ಶಿರ್ವ: ಕರ್ನಾಟಕ ಅರಣ್ಯ ಇಲಾಖೆ, ಕುಂದಾಪುರ ವಿಭಾಗ, ಉಡುಪಿ ವಲಯದ ಹಸಿರು ಕರ್ನಾಟಕ ಅಭಿಯಾನದಡಿ ನೀರಿಗಾಗಿ ಅರಣ್ಯ ಯೋಜನೆ ಕಾರ್ಯಕ್ರಮದನ್ವಯ, ಗ್ರಾಮ ಅರಣ್ಯ ಸಮಿತಿ ಪಿಲಾರು-ಶಿರ್ವ ಹಾಗೂ ಸಾರ್ವಜನಿಕರ ಸಹಕಾರದೊಂದಿಗೆ ಪಿಲಾರು ಕಾನ ಶ್ರೀ ಮಹಾಲಿಂಗೇಶ್ವರ ದೇವರ ಸುರಕ್ಷಿತ ಅರಣ್ಯದಲ್ಲಿ ವನಮಹೋತ್ಸವ ಮತ್ತು ಬೀಜದುಂಡೆ ಬಿತ್ತನೆ ಅಭಿಯಾನ ಕಾರ್ಯಕ್ರಮಕ್ಕೆ ಜೂ. 10 ರಂದು ಚಾಲನೆ ನೀಡಲಾಯಿತು.
ಶಿರ್ವ ಹಿಂದೂ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕವೃಂದ ಭಾಗವಹಿಸಿ ಕಾಡಿನಲ್ಲಿ ವನಮಹೋತ್ಸವ ಮತ್ತು ಬೀಜಡುಂಡೆ ಬಿತ್ತನೆ ಕಾರ್ಯ ನೆರವೇರಿಸಿದರು.
ಅರಣ್ಯ ಇಲಾಖೆಯ ಉಡುಪಿ ವಲಯ ಅರಣ್ಯಾಧಿಕಾರಿ ಸುಬ್ರಹ್ಮಣ್ಯ ಆಚಾರ್ಯ ವಿದ್ಯಾಥಿಗಳಿಗೆ ಪರಿಸರ ಸಂರಕ್ಷಣೆಯ ಬಗ್ಗೆ ಮಾಹಿತಿ ನೀಡಿ ಸುಮಾರು 350 ಎಕ್ರೆ ವಿಸ್ತೀರ್ಣವಿರುವ ದೇವರ ಕಾಡು ಎಂದು ಪ್ರಸಿದ್ಧಿ ಪಡೆದ ಪಿಲಾರುಕಾನ ಅರಣ್ಯ ಪ್ರದೇಶದ ನಡುವೆ ಹಣ್ಣಿನ ಮರಗಿಡಗಳನ್ನು ಬೆಳೆಸುವುದರಿಂದ ಪ್ರಾಣಿ ಪಕ್ಷಿಗಳಿಗೆ ಆಹಾರಕ್ಕಾಗಿ ಉಪಯೋಗವಾಗುವುದಲ್ಲದೆ, ಕಾಡು ಪ್ರಾಣಿಗಳಿಂದ ಗ್ರಾಮಸ್ಥರಿಗೆ ಆಗುವ ಉಪಟಳಕ್ಕೆ ಕಡಿವಾಣ ಹಾಕಿದಂತಾಗುತ್ತದೆ . ಸಾರ್ವಜನಿಕರು ಪರಿಸರವನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆಯೊಂದಿಗೆ ಸಹಕರಿಸಬೇಕೆಂದು ಹೇಳಿದರು.
ಕುಂದಾಪುರ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ವಿ.ಆಶಿಷ್ ರೆಡ್ಡಿ, ಉಡುಪಿ ವಲಯ ಅರಣ್ಯಾಧಿಕಾರಿ ಸುಬ್ರಹ್ಮಣ್ಯ ಆಚಾರ್ಯ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕ್ಲಿಫರ್ಡ್ ಲೋಬೋ ಅವರ ಮಾರ್ಗದರ್ಶನದಲ್ಲಿ ಜೀವನ್‌ದಾಸ್ ಶೆಟ್ಟಿ ನೇತೃತ್ವದಲ್ಲಿ ಅರಣ್ಯ ಇಲಾಖೆ ಬೀಜದುಂಡೆ ಬಿತ್ತನೆ ಅಭಿಯಾನ ಹಮ್ಮಿಕೊಂಡಿತ್ತು.
ಕಾರ್ಯಕ್ರಮದಲ್ಲಿ ಪಿಲಾರುಕಾನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅರ್ಚಕ ಶ್ರೀನಿವಾಸ ಭಟ್, ಶಿರ್ವದ ಉದ್ಯಮಿಗಳಾದ ರತನ್ ಶೆಟ್ಟಿ, ಉಸ್ಮಾನ್ ಇಬ್ಯಾಹಿಂ, ಗ್ರಾಮ ಅರಣ್ಯ ಸಮಿತಿಯ ಪದಾಧಿಕಾರಿಗಳು ಹಾಗೂ ಸದಸ್ಯರು, ಅರಣ್ಯ ರಕ್ಷಕರಾದ ಚರಣ್ ಜೋಗಿ ಅಭಿಲಾಷ್, ಮಂಜುನಾಥ, ಗ್ರಾಮಸ್ಥರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳ ಸಹಕಾರದೊಂದಿಗೆ ಪಿಲಾರು ಮಹಾಲಿಂಗೇಶ್ವರ ದೇವರ ಕಾಡಿನಲ್ಲಿ ಮುರಿಯ, ಹಲಸು, ಬನ್ನೇರಳೆ, ಮಾವಿನ ಗಿಡಗಳನ್ನು ನೆಡಲಾಯಿತು. ಹಲಸು ಮತ್ತು ಮಾವಿನ ಸುಮಾರು 500 ಬೀಜದುಂಡೆಗಳನ್ನು ಕಾಡಿನಲ್ಲಿ ಬಿತ್ತನೆ ಮಾಡಲಾಯಿತು. ಪಡುಬಿದ್ರಿ ಉಪವಲಯ ಅರಣ್ಯಾಧಿಕಾರಿ ಜೀವನ್‌ದಾಸ್ ಶೆಟ್ಟಿ ಸ್ವಾಗತಿಸಿ, ವಂದಿಸಿದರು.