“ಪಾರಿವಾಳ ಮತ್ತು ಪಾರಿಜಾತ ನಡುವಿನ ಕಥೆಯಿದು …’
– ಹೀಗೆ ಹೇಳಿ ಪತ್ರಕರ್ತರ ಮುಖ ನೋಡಿದರು ಸುನಿ. ಸಣ್ಣ ಜಾತ್ರೆಯನ್ನು ನೆನಪಿಸುವಷ್ಟು ಜನ ಸೇರಿದ್ದರಿಂದ ತಾನು ಮಾತನಾಡಿದ್ದು, ಪತ್ರಕರ್ತರಿಗೆ ಕೇಳಿಸಿತೋ, ಇಲ್ಲವೋ ಎಂಬ ಕನ್‌ಫ್ಯೂಶನ್ ಸುನಿಗಿತ್ತು. ಹಾಗಾಗಿ, ಒಮ್ಮೆ ಮೈಕ್‌ನಲ್ಲಿ, ಇನ್ನೊಮ್ಮೆ ಮೈಕ್ ಕೆಳಗಿಡುತ್ತಲೇ ತಮ್ಮ ಹೊಸ ಸಿನಿಮಾದ ವಿವರ ಕೊಟ್ಟರು ಸುನಿ. ಸುನಿ ವಿವರ ಕೊಟ್ಟಿದ್ದು, “ಬಜಾರ್’ ಚಿತ್ರದ ಬಗ್ಗೆ. ಇದು ಸುನಿ ನಿರ್ದೇಶನದ ಹೊಸ ಸಿನಿಮಾ. “ಚಮಕ್’ ಬಿಡುಗಡೆಯಾಗಿ ಎರಡು ವಾರ ಪೂರೈಸುವಷ್ಟರಲ್ಲಿ ಸುನಿ ತಮ್ಮ ಹೊಸ ಸಿನಿಮಾಕ್ಕೆ ಮುಹೂರ್ತ ಮಾಡಿದ್ದಾರೆ. “ಬಜಾರ್’ ಮೂಲಕ ಸುನಿ ಹೊಸ ಹುಡುಗ ಧನ್‌ವೀರ್‌ನನ್ನು ಪರಿಚಯಿಸುತ್ತಿದ್ದಾರೆ. ಧನ್‌ವೀರ್‌ಗೆ ಅದಿತಿ ಪ್ರಭುದೇವ ನಾಯಕಿ. ತಮ್ಮ ಮಗನಿಗಾಗಿ ತಿಮ್ಮೇಗೌಡ ಅವರು “ಬಜಾರ್’ ನಿರ್ಮಿಸುತ್ತಿದ್ದಾರೆ.
ಅಂದಹಾಗೆ, “ಬಜಾರ್’ನಲ್ಲಿ ಸುನಿ ಏನು ಹೇಳಲು ಹೊರಟಿದ್ದಾರೆಂದು ನೀವು ಕೇಳಬಹುದು. ಇಲ್ಲಿ ಲವ್‌ಸ್ಟೋರಿ ಜೊತೆಗೆ ಪಾರಿವಾಳ ರೇಸ್ ಕೂಡಾ ಈ ಚಿತ್ರದ ಹೈಲೈಟ್. ಪಾರಿವಾಳ ರೇಸ್ ಅನ್ನು ಮೂಲವಾಗಿಟ್ಟುಕೊಂಡು “ಬಜಾರ್’ ಚಿತ್ರದ ಕಥೆ ಸಾಗುತ್ತದೆ. “ಬಜಾರ್’ಗೆ ಎಂ.ಎಲ್. ಪ್ರಸನ್ನ ಅವರ ಕಥೆ ಇದ್ದು, ಶ್ರೀಕಾಂತ್ ಅವರ ಸಂಭಾಷಣೆ ಇದೆ. ಶಿವಧ್ವಜ್ ಈ ಚಿತ್ರದ ಪ್ರೊಡಕ್ಷನ್ ಡಿಸೈನರ್.
“ಪ್ರಸನ್ನ ಅವರ ಕಥೆ ತುಂಬಾ ಚೆನ್ನಾಗಿದೆ. ಇಲ್ಲಿ ಎಲ್ಲಾ ಅಂಶಗಳು ಕೂಡಿವೆ. ಕಮರ್ಷಿಯಲ್ ಆಗಿ ಏನೇನು ಬೇಕೋ, ಅವೆಲ್ಲವನ್ನು ಸೇರಿಸಿದ್ದೇವೆ. ಮುಖ್ಯವಾಗಿ ಈ ಸಿನಿಮಾ ಪಾರಿವಾಳ ರೇಸ್ ಜೊತೆಗೆ ಸಾಗುತ್ತದೆ. ಪ್ರಸನ್ನ ಅವರು ಸಾಕಷ್ಟು ಸ್ಟಡಿ ಮಾಡಿಯೇ ಕಥೆ ಹೆಣೆದಿದ್ದಾರೆ. ಈ ಹಿಂದೆ ಕೆಲವು ಸಿನಿಮಾಗಳಲ್ಲಿ ಪಾರಿವಾಳ ರೇಸ್ ಬಗ್ಗೆ ಬಂದಿರಬಹುದು. ಆದರೆ, ಇಲ್ಲಿ ತುಂಬ ಆಳವಾಗಿ ಅದರ ಬಗ್ಗೆ ತೋರಿಸುತ್ತಿದ್ದೇವೆ. ಜೊತೆಗೆ ಇಲ್ಲಿ ರೌಡಿಸಂ, ಲವ್ ಇದೆ’ ಎಂದು ಸಿನಿಮಾ ಬಗ್ಗೆ ವಿವರ ನೀಡಿದರು.
ಚಿತ್ರಕ್ಕೆ ಕಥೆ ಒದಗಿಸಿದ ಎಂ.ಎಲ್. ಪ್ರಸನ್ನ ಅವರು, “ಸುನಿ ಒಂದಷ್ಟು ಬದಲಾವಣೆ ಮಾಡಿಕೊಂಡಿದ್ದು, ಅವೆಲ್ಲವೂ ಕಥೆಗೆ ಪೂರಕವಾಗಿರುತ್ತದೆ ಎಂಬ ನಂಬಿಕೆ ಇದೆ ಎಂದರು. ನಾಯಕ ಧನ್‌ವೀರ್ ಮೂರು ವರ್ಷದಿಂದ ಚಿತ್ರರಂಗಕ್ಕೆ ಬರಬೇಕೆಂದು ಪ್ರಯತ್ನಿಸುತ್ತಿದ್ದರಂತೆ. ಅದು ಈಗ ಈಡೇರಿದೆ ಎಂದರು. “ಧೈರ್ಯಂ’ ನಂತರ ನಾಯಕಿ ಅದಿತಿ ನಟಿಸುತ್ತಿರುವ ಎರಡನೇ ಸಿನಿಮಾವಿದು. ಇಲ್ಲಿ ಅವರು ಪಾರಿಜಾತ ಎಂಬ ಪಾತ್ರ ಮಾಡುತ್ತಿದ್ದಾರೆ. ಈ ಚಿತ್ರವನ್ನು ತಿಮ್ಮೇಗೌಡ ಅವರು ನಿರ್ಮಿಸುತ್ತಿದ್ದಾರೆ. ಈ ಚಿತ್ರದ ಮೂಲಕ ಮಗನನ್ನು ಲಾಂಚ್ ಮಾಡುತ್ತಿದ್ದಾರೆ. “ನನ್ನ ತಂದೆ ರಂಗಭೂಮಿಯಲ್ಲಿದ್ದವರು. ಅವರ ಕಲಾಸಕ್ತಿ ಈಗ ನನ್ನ ಮಗನಿಗೆ ಬಂದಿದೆ. ಹಾಗಾಗಿ, ಸಿನಿಮಾ ನಿರ್ಮಿಸುತ್ತಿದ್ದೇನೆ. ಮುಂದೆ ಈ ಬ್ಯಾನರ್‌ನಲ್ಲಿ ಬೇರೆ ನಾಯಕರಿಗೂ ಸಿನಿಮಾ ಮಾಡುವ ಆಸೆ ಇದೆ’ ಎಂದರು.
ಚಿತ್ರಕ್ಕೆ ಸಂತೋಷ್ ರೈ ಪಾತಾಜೆ ಛಾಯಾಗ್ರಹಣವಿದ್ದು, ಪಾರಿವಾಳ ರೇಸ್ ಸೆರೆ ಹಿಡಿಯೋದು ಸವಾಲಿನ ಕೆಲಸ ಎಂದರು. ಇನ್ನು, ಸಂಗೀತ ನಿರ್ದೇಶಕ ರವಿ ಬಸ್ರೂರು, ಎಲ್ಲಾ ಪತ್ರಿಕಾಗೋಷ್ಠಿಗಳಲ್ಲಿ ಹೇಳುವಂತೆ ಇಲ್ಲೂ, “ಪ್ರತಿಭೆ ಇರೋದು ಮುಖ್ಯವಲ್ಲ. ಅದನ್ನು ಗುರುತಿಸಿ ಅವಕಾಶ ಕೊಡುವ ಮನಸ್ಸು ಮುಖ್ಯ’ ಎಂಬ ಅವರ ಹಳೆಯ ಮಾತನ್ನು ಪುನರುತ್ಛರಿಸಿದರು.