Advertisement

ಪಿಲಿಕುಳ: ವಾರಾಂತ್ಯ ದಿನಗಳಲ್ಲಿ ಕಂಬಳ-ಪ್ರವಾಸೋದ್ಯಮಕ್ಕೆ ಮೆರುಗು

11:01 AM Nov 23, 2021 | Team Udayavani |

ಮಂಗಳೂರು: ಕರಾವಳಿಯ ಜಾನಪದ ಕ್ರೀಡೆ ಕಂಬಳಕ್ಕೆ ಪ್ರವಾಸೋದ್ಯಮದಲ್ಲಿ ಒತ್ತು ನೀಡುವ ನಿಟ್ಟಿನಲ್ಲಿ ಪಿಲಿಕುಳದಲ್ಲಿರುವ ಗುತ್ತಿನ ಮನೆಯ ಮುಂಭಾಗದ “ನೇತ್ರಾವತಿ – ಫಲ್ಗುಣಿ’ ಜೋಡುಕರೆಯಲ್ಲಿ ವಾರಾಂತ್ಯ ದಿನಗಳಲ್ಲಿ ಸೀಮಿತ ಸಂಖ್ಯೆಯ ಕೋಣಗಳೊಂದಿಗೆ ಕಂಬಳ ಪ್ರದರ್ಶನಕ್ಕೆ ಜಿಲ್ಲಾಡಳಿತ ಚಿಂತಿಸಿದೆ.

Advertisement

ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ, ಜಿಲ್ಲಾ ಕಂಬಳ ಸಮಿತಿಯ ಪ್ರತಿನಿಧಿಗಳ ಜತೆಗೆ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಈ ಬಗ್ಗೆ ಪ್ರಸ್ತಾವಿಸಿದ್ದು, ಪೂರಕ ರೂಪರೇಷೆ ಸಿದ್ಧಪಡಿಸು ಪ್ರವಾಸೋದ್ಯಮ ಇಲಾಖೆ ಹಾಗೂ ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರಕ್ಕೆ ಸೂಚಿಸಿದ್ದಾರೆ.

ಪೂರ್ವಸಿದ್ಧತೆ, ಕೋಣಗಳ ಆರೈಕೆ, ತರಬೇತಿ ಮುಂತಾದವುಗಳ ಬಗ್ಗೆ ಪ್ರವಾಸಿಗರಿಗೆ ಮಾಹಿತಿ ನೀಡುವುದೂ ಇದರಲ್ಲಿ ಒಳಗೊಂಡಿದೆ. ಕಲಾಗ್ರಾಮದ ಭಾಗವಾಗಿ ಇದನ್ನು ಜೋಡಿಸಲಾಗುತ್ತದೆ. ಪ್ರದರ್ಶನಕ್ಕೆ ಪ್ರವೇಶ ಶುಲ್ಕವನ್ನು ಸಂಗ್ರಹಿಸಲು ಉದ್ದೇಶಿಸಲಾಗಿದೆ.

ಕಂಬಳವನ್ನು ಪ್ರವಾಸೋದ್ಯಮ ಪಟ್ಟಿಯಲ್ಲಿ ಸೇರಿಸಿ ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕೆಂಬ ಬೇಡಿಕೆಗಳು ಈ ಹಿಂದೆ ವ್ಯಕ್ತವಾಗಿದ್ದವು ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷರಾಗಿರುವ ಜಿಲ್ಲಾ ಪ್ರವಾಸೋದ್ಯಮ ಸಮಿತಿ ಕಾರ್ಯೋನ್ಮುಖವಾಗಿದೆ.

ಇದನ್ನೂ ಓದಿ:ಮರೆಗುಳಿ ಕಾಯಿಲೆ ಮೂಲ ಪತ್ತೆ; ಐಐಟಿ ಮಂಡಿ ಸಂಶೋಧಕರಿಂದ ಮಹತ್ವದ ಸಂಶೋಧನೆ

Advertisement

2014ರಲ್ಲಿ ಕೊನೆಯ ಕಂಬಳ
ಪಿಲಿಕುಳದಲ್ಲಿ 2014ರಲ್ಲಿ ಕೊನೆಯ ಕಂಬಳ ನಡೆದಿತ್ತು. 85 ಜೊತೆ ಕೋಣಗಳು ಪಾಲ್ಗೊಂಡಿದ್ದವು. ಆದರೆ ಪೆಟಾ ಸಂಸ್ಥೆಯ ಕಾನೂನು ಸಮರದ ಪರಿಣಾಮ ಜಿಲ್ಲಾಡಳಿತ ಈ ಕಂಬಳವನ್ನು ಸ್ಥಗಿತಗೊಳಿಸಿತ್ತು. 2018ರ ಕಂಬಳ ಋತುವಿನಲ್ಲೂ ನಡೆಸಲು ನಿರ್ಧರಿಸಿದ್ದರೂ ಅನುದಾನ ದೊರೆಯದ್ದರಿಂದ ಕೈಬಿಡಲಾಗಿತ್ತು.

ಏಳು ವರ್ಷಗಳಿಂದ ಕಂಬಳ ನಡೆಸದೆ ಇರುವುದರಿಂದ ಕರೆಗಳಲ್ಲಿ ಹೂಳು ತುಂಬಿದೆ, ಗಿಡ-ಗಂಟಿ ಬೆಳೆದಿವೆ. ಕರೆಯ ಮರು ನಿರ್ಮಾಣ, ನೀರು ಹಾಗೂ ಇತರ ಸೌಲಭ್ಯಗಳ ವ್ಯವಸ್ಥೆ ಮುಂತಾದ ಕೆಲಸಗಳು ನಡೆಯಬೇಕಾಗಿವೆ.

ಪಿಲಿಕುಳದಲ್ಲಿ ವರ್ಷಕ್ಕೆ ಒಂದು ಬಾರಿ ಕಂಬಳ ನಡೆಸುವ ಬದಲು ಪ್ರವಾಸಿಗರಿಗೆ ಕಂಬಳ ಕ್ರೀಡೆಯ ಸಂಪೂರ್ಣ ಚಿತ್ರಣವನ್ನು ನೀಡುವ ನಿಟ್ಟಿನಲ್ಲಿ ವರ್ಷಪೂರ್ತಿ ಆಯೋಜಿಸಲು ಜಿಲ್ಲಾಡಳಿತ ಚಿಂತಿಸಿದೆ. ಕಂಬಳ ಸಮಿತಿಯಿಂದ ಪೂರಕ ಸ್ಪಂದನೆ ವ್ಯಕ್ತವಾಗಿದೆ.
– ಡಾ| ಕೆ.ವಿ. ರಾಜೇಂದ್ರ,
ದ.ಕ. ಜಿಲ್ಲಾಧಿಕಾರಿ

 

Advertisement

Udayavani is now on Telegram. Click here to join our channel and stay updated with the latest news.

Next