Advertisement

ಪಿಲಿಕುಳ ಜೈವಿಕ ಉದ್ಯಾನವನ ಹಸುರೀಕರಣ

09:54 AM Oct 09, 2017 | |

ಪಿಲಿಕುಳ: ಇಲ್ಲಿನ ಜೈವಿಕ ಉದ್ಯಾನವನದಲ್ಲಿ ಎಂಆರ್‌ಪಿಎಲ್‌ನ ಪರಿಸರ (ಎಚ್‌ಎಸ್‌ಇ) ವಿಭಾಗದ ವತಿಯಿಂದ ಅನುಷ್ಠಾನಗೊಳಿಸಲಾದ ಒಂದನೇ ಹಂತದ ಹಸುರೀಕರಣ ಕಾರ್ಯಕ್ರಮ ಉದ್ಘಾಟನೆ ಹಾಗೂ 2ನೇ ಹಂತದ ಯೋಜನೆಗೆ ರವಿವಾರ ಚಾಲನೆ ನೀಡಲಾಯಿತು.

Advertisement

ಎಂಆರ್‌ಪಿಎಲ್‌ ಹಾಗೂ ಪಿಲಿಕುಳ ಅಧಿಕಾರಿಗಳ ಸಮ್ಮುಖದಲ್ಲಿ ಸಚಿವ ಬಿ. ರಮಾನಾಥ ರೈ ಅವರು ಉದ್ಘಾಟನೆ ನೆರವೇರಿಸಿದರು.

ಯಾವುದೇ ಒಂದು ಕೈಗಾರಿಕೆ ಸ್ಥಾಪನೆಗೊಂಡ ಸಂದರ್ಭದಲ್ಲಿ ಅದರ ವ್ಯಾಪ್ತಿಯ 3ನೇ ಒಂದು ಭಾಗದಲ್ಲಿ ಹಸುರೀಕರಣ ಯೋಜನೆ ಅನುಷ್ಠಾನಗೊಳಿಸಬೇಕು ಎಂಬ ನಿಯಮವಿದ್ದು, ಅದರಂತೆ ಎಂಆರ್‌ಪಿಎಲ್‌ ವತಿಯಿಂದ ಪಿಲಿಕುಳದಲ್ಲಿ 2016ರ ಜೂನ್‌ನಲ್ಲಿ 20 ಎಕರೆ ವಿಸ್ತೀರ್ಣದಲ್ಲಿ ಹಸುರೀಕರಣ ಯೋಜನೆ ಆರಂಭಿಸಲಾಗಿತ್ತು.

ಅದಕ್ಕಾಗಿ 30 ಲಕ್ಷ ರೂ.ಅನುದಾನ ವನ್ನು ನೀಡಿ ಸಾವಿರಾರು ಸಸಿಗಳನ್ನು ನೆಡಲಾಗಿತ್ತು. ಇದರಲ್ಲಿ ಪಶ್ಚಿಮ ಘಟ್ಟಗಳ ಸಸ್ಯಗಳು, ಔಷಧೀಯ ಸಸ್ಯಗಳು, ಜಲ ಸಸ್ಯಗಳು ಹಾಗೂ ಮೇವು ಹುಲ್ಲುಗಳಿವೆ. ಪಶ್ಚಿಮ ಘಟ್ಟಗಳ ಸಸ್ಯಗಳಲ್ಲಿ 52 ಜಾತಿಯ 2 ಸಾವಿರ ಗಿಡಗಳು, ಔಷಧೀಯ ಸಸ್ಯಗಳಲ್ಲಿ 50 ಜಾತಿಯ ಸಾವಿರ ಗಿಡಗಳು, ಜಲ ಸಸ್ಯಗಳಲ್ಲಿ 10 ಜಾತಿಯ 100 ಗಿಡಗಳನ್ನು ನೆಡಲಾಗಿದೆ.

60 ಹುಲ್ಲುಗಳ ಸಾಲು 
ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಹುಲ್ಲು ತಿನ್ನುವ ನೂರಾರು ಪ್ರಾಣಿಗಳಿದ್ದು, ಯಥೇತ್ಛವಾಗಿ ಹುಲ್ಲುಗಳ ಆವಶ್ಯಕತೆ ಇರುತ್ತದೆ. ಈ ನಿಟ್ಟಿನಲ್ಲಿ ಇಲ್ಲಿ ನೆಟ್ಟಿರುವ ಸಾವಿರಾರು ಗಿಡಗಳ ಮಧ್ಯೆ ಹುಲ್ಲುಗಳ ಸಾಲನ್ನು ಬೆಳೆಸಲಾಗಿದೆ. ಇಂತಹ ಸುಮಾರು 60 ಸಾಲುಗಳಿದ್ದು, ದಿನಕ್ಕೆ ಒಂದು ಸಾಲು ಹುಲ್ಲಿನ ಆವಶ್ಯಕತೆ ಇರುತ್ತದೆ. ಒಮ್ಮೆ ಕಟಾವು ಮಾಡಿದ ಹುಲ್ಲು 40 ದಿನಗಳಲ್ಲಿ ಮತ್ತೂಮ್ಮೆ ಕಟಾವಿಗೆ ಸಿದ್ಧವಾಗುತ್ತದೆ ಎಂದು ಪಿಲಿಕುಳದ ಅಧಿಕಾರಿಗಳು ವಿವರಿಸುತ್ತಾರೆ.

Advertisement

ಚಿಟ್ಟೆ ಆಕರ್ಷಣೆಯ ಗಿಡಗಳು
ಜೈವಿಕ ಉದ್ಯಾನವನದಲ್ಲಿ ಚಿಟ್ಟೆಗಳನ್ನು ಆಕರ್ಷಿಸುವುದಕ್ಕಾಗಿ ಸುಮಾರು 150 ಜಾತಿಯ ಸಾವಿರ ಗಿಡಗಳನ್ನು ನೆಡಲಾಗಿದೆ. ಅವುಗಳಲ್ಲಿ ಹೋಸ್ಟ್‌ ಹಾಗೂ ಮಕರಂದ ಎಂಬ ಎರಡು ಪ್ರಮುಖ ವಿಧಗಳಿವೆ. ಅಗ್ನಿಮಂತ್ರ, ಕುಂಟಾಲು, ನೆಡಿಲ್‌, ಹೆಮೆಲಿಯಾ, ಕಾಡು ರುದ್ರಾಕ್ಷಿ, ಬೊಳಂಟೆ, ನೇರಳೆ ಮೊದಲಾದ ಗಿಡಗಳನ್ನು ಚಿಟ್ಟೆಗಳ ಆಕರ್ಷಣೆಗಾಗಿಯೇ ಬೆಳೆಸಲಾಗಿದೆ.

2ನೇ ಹಂತದ ಹಸುರೀಕರಣ
ಎಂಆರ್‌ಪಿಎಲ್‌ ಪ್ರಾಯೋಜಕತ್ವದ 2ನೇ ಹಂತದ ಹಸುರೀಕರಣ ಯೋಜನೆಯಲ್ಲಿ ಸುಮಾರು 30 ಎಕರೆ ವ್ಯಾಪ್ತಿಯಲ್ಲಿ 40 ಲಕ್ಷ ರೂ. ಅನುದಾನದಲ್ಲಿ ಪಶ್ಚಿಮ ಘಟ್ಟಗಳ ಸಸ್ಯಗಳನ್ನು ಬೆಳೆಸಲಾಗುತ್ತದೆ. ಜೈವಿಕ ಉದ್ಯಾನವನದ ರಸ್ತೆ ಬದಿಗಳಲ್ಲಿ 5 ಮೀ.ವ್ಯಾಪ್ತಿಯಲ್ಲಿ ಗಿಡ ನೆಡುವ ಯೋಜನೆ ಹಾಕಿಕೊಳ್ಳಲಾಗಿದೆ.

ಅಕೇಶಿಯಾ ತೆರವು ಕಾರ್ಯ
ಪಿಲಿಕುಳದಲ್ಲಿ ಆರಂಭದಲ್ಲಿ ಅಕೇಶಿಯಾ ಗಿಡಗಳನ್ನು ನೆಡಲಾಗಿದ್ದರೂ, ಅದು ಪರಿಸರಕ್ಕೆ ಹಾನಿ ಎಂಬ ಕಾರಣಕ್ಕೆ ಹಂತ ಹಂತವಾಗಿ ತೆರವುಗೊಳಿಸಲಾಗುತ್ತಿದೆ. ಇಲ್ಲಿನ ಪ್ರಾಣಿಗಳಿಗೆ ನೆರಳಿನ ಆವಶ್ಯಕತೆ ಇರುವುದರಿಂದ ಅದನ್ನು ಒಮ್ಮೆಲೆ ತೆಗೆಯುವಂತಿಲ್ಲ. ಹಿಂದೆ ನೆಟ್ಟ ಗಿಡಗಳಿಗಿಂತ ಅಧಿಕ ಗಿಡಗಳು ಈಗ ಹುಟ್ಟಿಕೊಂಡಿದ್ದು, ಅದರ ತರಗೆಲೆಗಳ
ಮೇಲೆ ನೀರು ಬಿದ್ದರೆ ಇಂಗದಂತಹ ಪರಿಸ್ಥಿತಿ ಇದೆ.

ಪ್ರಥಮ ಹಂತ ಹಸುರೀಕರಣದ ಸಂದರ್ಭದಲ್ಲೂ ಅಕೇಶಿಯಾವನ್ನು ತೆಗೆಯಲಾಗಿದೆ. ಈಗ 2ನೇ ಹಂತದಲ್ಲೂ
ರಸ್ತೆ ಬದಿಯ ಅಕೇಶಿಯಾವನ್ನು ತೆಗೆದು ಪಶ್ಚಿಮ ಘಟ್ಟದ ಗಿಡಗಳನ್ನು ನೆಡಲಾಗುತ್ತದೆ ಎಂದು ಜೈವಿಕ ಉದ್ಯಾನವನದ ನಿರ್ದೇಶಕ ಜಯಪ್ರಕಾಶ್‌ ಭಂಡಾರಿ ತಿಳಿಸುತ್ತಾರೆ. 

ಜೋಕಟ್ಟೆ: ಹಸುರೀಕರಣ?
ಎಂಆರ್‌ಪಿಎಲ್‌ ಪ್ರಾಯೋಜಕತ್ವದಲ್ಲಿ ಜೋಕಟ್ಟೆಯಲ್ಲೂ ಸುಮಾರು 27 ಎಕರೆ ವ್ಯಾಪ್ತಿಯಲ್ಲಿ ಹಸುರೀಕರಣ
ಯೋಜನೆ ಅರಂಭಿಸಲು ಮಾತುಕತೆ ನಡೆಯುತ್ತದೆ. ಜಿಲ್ಲಾಧಿಕಾರಿಗಳ ಅನುಮತಿ ಸಿಕ್ಕಿದರೆ ಅಲ್ಲೂ ಹಸುರೀ ಕರಣ
ಯೋಜನೆಯಲ್ಲಿ ಗಿಡಗಳನ್ನು ನೆಡಲಾಗುತ್ತದೆ ಎಂದು ಎಂಆರ್‌ಪಿಎಲ್‌ ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next