Advertisement

ಮಟ್ಟು : ಪಿನಾಕಿನಿ ಹೊಳೆ ನಡುವಿನ ಗಿಡಗಳಿಂದ ನೀರ ಹರಿವಿಗೆ ತೊಡಕು  

12:50 AM Jan 28, 2019 | Harsha Rao |

ಕಟಪಾಡಿ: ಕೋಟೆ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಮಟ್ಟು ಅಣೆಕಟ್ಟು ಬಳಿ ಹರಿಯುವ ಪಿನಾಕಿನಿ ಹೊಳೆಯ ನಡುವೆ ಇರುವ ಗಿಡಗಳಿಂದ ನದಿ ಕೊರೆತ ಉಂಟಾಗುತ್ತಿದ್ದು, ಬೇಸಾಯ ಮತ್ತು ಮಟ್ಟುಗುಳ್ಳದ ಕೃಷಿ ಭೂಮಿ ಹಾಗೂ ತೋಟಗಳು ನದಿಪಾಲಾಗುವ ಭೀತಿ ಈ ಭಾಗದ ಜನರಿಗೆ ಕಾಡಿದೆ.  

Advertisement

ಈ ಹೊಳೆಯ ನಡುವೆ ಬೆಳೆ ಯುವ ಗಿಡಗಳಿಂದ ಎಷ್ಟು ಪ್ರಯೋಜನ ವಿದೆಯೋ ಅಷ್ಟೇ ಅಪಾಯವೂ ಸಂಭವಿಸುತ್ತಿದೆ. ನದಿಯ ನೀರಿನ ಹರಿವಿಗೆ ಇದು ತೊಡಕುಂಟು ಮಾಡುತ್ತಿದ್ದು, ಮನೆಗಳಿರುವ ಪ್ರದೇಶದಲ್ಲಿ  ನದಿ ದಂಡೆಗಳ ಕೊರೆತ ಉಂಟಾಗುತ್ತಿದೆ. ಕಳೆದ ಐದಾರು ವರ್ಷಗಳ ಹಿಂದೆ ಕೆಲ ಮನೆಗಳು ಹಾನಿಗೀಡಾಗಿವೆ ಎಂದು ಸ್ಥಳೀಯರು ಹೇಳುತ್ತಾರೆ.  

ದಂಡೆಗಳು ನದಿ ಪಾಲು 
ಕೆಲ ಭಾಗದಲ್ಲಿ ನದಿಕೊರೆತವಾಗ ದಂತೆ ನದಿದಂಡೆ ನಿರ್ಮಿಸಿದ್ದರೂ ಪ್ರಸ್ತುತ ಮತ್ತೆ ಆ ದಂಡೆಗಳು ಕೊರೆತದಿಂದ ನದಿ ಪಾಲಾಗುತ್ತಿದ್ದು ಮನೆಗಳು ಅಪಾಯವನ್ನು ಎದುರಿಸುತ್ತಿವೆ ಎಂದು ನಿವಾಸಿಗಳಾದ ಸಾಧು ಪೂಜಾರಿ, ಐತು ಪೂಜಾರಿ ಮತ್ತಿತರರು ಕಳವಳ ವ್ಯಕ್ತ ಪಡಿಸುತ್ತಾರೆ.

ತ್ಯಾಜ್ಯ, ಪ್ರಾಣಿಗಳ ಕಳೇಬರಗಳಿಂದ ಪರಿಸರ ಹಾಳು  
ನದಿ ಪಾತ್ರಗಳಲ್ಲಿ ನೀರಿನೊಂದಿಗೆ ಬಂದ ತ್ಯಾಜ್ಯದ ರಾಶಿಗಳಿದ್ದು, ನೀರ ಹರಿವಿಗೆ, ಪರಿಸರಕ್ಕೆ ಹಾನಿಯಾಗಿದೆ. ಇದರೊಂದಿಗೆ ಎಲ್ಲಿಂದಲೋ ಬಂದ ಪ್ರಾಣಿ, ಪಕ್ಷಿ, ಜಾನುವಾರುಗಳ ಕಳೇಬರಗಳು ಇವುಗಳ ಮಧ್ಯೆ ಸಿಲುಕಿಕೊಂಡು ಪರಿಸರವನ್ನು ಮತ್ತಷ್ಟು ಹಾಳುಗೆಡವುತ್ತಿವೆ. 

ವ್ಯವಸ್ಥೆ ಕಲ್ಪಿಸಲು ಒತ್ತಾಯ
 ನದಿ ನೀರಿನ ನಡುವೆ ಇರುವ ಈ ಗಿಡಗಳಿಂದಾಗಿ ನದಿಯು ಮುಚ್ಚುತ್ತಾ ಬಂದು ನದಿಯ ನಡುವೆ ಕುದ್ರು ನಿರ್ಮಾಣವಾಗುತ್ತದೆ. ಹರಿಯುವ ನೀರು ಭೂ ಪ್ರದೇಶದತ್ತ ತಿರುವು ಪಡೆದುಕೊಳ್ಳುತ್ತಿದ್ದು, ಇದರೊಂದಿಗೆ ಉಪ್ಪು ನೀರೂ ಕೂಡ ಬೇಸಾಯ ಮತ್ತು ಮಟ್ಟುಗುಳ್ಳ ಕೃಷಿ ಗದ್ದೆಗೆ ಹರಿದು ಅಪಾರವಾದ ನಷ್ಟವನ್ನು ಅನುಭವಿಸಬೇಕಾಗಿದೆ ಎಂದು ಕೃಷಿಕರು ಹೇಳುತ್ತಾರೆ. ಈ ಕಾರಣದಿಂದ ಹಲವರು ಗದ್ದೆ ಹಡಿಲು ಬಿಟ್ಟಿದ್ದಾರೆ. ಮುಂದಿನ ಮಳೆಗಾಲಕ್ಕೆ ಮುನ್ನ   ಹೊಳೆಯ ನೀರು ಸರಾಗವಾಗಿ ಹರಿದು ಹೋಗಲು ಆಳಿಂಜೆ, ಬ್ಯಾರಿತೋಟ, ನಾಗನಡಿ, ಮಟ್ಟುಕಟ್ಟ, ಮಟ್ಟು ಅಣೆಕಟ್ಟು ಭಾಗದಲ್ಲಿ ನೀರ ಸರಾಗ ಹರಿವಿಗೆ ವ್ಯವಸ್ಥೆ ಮಾಡಿಕೊಡಬೇಕು ಎಂದು ಆಗ್ರಹಿಸಲಾಗಿದೆ. 

Advertisement

ಕಾಂಡ್ಲಾ ತೋಪು ಅಗತ್ಯ
ಸುನಾಮಿಯಂತಹ ಪ್ರಕೃತಿ ವಿಕೋಪ ಸಂಭವಿಸಿದರೂ ಕಾಂಡ್ಲಾ ಗಿಡಗಳಿದ್ದ ಪ್ರದೇಶವು ಮನೆಗಳಿಗೆ ಸುರಕ್ಷತೆಯನ್ನು ಕಲ್ಪಿಸುತ್ತದೆ. ನೀರಿನ ಹೊಡೆತ ಕಡಿಮೆಗೊಳಿಸುತ್ತದೆ. ಸಾಧಕ-ಬಾಧಕ, ಅಭಿಪ್ರಾಯ ಭೇದಗಳು ಸ್ವಾಭಾವಿಕ. ಆದರೂ ಕುದುರು ಭಾಗದ ಸಂರಕ್ಷಣೆಗೆ ಕಾಂಡ್ಲಾ ತೋಪು ಅಗತ್ಯವಿದೆ. 
-ನಾಗೇಶ್‌ ಬಿಲ್ಲವ, ಉಪವಲಯ ಅರಣ್ಯಾಧಿಕಾರಿ, ಕಾಪು

ಡ್ರೆಜ್ಜಿಂಗ್‌ನಿಂದ   ಹೊಳೆ ಆಳಗೊಳಿಸಿ
ನಮ್ಮ ತೋಟ, ಕೃಷಿ, ಮಟ್ಟುಗುಳ್ಳ ಬೆಳೆಯುವ ಗದ್ದೆಗಳು, ಕೆರೆ ಮಾಯವಾಗಿ ಪಿನಾಕಿನಿ ಹೊಳೆಯಾಗಿ ಮಾರ್ಪಾಟಾಗಿದೆ. 
ನದಿ ತಿರುವು ಪಡೆಯದಂತೆ ಡ್ರೆಜ್ಜಿಂಗ್‌  ಮಾಡುವ ಮೂಲಕ ಹೊಳೆಯ ಮಧ್ಯ ಭಾಗದ ಹೂಳನ್ನು ತೆಗೆದು ಆಳಗೊಳಿಸಿ ನದಿಯ ನೀರು ಸರಾಗವಾಗಿ ಹರಿಯುವಂತೆ ಮಾಡಬೇಕಿದೆ. ಇಲ್ಲವಾದಲ್ಲಿ ಮತ್ತಷ್ಟು ಹೆಚ್ಚಿನ ಹಾನಿ ಸಂಭವಿಸಲಿದೆ.  
-ಲಕ್ಷ್ಮಣ್‌ ಅಂಚನ್‌, ಆಳಿಂಜೆ, ಮಟ್ಟು

Advertisement

Udayavani is now on Telegram. Click here to join our channel and stay updated with the latest news.

Next