ಜೈಪುರ: ರಾಜಸ್ಥಾನ ವಿಧಾನಸಭೆ ಚುನಾವಣೆಯಲ್ಲಿ ಮತ್ತೂಮ್ಮೆ ಕಾಂಗ್ರೆಸ್ ವಿಜಯಪತಾಕೆ ಹಾರಿಸಲು ಹೈಕ ಮಾಂಡ್ ಶತಪಥ ಹಾಕುತ್ತಿರುವ ನಡುವೆಯೇ, ಇತ್ತ ರಾಜ್ಯ ಕೈನಾಯಕರ ನಡುವಿನ ಭಿನ್ನಾಭಿಪ್ರಾಯ ತಾರಕಕ್ಕೇರಿದೆ. ಇದರ ಪ್ರತಿಫಲವಾಗಿ ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಜೂ.11ರಂದು ಹೊಸ ಪಕ್ಷವನ್ನೇ ಘೋಷಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ ಇದನ್ನು ಪೈಲಟ್ ಆಪ್ತರು ಸುಳ್ಳು ಎಂದಿದ್ದಾರೆ. ಮಾತ್ರವಲ್ಲ ಪೈಲಟ್ ಜತೆಗೆ ಕಾಂಗ್ರೆಸ್ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ದೀರ್ಘಕಾಲ ದೂರವಾಣಿಯಲ್ಲಿ ಮಾತನಾಡಿದ್ದಾರೆ. ಆದರೆ ಇದುವರೆಗೂ ಯಾವುದೇ ನಿರ್ಣಯವಾಗಿಲ್ಲ.
ಇತ್ತೀಚೆಗಷ್ಟೇ ರಾಜ್ಯದಲ್ಲಿ ಪ್ರಗತಿಶೀಲ ಕಾಂಗ್ರೆಸ್ ಹಾಗೂ ರಾಜ್ ಜನ ಸಂಘರ್ಷ ಎನ್ನುವ 2 ಹೊಸ ಪಕ್ಷಗಳನ್ನು ನೋಂದಾಯಿಸಲಾಗಿದೆ. ಈ ಪೈಕಿ ಒಂದು ಪಕ್ಷವನ್ನು ಪೈಲಟ್ ಮುನ್ನಡೆಸಲಿದ್ದಾರೆ ಎನ್ನುವ ಊಹಾಪೋಹಗಳೂ ಇವೆ. ಜೂ.11ರಂದು ಪೈಲಟ್ ಅವರ ತಂದೆಯ ಪುಣ್ಯತಿಥಿ ಇದೆ. ಆ ಕಾರ್ಯಕ್ರಮದ ಬಳಿಕ ದೌಸಾದಲ್ಲಿ ಪೈಲಟ್ ತಮ್ಮ ಹೊಸ ಪಕ್ಷವನ್ನು ಘೋಷಿಸಲಿದ್ದಾರೆ ಎನ್ನಲಾಗಿದೆ.
ಸಿಎಂ ಅಶೋಕ್ ಗೆಹ್ಲೋಟ್ ಸರಕಾರ ಪೈಲಟ್ ಅವರನ್ನು ನಡೆಸಿಕೊಂಡಿರುವ ರೀತಿ ಬಗ್ಗೆ ಅನೇಕ ಬಾರಿ ಆಕ್ಷೇಪಗಳು ವ್ಯಕ್ತವಾಗಿದ್ದಲ್ಲದೇ, ಉಭಯ ನಾಯಕರ ನಡುವಿನ ಭಿನ್ನಾಭಿಪ್ರಾಯ ಸರ್ಕಾರದಲ್ಲಿ ಒಡಕು ಮೂಡಿಸಿ, ಪೈಲಟ್ ಬಂಡಾಯ ಏಳುವಂತೆಯೂ ಮಾಡಿತ್ತು. ಆ ಬಳಿಕವೂ ಕಾಂಗ್ರೆಸ್ ನಡೆಸಿದ ಪ್ರಯತ್ನಗಳು ಸದ್ಯಕ್ಕೆ ಪೈಲಟ್ ಪಕ್ಷದಲ್ಲೇ ಉಳಿಯುವಂತೆ ಮಾಡಿತ್ತು. ಈ ಭಿನ್ನಾಭಿಪ್ರಾಯ ಮುಂದಿನ ಚುನಾವಣೆಗೆ ಅಡ್ಡಿಯಾಗದಿರಲೆಂದು ಎಐಸಿಸಿ ಅಧ್ಯಕ್ಷ ಮಲ್ಲಿ ಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಗೆಹಲೋತ್ ಹಾಗೂ ಪೈಲಟ್ ನಡುವೆ ಇತ್ತೀಚೆಗೆ ಗೌಪ್ಯ ಮಾತುಕತೆಯನ್ನೂ ನಡೆಸಿದ್ದಾರೆ ಎನ್ನಲಾಗಿದೆ. ಇದರ ನಡುವೆ ಈ ಹಿಂದಿನ ವಸುಂಧರಾ ರಾಜೆ ಸರ್ಕಾರದಲ್ಲಾದ ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆಸು ವಂತೆ ಆಗ್ರಹಿಸಿದ ಪೈಲಟ್‌ರನ್ನು ಸರಕಾರನಿರ್ಲಕ್ಷ್ಯಸಿದೆ. ಈ ಎಲ್ಲದರ ಪರಿಣಾಮ ಹೊಸ ಪಕ್ಷ ಸ್ಥಾಪನೆಗೆ ಪೈಲಟ್ ಮುಂದಾಗಿದ್ದಾರೆ ಎನ್ನಲಾಗುತ್ತಿದೆ. ಒಂದು ವೇಳೆ ಹಾಗೇನಾದರೂ ಆದಲ್ಲಿ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮತ ವಿಭಜನೆಯಾಗಲಿದೆ ಎನ್ನುವ ಮಾತು ಕೇಳಿಬಂದಿದೆ.