Advertisement
ಪತ್ನಿ ಕ್ಯಾಪ್ಟನ್ ಆಗಿ ಮೊದಲ ಬಾರಿಗೆ ವಿಮಾನ ಹಾರಾಟ ನಡೆಸಿದಾಗ ಸಾಕ್ಷಿಯಾದ ಪತಿಯೊಬ್ಬರ ಮಾತಿದು. ಇವರು ಮಂಗಳೂರು ಮೂಲದ ಅಭಿತ್ ಭಂಡಾರಿ. ಅಭಿತ್ ಕೂಡ ಗೋ ಏರ್ ನಲ್ಲಿ ಸೀನಿಯರ್ ಕ್ಯಾಪ್ಟನ್. ಇವರು ಬಂಟ್ವಾಳ ತಾಲೂಕಿನ ಸಾಲೆತ್ತೂರು ಗ್ರಾಮದ ಗಿರೀಶ್ ಭಂಡಾರಿ-ಶಾಂಭವಿಯವರ ಪುತ್ರ. ಅಭಿತ್ 2 ವರ್ಷಗಳ ಹಿಂದೆ ಪಂಜಾಬ್ ಮೂಲದ ರೊಹಿನಾ ಮಾರಿಯಾ ಅವರನ್ನು ಮದುವೆಯಾದರು. ಈಗ ರೊಹಿನಾ ಕ್ಯಾಪ್ಟನ್ ಹುದ್ದೆಗೇರಿದ್ದಾರೆ. ಅಪರೂಪದ ಪೈಲಟ್ ಜೋಡಿ ಇದು. ರೊಹಿನಾ, ಮಂಗಳೂರು ವಿಮಾನನಿಲ್ದಾಣದಿಂದಲೂ ವಿಮಾನ ಚಲಾಯಿಸುತ್ತಾರೆ.
Related Articles
ನಾವಿಬ್ಬರೂ ಮುಖ್ಯ ಪೈಲಟ್ ಆಗಿರುವುದಕ್ಕೆ ಹೆಮ್ಮೆಯಿದೆ. ಇಂಥ ಅವಕಾಶ-ಅದೃಷ್ಟ ಪಡೆದವರು ಹೆಚ್ಚು ಮಂದಿಯಿಲ್ಲ ಎಂಬುದು ನನ್ನ ಭಾವನೆ. ತಿಂಗಳಿಗೆ 20 ದಿನ ಹಾರಾಟ ನಡೆಸುವೆ. ಕೆಲವೊಮ್ಮೆ ಇಬ್ಬರೂ ಒಂದೇ ಏರ್‌ಪೋರ್ಟ್‌ಗೆ ಬಂದಿರುತ್ತೇವೆ. ಆಗ ಅಲ್ಲೇ ಸ್ವಲ್ಪ ಹೊತ್ತು ನಮ್ಮಿಬ್ಬರ ಭೇಟಿ, ಕುಶಲೋಪರಿ. ಅನೇಕ ಸಲ ನನ್ನ ಮಾರ್ಗದಲ್ಲೇ ಅವಳ ವಿಮಾನವೂ ಹಾದು ಹೋಗುತ್ತಿರುತ್ತದೆ. ಆಗ ಏರ್ ಟ್ರಾಫಿಕ್ ಕಂಟ್ರೋಲ್ ಲೈನ್‌ನಲ್ಲಿ ರೋಹಿನಾಳ ಧ್ವನಿ ಕೇಳಿಸುತ್ತದೆ. ಕೆಲವೊಮ್ಮೆ ಮೂರ್‍ನಾಲ್ಕು ದಿನ ನಮ್ಮ ಮುಖಾಮುಖೀ ಇರದು. ಅಂಥ ಸನ್ನಿವೇಶದಲ್ಲಿ ಅವಳ ಧ್ವನಿ ಕೇಳಿಸಿದಾಗ ಆಗುವ ಖುಷಿ ಅಷ್ಟಿಷ್ಟಲ್ಲ. ಆಗ ನಾನು “ಹಾಯ್ ರೊಹಿನಾ’ ಅನ್ನುತ್ತೇನೆ, ಅತ್ತಕಡೆಯಿಂದ “ಹಲೋ ಅಭಿ’ ಎನ್ನುತ್ತಾಳೆ. ಪಯಣ ಮುಂದುವರಿಯುತ್ತದೆೆ ಎಂದು ಅಭಿತ್ ತಮ್ಮ “ಆಕಾಶ ಸಂವಾದ’ದ ಬಗ್ಗೆ ವಿವರಿಸುತ್ತಾರೆ.
Advertisement
ತವರಿಗೆ ಬಂದಂತೆಮಂಗಳೂರು ಏರ್‌ಪೋರ್ಟ್‌ಗೆ ಬರುವುದೆಂದರೆ ನನ್ನ ಮನೆಗೆ ಬಂದಂತೆ. ಜತೆಗೆ ಕರಾವಳಿಯ ಸಮುದ್ರ ಕಿನಾರೆ, ಪಕ್ಕದಲ್ಲೇ ಹರಿಯುವ ನದಿಯನ್ನು ದಾಟಿ ಬೆಟ್ಟದ ಮೇಲಿರುವ ಟೇಬಲ್ ಟಾಪ್ ಏರ್‌ಪೋರ್ಟ್‌ನಲ್ಲಿ ವಿಮಾನ ಇಳಿಸುವುದೇ ಅದ್ಭುತ ಅನುಭವ. ಪೈಲಟ್ ಆಗಿ ನನ್ನ ಪಾಲಿಗೆ ಇದು ಬೆಸ್ಟ್ ಡೆಸ್ಟಿನೇಷನ್ ಎನ್ನುತ್ತಾರೆ ನೌಕಾಪಡೆಯ ನಿವೃತ್ತ ಕ್ಯಾಪ್ಟನ್ ಪುತ್ರಿ ರೊಹಿನಾ ಮಾರಿಯಾ. *ಸುರೇಶ್ ಪುದುವೆಟ್ಟು