Advertisement

ಚರ್ಚೆಗೆ ಕಾರಣವಾದ ಕೊರಗರ ಕಾಲನಿ ರಸ್ತೆ 

02:10 PM Jul 07, 2018 | Team Udayavani |

ಪುಂಜಾಲಕಟ್ಟೆ : ದುಗಮಾರು ಗುಡ್ಡ ಕೊರಗರ ಕಾಲನಿ ರಸ್ತೆ ಕಾಂಕ್ರೀಟ್‌ ಕಾಮಗಾರಿಗೆ ಬಿಡುಗಡೆಯಾದ ಅನುದಾನವನ್ನು ಬೇರೆ ಕಡೆಗೆ ವರ್ಗಾಯಿಸಲಾಗಿದೆ ಎಂಬ ವಿಚಾರ ಬಿಸಿ ಬಿಸಿ ಚರ್ಚೆಗೆ ಕಾರಣವಾಗಿ ಈ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿದ್ದು, ಇದರ ತನಿಖೆಯಾಗಬೇಕು ಎಂಬ ಕೂಗು ಗ್ರಾಮಸಭೆಯಲ್ಲಿ ಕೇಳಿಬಂತು.

Advertisement

ಪುಂಜಾಲಕಟ್ಟೆ ನಂದಗೋಕುಲ ಸಭಾಂಗಣದಲ್ಲಿ ಶುಕ್ರವಾರ ಜರಗಿದ ಪಿಲಾತಬೆಟ್ಟು ಗ್ರಾ.ಪಂ.ನ 2018-19ನೇ ಸಾಲಿನ ಪ್ರಥಮ ಹಂತದ ಗ್ರಾಮಸಭೆಯಲ್ಲಿ ಕೊರಗರ ಕಾಲನಿ ರಸ್ತೆ ಬಗ್ಗೆ ವಾದ ನಡೆಯಿತು. ಜಿ.ಪಂ. ಸದಸ್ಯ ಎಂ. ತುಂಗಪ್ಪ ಬಂಗೇರ ಅವರು ಈ ಬಗ್ಗೆ ತನಿಖೆಯಾಗಬೇಕು ಎಂದು ಆಗ್ರಹಿಸಿದಾಗ ಗ್ರಾ.ಪಂ. ಅಧ್ಯಕ್ಷರೂ ಧ್ವನಿಗೂಡಿಸಿದ ಪರಿಣಾಮ ಚರ್ಚೆಗೆ ಗ್ರಾಸವಾಯಿತು.

ಜಿ.ಪಂ. ಎಂಜಿನಿಯರಿಂಗ್‌ ವಿಭಾಗದ ಕಿರಿಯ ಅಭಿಯಂತ ಕೃಷ್ಣ ಮಾನೆ ಅವರು ಇಲಾಖಾ ಮಾಹಿತಿ ನೀಡುತ್ತಿದ್ದಾಗ ಕಾಂಕ್ರೀಟ್‌ ರಸ್ತೆ ಬದಿ ಚರಂಡಿ ವ್ಯವಸ್ಥೆ ಸಮರ್ಪಕವಾಗಿಲ್ಲ ಎಂದು ಮೋಹನ ಸಾಲ್ಯಾನ್‌ ಆರೋಪಿಸಿದರು. ಈ ಸಂದರ್ಭ ಕೊರಗರ ಕಾಲನಿಗೆ ಈ ಮೊದಲೇ ರಸ್ತೆ ಕಾಮಗಾರಿ ನಡೆದಿದ್ದು, ಹಿಂದಿನ ಶಾಸಕರ ಅವಧಿಯಲ್ಲಿ ಸಮಾಜಕಲ್ಯಾಣ ಇಲಾಖೆಯಿಂದ ಬಿಡುಗಡೆಯಾದ ಅನುದಾನ ಬೇರೆ ಕಡೆ ವರ್ಗಾಯಿಸಲಾಗಿದೆ ಎಂದು ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಹೇಳಿದರು. ಈ ಅನುದಾನದಲ್ಲಿ ನಿನ್ಯಾರು ಎಸ್‌ಸಿ ಕಾಲನಿಗೆ ರಸ್ತೆ ನಿರ್ಮಿಸಿರುವುದಾಗಿ ಮೋಹನ ಸಾಲ್ಯಾನ್‌ ಉತ್ತರಿಸಿದರು. ಗ್ರಾ.ಪಂ.ಗೆ ಮಾಹಿತಿ ಇಲ್ಲದೆ ಈ ಕಾಮಗಾರಿ ನಡೆದಿದ್ದು, ಇದರ ತನಿಖೆಯಾಗಬೇಕು ಎಂದು ತುಂಗಪ್ಪ ಬಂಗೇರ ಹೇಳಿದಾಗ ಚರ್ಚೆ ನಡೆಯಿತು. ಕೊನೆಗೆ ತನಿಖೆ ನಡೆಸಲು ಸಭೆಯಲ್ಲಿ ನಿರ್ಣಯಿಸಲಾಯಿತು.

ಅಧ್ಯಕ್ಷತೆ ವಹಿಸಿದ್ದ ಗ್ರಾ.ಪಂ. ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಮಾತನಾಡಿ, ಗ್ರಾಮಸ್ಥರು ಗ್ರಾಮಸಭೆಗಳಲ್ಲಿ ಭಾಗವಹಿಸಿ ಸೂಕ್ತ ಸಲಹೆ, ಸೂಚನೆಗಳನ್ನು ನೀಡುವುದರ ಮೂಲಕ ಗ್ರಾಮದ ಅಭಿವೃದ್ಧಿಗೆ ಸಹಕರಿಸಬೇಕು ಎಂದರು. ಪಶು ಸಂಗೋಪನ ಇಲಾಖೆಯ ಪಶು ವೈದ್ಯಾಧಿಕಾರಿ ಡಾ| ಅಶೋಕ್‌ ಮಾರ್ಗದರ್ಶಿ ಅಧಿಕಾರಿಯಾಗಿ ಸಭೆ ನಿರ್ವಹಿಸಿ ಇಲಾಖಾ ಮಾಹಿತಿ ನೀಡಿದರು.

ಪ್ರಾಥಮಿಕ ಆರೋಗ್ಯ ಕೇಂದ್ರ
ಪರಿಸರದ ಜನರ ಅಗತ್ಯತೆಗೆ ಅನುಗುಣವಾಗಿ ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಲು ಪತ್ರ ಮುಖೇನ ವಿನಂತಿಸಲು ತುಂಗಪ್ಪ ಬಂಗೇರ ಸೂಚಿಸಿದರು. ಜಿ.ಪಂ.ನಿಂದ ದೊರಕುವ ಅನುದಾನಗಳನ್ನು ಗ್ರಾ.ಪಂ. ವ್ಯಾಪ್ತಿಯಲ್ಲಿ ವಿನಿಯೋಗಿಸಲು ಒದಗಿಸಲು ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದರು.

Advertisement

ಸಾಂಕ್ರಾಮಿಕ ರೋಗ
ಪುಂಜಾಲಕಟ್ಟೆ ಪ್ರಾ.ಆ. ಕೇಂದ್ರ ಆಯುಷ್‌ ವೈದ್ಯಾಧಿಕಾರಿ ಡಾ| ಸೋಹನ್‌ ಕುಮಾರ್‌ ಎನ್‌. ಮಾಹಿತಿ ನೀಡಿ, ಮಳೆಗಾಲದ ಸಾಂಕ್ರಾಮಿಕ ರೋಗಗಳು ಬಾರದಂತೆ ಮುನ್ನೆಚ್ಚರಿಕೆ ವಹಿಸಿಕೊಳ್ಳಬೇಕು. ಸಕಾಲದಲ್ಲಿ ಸರಿಯಾದ ಔಷಧ ಪಡೆದುಕೊಳ್ಳಬೇಕು ಎಂದು ಹೇಳಿದರು. ಗ್ರಾಮಸ್ಥರ ಪರವಾಗಿ ರಾಜೇಂದ್ರ ಕೆ.ವಿ., ಮೋಹನ್‌ ಸಾಲ್ಯಾನ್‌, ವಿಕ್ಟರ್‌ ಡಿ’ಸೋಜಾ, ಪುಷ್ಪರಾಜ ಶೆಟ್ಟಿ ಅವರು ಅಭಿವೃದ್ಧಿ ಕಾರ್ಯಗಳ ವಿವರ ಕೇಳಿದರು.

ವೇಣೂರು ಉಪ ವಲಯ ಅರಣ್ಯಾಧಿಕಾರಿ ಸುನಿಲ್‌ ಕುಮಾರ್‌, ಬಂಟ್ವಾಳ ಕೃಷಿ ಅಧಿಕಾರಿ ನಾರಾಯಣ ನಾಯ್ಕ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೇಲ್ವಿಚಾರಕಿ ಸಿಂಧೂ ಕೆ.ವಿ., ಕಂದಾಯ ಇಲಾಖೆಯ ರಾಜು, ವಗ್ಗ ಮೆಸ್ಕಾಂ ಎಂಜಿನಿಯರ್‌ ಟಿ.ಎನ್‌. ರಂಗಸ್ವಾಮಿ ಇಲಾಖಾ ಮಾಹಿತಿ ನೀಡಿದರು.

ಗ್ರಾ.ಪಂ. ಉಪಾಧ್ಯಕ್ಷೆ ಲಕ್ಷ್ಮೀ ಜೆ. ಬಂಗೇರ, ತಾ.ಪಂ. ಸದಸ್ಯ ರಮೇಶ್‌ ಪೂಜಾರಿ, ಗ್ರಾ.ಪಂ. ಸದಸ್ಯರಾದ ಲಕ್ಷ್ಮೀನಾರಾಯಣ ಹೆಗ್ಡೆ, ಯೋಗೇಂದ್ರ, ಸರೋಜಾ ಡಿ. ಶೆಟ್ಟಿ, ಸೀತಾ, ವಸಂತಿ, ಸುಮಿತ್ರಾ, ಅಂಗನವಾಡಿ ಕಾರ್ಯಕರ್ತೆಯರು, ಪಂ. ಸಿಬಂದಿ ವರ್ಗ ಉಪಸ್ಥಿತರಿದ್ದರು.

ಸಮ್ಮಾನ
ಈ ಸಂದರ್ಭ ಕಳೆದ 28 ವರ್ಷಗಳಿಂದ ನೀರು ಬಿಡುವ ಕಾರ್ಯ ನಡೆಸುತ್ತಿದ್ದ ಲೀಯೋ ಪಿಂಟೊ ಅವರು ನಿವೃತ್ತಿ ಹೊಂದಿದ ಪ್ರಯುಕ್ತ ಅವರನ್ನು ಗ್ರಾ.ಪಂ. ವತಿಯಿಂದ ಸಮ್ಮಾನಿಸಲಾಯಿತು. ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ರಾಜಶೇಖರ ರೈ ಸ್ವಾಗತಿಸಿ, ಲೆಕ್ಕ ಸಹಾಯಕ ಬಾಲಕೃಷ್ಣ ಪೂಜಾರಿ ವರದಿ ಮಂಡಿಸಿದರು. ಸಿಬಂದಿ ಶೀನ ಲೆಕ್ಕ ಪತ್ರ ಮಂಡಿಸಿದರು. ಕಾರ್ಯದರ್ಶಿ ಜೋಯೆಲ್‌ ಪ್ರಶಾಂತ್‌ ಫೆಲೆರೋ ವಂದಿಸಿದರು.

ಅಂಗನವಾಡಿ ಕಾಮಗಾರಿ ನಿರ್ವಹಣೆ ಅಸಮರ್ಪಕ
ಪುಂಜಾಲಕಟ್ಟೆ ಅಂಗನವಾಡಿಯ ನೂತನ ಕಟ್ಟಡದ ಕಾಮಗಾರಿ ನಡೆದಿದ್ದು, ಸಮರ್ಪಕವಾಗಿ ನಿರ್ವಹಣೆಯಾಗಿಲ್ಲ, ಮೂರ್ಜೆ ಅಂಗನವಾಡಿ ಛಾವಣಿ ಸೋರುತ್ತಿದೆ ಎಂಬ ಆರೋಪ ಸಭೆಯಲ್ಲಿ ಕೇಳಿಬಂತು. ಈ ಬಗ್ಗೆ ಪರಿಶೀಲಿಸುವುದಾಗಿ ಎಂಜಿನಿಯರ್‌ ತಿಳಿಸಿದರು. ವಿದ್ಯುತ್‌ ಕಂಬಗಳ ಗುಣಮಟ್ಟ ಚೆನ್ನಾಗಿಲ್ಲ, ಅವಧಿ ಮೀರಿದ ಕಂಬಗಳನ್ನು ತೆರವುಗೊಳಿಸಬೇಕು ಎಂದು ಗ್ರಾಮಸ್ಥರು ಸಲಹೆ ನೀಡಿದರು. ಗ್ರಾಮಸಭೆಗೆ ಗ್ರಾಮಸ್ಥರ ಹಾಜರಾತಿ ಕೊರತೆ ಬಗ್ಗೆ ಗಮನ ಸೆಳೆಯಲಾಯಿತು. ಅನಗತ್ಯ ಬೀದಿ ದೀಪಗಳ ಅಳವಡಿಕೆ ಬಗ್ಗೆ ಆಕ್ಷೇಪ ವ್ಯಕ್ತವಾಯಿತು. ಅಗತ್ಯ ಇರುವಲ್ಲಿ ತಿಳಿಸಿದಲ್ಲಿ ಅಳವಡಿಸುವುದಾಗಿ ಅಧ್ಯಕ್ಷರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next