ಉಳ್ಳಾಲ: ಸಾರ್ವಜನಿಕ ಸಾರಿಗೆ ಕ್ಷೇತ್ರದಲ್ಲಿ ಮಹಿಳೆ ಯರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಚಾಲನ ತರಬೇತಿ ನೀಡ ಲಾಗುವುದಲ್ಲದೆ ಅವರನ್ನು ಈ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ನಿಟ್ಟಿನಲ್ಲಿ ರಾಜ್ಯ ಸರಕಾರ ಮುಂದಿನ ಬಜೆಟ್‌ನಲ್ಲಿ ಹೊಸ ಯೋಜನೆ ಘೋಷಿಸಲಿದೆ ಎಂದು ಸಾರಿಗೆ ಸಚಿವ ಎಚ್.ಎಂ. ರೇವಣ್ಣ ತಿಳಿಸಿದರು.
ಪಜೀರು ಗ್ರಾಮದ ಕಂಬಪದವು ಕೆಐಎಡಿಬಿ ಭೂಪ್ರದೇಶ ದಲ್ಲಿ 15 ಕೋ.ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಭಾರೀ ವಾಹನ ಚಾಲನಾ ತರಬೇತಿ ಕೇಂದ್ರಕ್ಕೆ ಶನಿವಾರ ಶಂಕುಸ್ಥಾಪನೆಗೈದು ಅವರು ಮಾತನಾಡಿದರು.
ವಿದೇಶಗಳಲ್ಲಿ ಮಹಿಳೆಯರು ಸಾರ್ವಜನಿಕ ಸಾರಿಗೆ ವ್ಯವಸ್ಥೆ ಯಲ್ಲಿ ತೊಡಗಿಸಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಕರ್ನಾಟಕದ ಸದೃಢ ಮಹಿಳೆಯರನ್ನು ಚಾಲನ ವೃತ್ತಿಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸಾರಿಗೆ ಇಲಾಖೆ ಯೋಜನೆ ರೂಪಿಸಲಿದ್ದು, ಇದಕ್ಕೆ ಅನುದಾನವನ್ನು ಮೀಸಲಿಡಲಾಗುವುದು ಎಂದರು.
ರೈತ ಸಾರಥಿಗೆ 2 ಕೋಟಿ ರೂ.: ರಾಜ್ಯದಲ್ಲಿ ಟ್ರ್ಯಾಕ್ಟರ್ ಚಾಲನೆ ಮಾಡುವ 5 ಲಕ್ಷಕ್ಕೂ ಅಧಿಕ ರೈತರಿದ್ದು ಅವರಲ್ಲಿ ಕೇವಲ 3 ಲಕ್ಷ ರೈತರು ಮಾತ್ರ ಚಾಲನ ಪರವಾನಿಗೆ ಹೊಂದಿ ದ್ದಾರೆ. ಈ ನಿಟ್ಟಿನಲ್ಲಿ ರೈತಸಾರಥಿ ಯೋಜನೆಯಡಿ ರೈತರಿಗೆ ಚಾಲನಾ ತರಬೇತಿ ನೀಡಿ ಪರವಾನಿಗೆ ನೀಡಲು 2 ಕೋ.ರೂ. ಮೀಸಲಿರಿಸಲಾಗಿದೆ ಎಂದ ಅವರು, ಪಜೀರಿನಲ್ಲಿ ಸ್ಥಾಪನೆ ಗೊಳ್ಳಲಿರುವ ಭಾರೀ ವಾಹನ ಚಾಲನಾ ತರಬೇತಿ ಕೇಂದ್ರ ರಾಜ್ಯದ ಮೂರನೇ ಕೇಂದ್ರವಾಗಿದೆ, ಜಿಲ್ಲೆಯಲ್ಲಿ ಸಾರಿಗೆ ಇಲಾಖೆ ಅಭಿವೃದ್ಧಿಗೆ ವಿವಿಧ ಯೋಜನೆಗಳ ಮೂಲಕ 44 ಕೋ.ರೂ. ಮೀಸಲಿಟ್ಟಿದ್ದು, ಮುಂದೆ ಈ ಪ್ರದೇಶದಲ್ಲಿ ವಿವಿಧ ಯೋಜನೆ ಅಭಿವೃದ್ಧಿಪಡಿಸಲಾಗುವುದು ಎಂದರು.
ಬಂಟ್ವಾಳದಲ್ಲಿ ನೂತನ ಆರ್‌ಟಿಒ ಕಚೇರಿ : ಸಚಿವ ಬಿ. ರಮಾನಾಥ ರೈ ಮಾತನಾಡಿ ದ.ಕ. ಜಿಲ್ಲೆಯಲ್ಲಿ ಬಹಳಷ್ಟು ಖಾಸಗಿ ವಾಹನಗಳು ಇರುವ ಕಾರಣ ಈ ಪ್ರದೇಶಕ್ಕೆ ಭಾರೀ ವಾಹನ ಚಾಲನ ತರಬೇತಿ ಕೇಂದ್ರ ಅಗತ್ಯವಿತ್ತು. ಬಂಟ್ವಾಳದಲ್ಲಿ ಆರ್‌ಟಿಒ ಕಚೇರಿ ಆರಂಭಿಸಲು ಹಣಕಾಸು ಇಲಾಖೆಯಿಂದ ಅನುಮೋದನೆ ದೊರಕಿದೆ. ತಿಂಗಳ ಅಂತ್ಯ ದಲ್ಲಿ ನೂತನ ಕಚೇರಿ ಉದ್ಘಾಟನೆಯಾಗಲಿದೆ ಎಂದರು.
ಸಚಿವ ಯು.ಟಿ. ಖಾದರ್ ಅಧ್ಯಕ್ಷತೆ ವಹಿಸಿ ಭಾರೀ ವಾಹನ ಚಾಲನ ತರಬೇತಿ ಕೇಂದ್ರ ನಿರ್ಮಾಣ ಮುಡಿಪು ಹಾಗೂ ಸುತ್ತಮುತ್ತಲಿನ ಪ್ರದೇಶ ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಪೂರಕವಾಗಲಿದೆ ಎಂದರು.
ಸಾಂಕೇತಿಕವಾಗಿ ರೈತರಿಗೆ ಟ್ರ್ಯಾಕ್ಟರ್ ಚಾಲನ ಪರವಾನಿಗೆ ಯನ್ನು ಸಚಿವ ರೇವಣ್ಣ ವಿತರಿಸಿದರು. ಮಮತಾ ಡಿ.ಎಸ್.
ಗಟ್ಟಿ, ಬಿ.ಎಚ್. ಖಾದರ್, ಎ.ಸಿ. ಭಂಡಾರಿ, ಮುಹಮ್ಮದ್ ಮೋನು, ಸೀತಾರಾಮ ಶೆಟ್ಟಿ ಪಜೀರು, ನವೀನ್ ಪಾದಲ್ಪಾಡಿ, ಹೈದರ್ ಕೈರಂಗಳ, ಟಿ.ಕೆ. ಸುಧೀರ್, ರಮೇಶ್ ಶೆಟ್ಟಿ ಬೋಳಿಯಾರು, ಸಂತೋಷ್ ಕುಮಾರ್ ಶೆಟ್ಟಿ ಅಸೈಗೋಳಿ, ಚಂದ್ರಹಾಸ ಕರ್ಕೇರ, ಶೌಕತ್ ಆಲಿ, ಮಹಮ್ಮದ್ ಅಸೈ, ರಝಾಕ್ ಕುಕ್ಕಾಜೆ, ಎನ್.ಎಸ್. ಕರೀಂ, ಉಮ್ಮರ್ ಫಜೀರ್, ವರ್ಣೇಕರ್ ಉಪಸ್ಥಿತರಿದ್ದರು. ಕ.ರಾ.ರ.ಸಾ.ಸಂ. ಆಯುಕ್ತ ಬಿ. ದಯಾನಂದ ಸ್ವಾಗತಿಸಿ, ಪ್ರಸ್ತಾವಿಸಿದರು. ಶಿವರಾಜ್ ಪಟೇಲ್ ವಂದಿಸಿದರು. ತಿಪ್ಪೆಸ್ವಾಮಿ ನಿರ್ವಹಿಸಿದರು.