟಿ, ವಲ್ಲಿ ಹೊದ್ದು, ಹಣೆಗೆ ಕುಂಕುಮವಿಟ್ಟು, ಕಿವಿಗೆ ಬುಗುಡಿ, ಕೊರಳಿಗೆ ಅಡ್ಡಿಕೆ, ಕೈಗೆ ಬಳೆ, ಕಡಗ, ಕಾಲು ಬೆರಳಿಗೆ ಸುತ್ತುಕಾಲುಂಗುರ ಹಾಕಿ ಸಿಂಗರಿಸಿಕೊಂಡರೆ ಈ ಪೀಂಚಲು, ಅಂದದಲ್ಲಿ ಮಲೆನಾಡಿನ ಯಾವ ಹೆಣ್ಣಿಗೂ ಬಿಟ್ಟು ಕೊಡುವುದಿಲ್ಲ. ಬೆಂಗಳೂರಿನಲ್ಲಿ ದಟ್ಟ ಚಳಿಯ ನಡುವೆ ಕುವೆಂಪು ಅವರ “ಮಲೆಗಳಲ್ಲಿ ಮದುಮಗಳು’ ಕಾದಂಬರಿಯ ದೃಶ್ಯಗಳು ತೆರೆದುಕೊಂಡಿದ್ದವು.

Advertisement

ಆ ಮಹಾ ನಾಟಕದ ಉದ್ದಕ್ಕೂ ಮೋಡಿ ಮಾಡಿದ ಚೆಲುವು ಪೀಂಚಲುದ್ದು. ಕಾದಂಬರಿಯಲ್ಲಿ ಅವಳು ಕೀಳು ಜಾತಿಯ ಆಳಾಗಿದ್ದರೂ ಇಡೀ ಕಥೆಯ ಮಹತ್ತರ ತಿರುವುಗಳಲ್ಲಿ ಆಕೆಯ ಪಾತ್ರ ದೊಡ್ಡದು. ತನ್ನ ಸಾಂಸಾರಿಕ ಹಾಗೂ ಕಾರ್ಯಕ್ಷೇತ್ರದಲ್ಲಿಯೂ ಕೂಡ ಪೀಂಚಲು ತುಂಬಾ ಆದರ್ಶವಾಗಿ ನಿಲ್ಲುತ್ತಾಳೆ. ಈ ಮಹಾನಾಟಕದ ಯಾತ್ರೆಯೇನೋ ಮುಗಿದಿದೆ. ಕಾಡುವ ಪೀಂಚಲು ಇಲ್ಲಿನ ಸಂದರ್ಶನದಲ್ಲಿ ಮಾತಾಗಿದ್ದಾಳೆ…


* “ಮಲೆಗಳಲ್ಲಿ ಮದುಮಗಳು’ ನಾಟಕಕ್ಕೆ ನಿಮ್ಮ ಪ್ರವೇಶ ಆಗಿದ್ಹೇಗೆ?
ಬಹುರೂಪಿ ನಾಟಕೋತ್ಸವಕ್ಕೆ ಬಂದ ನಾನು, ರಂಗಾಯಣದಲ್ಲಿ ನಡೆಯುತ್ತಿದ್ದ ನಾಟಕಗಳನ್ನು ನೋಡ್ತಿ ಬೆರಗಾಗಿದ್ದೆ. ಆಗ “ಮಲೆಗಳಲ್ಲಿ ಮದುಮಗಳು’ ನಾಟಕದ ಮಾತುಕತೆ ನಡೆಯುತ್ತಿತ್ತು. ಆ ದೊಡª ನಾಟಕದಲ್ಲಿ ನನಗೂ ಒಂದು ಪಾತ್ರ ಸಿಕ್ಕಿದರೆ ಸಾಕೆಂದುಕೊಂಡೆ. ಬರೀ ಸಂಗೀತ ತಂಡದಲ್ಲಿದ್ದರೆ ಸಾಕೆಂದು ಬಂದ ನನಗೆ ನಿರ್ದೇಶಕರಾದ ಬಸವಲಿಂಗಯ್ಯನವರು ಕೈಗೆ ಸ್ಕ್ರಿಪ್ಟ್ ಕೊಟ್ಟು ನಾಳೆ ಅಭಿನಯಿಸಿ ತೋರಿಸುವಂತೆ ಹೇಳಿ ಹೋದರು. ಮರುದಿನ ನನ್ನ ಅಭಿನಯ ನೋಡಿ, ಪೀಂಚಲು ಪಾತ್ರಕ್ಕೆ ಆಯ್ಕೆ ಮಾಡಿದರು. 

* ಆ ಮಹಾ ಕಾದಂಬರಿ ಓದಿದ್ದೀರಾ? ಓದಿದ್ದು ನೆರವಿಗೆ ಬಂತೇ?
ಹೌದು. ಓದಿದ್ದೇನೆ. ಅಲ್ಲಿನ ಇಡೀ ಪಾತ್ರಗಳು ನನ್ನ ಕಣ್ಮುಂದೆ ಓಡಾಡುತ್ತಿವೆ. ಕುವೆಂಪುರವರು ಪ್ರತಿ ಪಾತ್ರದ ಸಣ್ಣ ಸಣ್ಣ ವಿವರಗಳನ್ನು ಎಷ್ಟು ಅದ್ಭುತವಾಗಿ ಚಿತ್ರಿಸಿದ್ದಾರೆ. ಕಾದಂಬರಿಯಲ್ಲಿ ಪಾತ್ರ ಹೇಗೆ ಚಲಿಸುತ್ತದೆ ಎಂಬ ಹರಿವು ಸ್ಪಷ್ಟವಾಗಿರುವುದರಿಂದ ಕಾದಂಬರಿ ಓದಿದ್ದು ಅಭಿನಯಕ್ಕೆ ತುಂಬಾ ಸಹಾಯಕವಾಯಿತು.

* ನೀವು ಕಂಡಂತೆ ಕುವೆಂಪು ಕಲ್ಪಿತ ಪೀಂಚಲು ಹೇಗೆ?
ಪೀಂಚಲು ಪಾತ್ರವನ್ನು ಕುವೆಂಪು ಬಹಳ ಅದ್ಭುತವಾಗಿ ಚಿತ್ರಿಸಿದ್ದಾರೆ. ಆಕೆ ಎಲ್ಲಾ ಜಾತಿಯವರಿಗೂ, ಮನೆತನದವರಿಗೂ ಮಾದರಿ ಹೆಣ್ಣು. ಆಕೆಯ ವ್ಯಕ್ತಿತ್ವವನ್ನು ತುಂಬಾ ಉನ್ನತ ಮಟ್ಟದಲ್ಲಿ ತೋರಿಸಿದ್ದಾರೆ. ಇಡೀ ಕಾದಂಬರಿಯ ಬಹುತೇಕ ಸಾಹಸ ದೃಶ್ಯಗಳಲ್ಲಿ ಮುಂದಾಳು ಆಗಿರುವ ಆಕೆ, ಯಾವ ಪುರುಷನಿಗೂ ಕಡಿಮೆ ಇಲ್ಲ ಎಂಬುದನ್ನು ತೋರಿಸಿದ್ದಾರೆ.

* ಪೀಂಚಲು ಪಾತ್ರ ನಿಮಗೆ ಸವಾಲಾಯಿತೇ?
ಮೊದಲಿಗೆ ಇದು ನನ್ನ ವಯಸ್ಸಿಗೆ ಮೀರಿದ ಪಾತ್ರ ಅಂತನ್ನಿಸಿತ್ತು. ಆ ಪಾತ್ರಕ್ಕೆ ಬೇಕಾದಂತೆ ಮಾತು, ಸಂಭಾಷಣೆಯ ಜೊತೆಗೆ ಪೀಂಚಲು, ಚಿನ್ನಮ್ಮನ ಪಾತ್ರದ ಜೊತೆ ತನ್ನ ವೈವಾಹಿಕ ಸಂಬಂಧದ ಗುಟ್ಟುಗಳನ್ನು ಹೇಳುವ ದೃಶ್ಯಗಳನ್ನು ಅಭಿನಯಿಸುವಾಗ ತುಂಬಾ ಮುಜುಗರವಾಗುತ್ತಿತ್ತು. ನನ್ನ ಹಿಂಜರಿಕೆಗಳನ್ನು ನಿವಾರಿಸುವಲ್ಲಿ ನನ್ನ ಸಹ ಕಲಾವಿದರು ಹಾಗೂ ನಿರ್ದೇಶಕ ಬಸವಲಿಂಗಯ್ಯನವರು ಬಹಳ ನೆರವಾದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next