Advertisement
ಪುಣೆಯ ಕೈಗಾರಿಕಾ ವಲಯದಲ್ಲಿ ಪಿಂಪ್ರಿ- ಚಿಂಚ್ವಾಡ್‌ಗೆ ಪ್ರಥಮ ಆದ್ಯತೆಯಿದೆ. ಇಲ್ಲಿ ಸಣ್ಣ ಕೈಗಾರಿಕೆಗಳಿಂದ ಹಿಡಿದು ಬೃಹತ್ ಪ್ರಮಾಣದ ಕೈಗಾರಿಕೆಗಳು ಬೀಡುಬಿಟ್ಟಿವೆ. ಈ ಪರಿಸರದಲ್ಲಿ ವಿವಿಧ ರಾಜ್ಯಗಳ, ಆರ್ಥಿಕವಾಗಿ ಹಿಂದುಳಿದ ಜನರು ಲಕ್ಷಾಂತರ ಸಂಖ್ಯೆಯಲ್ಲಿ ನೆಲೆಸಿದ್ದು, ದಿನಕೂಲಿ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಇವರಲ್ಲಿ ಕನ್ನಡಿಗರ ಸಂಖ್ಯೆಯೂ ಬಹಳಷ್ಟಿದೆ. ಇಲ್ಲಿ ಕನ್ನಡಿಗ ಕೈಗಾರಿಕೋದ್ಯಮಿಗಳಿಂದ ಹಿಡಿದು ಹೊಟೇಲಿಗರು ಕೈಗಾರಿಕೆಗಳಿಗೆ ಪೂರಕವಾಗಿ ಬಿಡಿ ಭಾಗಗಳನ್ನು ಒದಗಿಸುವ ಸಣ್ಣಪುಟ್ಟ ಉದ್ದಿಮೆಗಳನ್ನು ಹೊಂದಿದ್ದಾರೆ. ಇವರ ಕಂಪೆನಿ ಮತ್ತು ಇತರ ಉದ್ಯಮಗಳಲ್ಲಿ ದೊಡ್ಡ ಹುದ್ದೆಯಿಂದ ಹಿಡಿದು ಸಣ್ಣ ಹುದ್ದೆಗಳಲ್ಲಿ ಕನ್ನಡಿಗರು ಕೆಲಸ ಮಾಡುತ್ತಿದ್ದಾರೆ. ಕೋವಿಡ್ ಪರಿಣಾಮ ಜಾರಿ ಮಾಡಲಾದ ಲಾಕ್‌ಡೌನ್‌ನಿಂದಾಗಿ ಕೆಲಸ ಕಳೆದುಕೊಂಡ ನೂರಾರು ಬಡ ಕನ್ನಡಿಗರ ಸಮಸ್ಯೆಗಳನ್ನು ಅರಿತ ಕನ್ನಡ ಸಂಘ ಪಿಂಪ್ರಿ- ಚಿಂಚ್ವಾಡ್ ಪರಿಸರದಲ್ಲಿರುವ ಬಡ ಕನ್ನಡಿಗರ ನೆರವಿಗೆ ಧಾವಿಸಿದೆ.
Related Articles
Advertisement
ಸರಕಾರಿ ಅಧಿಕಾರಿಗಳಿಂದ ಪ್ರಶಂಸಾ ಪತ್ರ : ಲಾಕ್‌ಡೌನ್‌ನ ಸಂದರ್ಭದಲ್ಲಿ ಕನ್ನಡ ಸಂಘ ಪಿಂಪ್ರಿ- ಚಿಂಚ್ವಾಡ್, ಮಾಡಿದ ಜನ ಸೇವಾ ಕಾರ್ಯಗಳಿಗೆ ಮಹಾರಾಷ್ಟ್ರ ಸರಕಾರದ ಸ್ಥಳೀಯ ಅ ಧಿಕಾರಿಗಳು ಸಂಘದ ಕಾರ್ಯವನ್ನು ಶ್ಲಾಘಿಸಿ ಸಂಘದ ಸದಸ್ಯರನ್ನು ಬರಮಾಡಿಕೊಂಡು ಪ್ರಶಂಸಾ ಪತ್ರವನ್ನು ನೀಡಿ ಗೌರವಿಸಿದ್ದಾರೆ. ಸಂಘದ ಅಧ್ಯಕ್ಷ ಧ್ರುವ ಕುಲಕರ್ಣಿ ಮುಂಚೂಣಿ ಕಾರ್ಯಕರ್ತರಾದ ಸುಧೀರ್ ಕಲಶೆಟ್ಟಿ, ಗಂಗಾಧರ ಬೆನ್ನೂರ, ಸಂಜಯ್ ರೋಡಗಿ, ರಾಜ್‌ಕುಮಾರ್ ಬಿರಾದಾರ್, ಸಂತೋಷ್, ರಮೇಶ್, ಮುರಳೀಧರ, ಸಿದ್ದು ಮೊದಲಾದವರು ಹಗಲು-ರಾತ್ರಿ ಎನ್ನದೆ ಸಂಕಷ್ಟದಲ್ಲಿದ್ದವರಿಗೆ ಸಹಕರಿಸಿದ್ದಾರೆ.
ಸಹಾಯ ಹಸ್ತ : ಸಂಘದ ಸದಸ್ಯರು ಕೋವಿಡ್ ಮಾರ್ಗಸೂಚಿ ಗಳನ್ನು ಕಟ್ಟನಿಟ್ಟಾಗಿ ಪಾಲಿಸಿಕೊಂಡು ಸ್ಥಳೀಯ ಪೊಲೀಸ್ ಠಾಣೆಗಳ ಸಿಬಂದಿಗೂ ಊಟದ ವ್ಯವಸ್ಥೆಯನ್ನು ಮಾಡಿದ್ದರು. ಇವರ ಸೇವೆಯಲ್ಲಿ ಪೊಲೀಸ್ ಸಿಬಂದಿಯೂ ಕೈಜೋಡಿಸಿ ಹಲವಾರು ಕುಟುಂಬಗಳಿಗೆ ದಿನೋಪಯೋಗಿ ವಸ್ತುಗಳನ್ನೊ ಳಗೊಂಡ ಕಿಟ್‌ಗಳನ್ನು ಹಸ್ತಾಂತರಿಸಿದ್ದಾರೆ.ಕೋವಿಡ್ ಪೀಡಿತ ಕುಟುಂಬಗಳಿಗೆ ಮಾನಸಿಕವಾಗಿ ಧೈರ್ಯ ತುಂಬಿ ಅವರು ಅನುಸರಿಸಬೇಕಾದ ಮುಂಜಾಗ್ರತ ಕ್ರಮಗಳ ಬಗ್ಗೆ ಅರಿವು ಮೂಡಿಸಿ ಕೋವಿಡ್ ತಡೆಗಟ್ಟುವಲ್ಲಿ ಜಾಗೃತಿ ಮೂಡಿಸುವ ಕಾರ್ಯದಲ್ಲೂ ಸಂಸ್ಥೆಯ ಸದಸ್ಯರು ತೊಡಗಿದ್ದರು.
ಕನ್ನಡ ಸಂಘ ಪಿಂಪ್ರಿ- ಚಿಂಚ್ವಾಡ್ ಎಂದರೆ ಅದು ನಮ್ಮಲ್ಲರ ಸಂಸ್ಥೆಯಾಗಿದೆ. ಕನ್ನಡಿಗರ ಸೇವೆಗಾಗಿ ಸದಾ ಸಿದ್ಧವಾಗಿರುವ ಸಂಘವು ಕನ್ನಡಿಗರ ಕಷ್ಟ-ಸುಖಗಳಲ್ಲಿ ಭಾಗಿಯಾಗುತ್ತಿದೆ. ಅತ್ಯಂತ ಸಂಕಷ್ಟದಲ್ಲಿರುವವರಿಗೆ ಕೂಡಲೇ ಸ್ಪಂದಿಸಿ ನಮ್ಮಿಂದಾಗುವ ಸೇವಾ ಕಾರ್ಯವನ್ನು ಮಾಡುತ್ತೇವೆ. ಈ ಬಾರಿ ಅನಿರೀಕ್ಷಿತವಾಗಿ ಬಂದೊದಗಿದ ಕೋವಿಡ್ ಸಾಂಕ್ರಾಮಿಕದಿಂದಾಗಿ ಲಾಕ್‌ಡೌನ್ ಆದಾಗ ಕನ್ನಡಿಗರಿಗೆ ಬಹಳ ತೊಂದರೆಯಾಗಿದೆ. ನಮ್ಮ ಸಂಘದಿಂದ ಸಹಾಯ ಹಸ್ತ ನೀಡಲು ನಾವು ಮುಂದಾದೆವು. ನಮ್ಮ ಈ ಕಾರ್ಯಕ್ಕೆ ಸಹಕರಿಸಿದ ಎಲ್ಲ ದಾನಿಗಳ ಸಹಕಾರವನ್ನು ಮರೆಯುವಂತಿಲ್ಲ. ಕಾರ್ಯಕರ್ತರ ನಿರಂತರ ಸೇವೆಯಿಂದ ಅದೆಷ್ಟೋ ಹಸಿದವರ ಹೊಟ್ಟೆ ತುಂಬಿಸಿದ ಸಂತೃಪ್ತಿ ನಮಗಿದೆ. ಕಷ್ಟದಲ್ಲಿರುವವರಿಗೆ ಸಂಘದ ಸಹಾಯ, ಸಹಕಾರ ಸದಾ ಇರಲಿದೆ. -ಧ್ರುವ ಕುಲಕರ್ಣಿ ಅಧ್ಯಕ್ಷರು, ಕನ್ನಡ ಸಂಘ ಪಿಂಪ್ರಿ- ಚಿಂಚ್ವಾಡ್
ಆಹಾರದ ಕಿಟ್ ವಿತರಣೆ : ಕೋವಿಡ್ ಸಂಕಷ್ಟದ ಸಮಯದಲ್ಲಿ ಸಂಘದ ಸದಸ್ಯರು ಆರಂಭದಲ್ಲಿ ಸ್ವಂತ ಹಣದಿಂದಲೇ ಬಡವರಿಗಾಗಿ ಊಟದ ವ್ಯವಸ್ಥೆ ಮತ್ತು ಆಹಾರದ ಕಿಟ್‌ಗಳನ್ನು ವಿತರಿಸಿದರು. ಬಳಿಕ ದಾನಿಗಳಿಂದ ನಿಧಿ ಸಂಗ್ರಹಣೆ ಮಾಡಿ ಅದರಿಂದ ದಿನಂಪ್ರತಿ ಸುಮಾರು 450ರಿಂದ 500 ಜನರಿಗೆ ಊಟದ ವ್ಯವಸ್ಥೆ ಮಾಡುವ ಯೋಜನೆಯನ್ನು ಕಾರ್ಯಗತಗೊಳಿಸಲಾಯಿತು. ಅಲ್ಲದೆ ದವಸ-ಧಾನ್ಯ, ಅಕ್ಕಿ, ಹಿಟ್ಟು ಇನ್ನಿತರ ದಿನೋಪಯೋಗಿ ಆಹಾರ ವಸ್ತುಗಳ ಕಿಟ್‌ಗಳನ್ನು ನೂರಾರು ಬಡ ಕುಟುಂಬಗಳಿಗೆ ಸಂಘದ ವತಿಯಿಂದ ವಿತರಿಸಲಾಯಿತು.