Advertisement

ಸ್ವಚ್ಛ ಕಾರ್ಕಳವನ್ನು ಅಣಕಿಸುತ್ತಿದೆ ಕಸದ ರಾಶಿ

11:23 PM Oct 05, 2019 | Sriram |

ಕಾರ್ಕಳ: ಎಲ್ಲೆಡೆ ಸ್ವಚ್ಛತೆಯದ್ದೇ ಮಾತು ಕೇಳಿಬರುತ್ತಿದೆ. ಅಧಿಕಾರಿಗಳೂ ಸ್ವಚ್ಛತೆಯ ಪಾಠ ಮಾಡುವುದರಲ್ಲಿ ಹಿಂದೆ ಬಿದ್ದಿಲ್ಲ. ಆದರೆ ಕಾರ್ಕಳ‌ ನಗರದ ಹೃದಯ ಭಾಗದಲ್ಲಿರುವ ಪುರಸಭಾ ಬಸ್‌ ನಿಲ್ದಾಣದ ಕಟ್ಟಡದ ಹಿಂಬದಿಯಲ್ಲಿ ಬಿದ್ದಿರುವ ರಾಶಿ ರಾಶಿ ಪ್ಲಾಸ್ಟಿಕ್‌, ಕಸ, ಗಬ್ಬು ನಾರುತ್ತಿರುವ ಕೊಳಚೆ ನೀರು ಇಡೀ ವ್ಯವಸ್ಥೆಯನ್ನೇ ಅಣಕಿಸುವಂತಿದೆ. ಪುರಸಭೆಯು ತನ್ನ ಬಗಲಲ್ಲೇ ಕಸ ತುಂಬಿಕೊಂಡು ಊರಿಡೀ ಸ್ವಚ್ಛತೆ ಕುರಿತು ಅರಿವು, ಜಾಗೃತಿ ಮೂಡಿಸುವ ಕಾರ್ಯದಲ್ಲಿ ನಿರತವಾಗಿದೆ ಎನ್ನುತ್ತಿದ್ದಾರೆ ಸ್ಥಳೀಯರು.

Advertisement

ಗಬ್ಬೆದ್ದು ನಾರುತ್ತಿದೆ ಪರಿಸರ
ಪ್ಲಾಸ್ಟಿಕ್‌, ಕಸ-ಕಡ್ಡಿ, ಇನ್ನಿತರ ತ್ಯಾಜ್ಯದಿಂದ ತುಂಬಿ ತುಳುಕುತ್ತಿದೆ ಬಸ್‌ ಹಿಂಬದಿ ಪರಿಸರ. ಗಬ್ಬುನಾತ ಬೀರುತ್ತಿರುವುದರಿಂದ ಮೂಗುಮುಚ್ಚಿಕೊಂಡೇ ಓಡಾಡಬೇಕಾದ ಅನಿವಾರ್ಯ ಸ್ಥಿತಿ ಇಲ್ಲಿನವರದ್ದು. ಕಳೆದ ಒಂದು ವರ್ಷದಿಂದ ಇದೇ ದುಃಸ್ಥಿತಿ ಎನ್ನುತ್ತಾರೆ ಸ್ಥಳೀಯರು.

ಸಾಂಕ್ರಾಮಿಕ ರೋಗ ಭೀತಿ
ಇಲ್ಲಿನ ಕೊಳಚೆ ಪರಿಸರ ದುರ್ನಾತ ಬೀರುವುದರೊಂದಿಗೆ ಸೊಳ್ಳೆಗಳ ಉತ್ಪಾದನ ಕೇಂದ್ರವಾಗಿ ಮಾರ್ಪಟ್ಟಿದೆ. ಸೊಳ್ಳೆಗಳ ಕಾಟ ವಿಪರೀತವಾಗಿದ್ದು, ಸಾಂಕ್ರಾಮಿಕ ರೋಗ ಹರಡುವ ಭೀತಿಯಿದೆ. ಹೀಗಾಗಿ ಆರೋಗ್ಯಾಧಿಕಾರಿಗಳು ಕೂಡ ಈ ಕುರಿತು ಸೂಕ್ತ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

ಕೊಳಚೆಗೆ ಮುಕ್ತಿ ನೀಡಿ
ಪುರಸಭೆ ಕಚೇರಿ ಅನತಿ ದೂರದಲ್ಲಿರುವ ಕಾರ್ಕಳ ಬಸ್‌ ನಿಲ್ದಾಣದಲ್ಲೇ ಇಂತಹ ಸ್ಥಿತಿ ಇದ್ದರೂ ಸಂಬಂಧಪಟ್ಟವರಿಗೆ ಇದು ಕಾಣಿಸದೇ ಇರುವುದು ವಿಪರ್ಯಾಸ. ಕಂಡರೂ ನಿರ್ಲಕ್ಷ್ಯ ಧೋರಣೆಯೇ ಎಂಬ ಅನುಮಾನ ಪ್ರಜ್ಞಾವಂತ ನಾಗರಿಕ ರದ್ದು. ಪುರಸಭೆಯವರು, ಆರೋಗ್ಯ ಇಲಾಖೆಯವರು ಸೇರಿದಂತೆ ಸಂಬಂಧಪಟ್ಟವರು ಇತ್ತ ಗಮನ ಹರಿಸಿ, ಕೊಳಚೆಗೆ ಮುಕ್ತಿ ನೀಡುವಂತೆ ಸ್ಥಳೀಯರು ಒತ್ತಾಯಿಸುತ್ತಿದ್ದಾರೆ.

ಕಟ್ಟುನಿಟ್ಟಿನ ಕ್ರಮ
ಸ್ವಚ್ಛತೆಗೆ ಒತ್ತು ನೀಡಲಾಗುತ್ತಿದೆ. ಸ್ವತ್ಛತೆ ಕಾಪಾಡುವಂತೆ ಸಾರ್ವಜನಿಕರಲ್ಲಿ, ಹೊಟೇಲ್‌, ಅಂಗಡಿ ಮಾಲಕರಲ್ಲಿ ವಿನಂತಿ ಮಾಡಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಸ್ವಚ್ಛತೆ ಕುರಿತು ನಿರ್ಲಕ್ಷ್ಯ ವಹಿಸಿದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.
-ಸುಮಾಕೇಶವ್‌, ಪುರಸಭಾ ಸದಸ್ಯೆ

Advertisement

ಬಸ್‌ ನಿಲ್ದಾಣದ ಪರಿಸ್ಥಿತಿ ಶೋಚನೀಯ
ಸುಂದರ ಕಾರ್ಕಳ ಪರಿಕಲ್ಪನೆಯನ್ನೇ ನಾಚಿಸುವಂತಿದೆ ನಗರದ ಬಸ್‌ ನಿಲ್ದಾಣ. ಬಸ್‌ ನಿಲುಗಡೆಗಾಗಿ ಕಾದಿರಿಸಿದ ಸ್ಥಳದಲ್ಲಿ ಬೈಕ್‌ ಮತ್ತು ಖಾಸಗಿ ವಾಹನಗಳನ್ನೂ ಪಾರ್ಕಿಂಗ್‌ ಮಾಡಲಾಗುತ್ತಿದೆ. ಹೊಟೇಲಿನ ಕೊಳಚೆ ನೀರು ಬಸ್‌ ನಿಲ್ದಾಣದ ಮುಂಭಾಗದಲ್ಲೇ ಹರಿಯುತ್ತಿದೆ. ಸಮರ್ಪಕವಾದ ಚರಂಡಿ ವ್ಯವಸ್ಥೆಯಿಲ್ಲದಿರುವುದರಿಂದ ಬಸ್‌ ನಿಲ್ದಾಣ ಮತ್ತು ಸುತ್ತುಮುತ್ತ ಮಳೆಗಾಲದಲ್ಲಿ ಕೆಸರು ತುಂಬಿದರೆ, ಬೇಸಗೆಯಲ್ಲಿ ಧೂಳಿನದ್ದೇ ಗೋಳು. ಇದರಿಂದ ಪ್ರಯಾಣಿಕರಿಗೆ ನಿತ್ಯ ಕಿರಿಕಿರಿಯೊಂದಿಗೆ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next