Advertisement

ತುಂಡು ರಸ್ತೆಗಳ “ಸಂಚಾರ ವ್ಯೂಹ’!

09:12 AM May 12, 2019 | Lakshmi GovindaRaj |

ನಗರದ ಹೃದಯ ಭಾಗದಲ್ಲಿ ಸರಾಸರಿ ಪ್ರತಿ 200 ಮೀಟರ್‌ಗೆ ಒಂದು ಟ್ರಾಫಿಕ್‌ ಸಿಗ್ನಲ್‌ ಇದೆ. ಬರೀ ಏರಿಳಿತಗಳಿಂದ ಕೂಡಿದ ಬೆಂಗಳೂರಿನಂತಹ ಭೌಗೋಳಿಕ ಪ್ರದೇಶದಲ್ಲಿ ವಿಪರೀತವಾಗಿ ಹೆಚ್ಚಿರುವ ವಾಹನಗಳ ಸಾಲುಗಳನ್ನು ಹೀಗೆ ತುಂಡು-ತುಂಡಾಗಿ ಮಾಡದೆ ಅನ್ಯ ಮಾರ್ಗವೂ ಇಲ್ಲ. ಹಾಗಾಗಿ, ಇಲ್ಲಿ ಒಂದು ವಾಹನ, ಒಂದು ನಿಮಿಷ ಕೂಡ ಒಂದೇ ವೇಗದಲ್ಲಿ ಚಲಿಸಲು ಆಗುವುದಿಲ್ಲ.

Advertisement

ಬೆಂಗಳೂರು: ನಗರದ ಸಂಚಾರದಟ್ಟಣೆ ನಿವಾರಣೆಗಾಗಿಯೇ ಸರ್ಕಾರ ಪ್ರತಿ ವರ್ಷ ಸಾವಿರಾರು ಕೋಟಿ ರೂ. ಸುರಿಯುತ್ತಿದೆ. ವಾಹನಗಳ ವೇಗ ಹೆಚ್ಚಿಸಲು ರಸ್ತೆಗಳ ಮೇಲೆ ರಸ್ತೆಗಳನ್ನು ನಿರ್ಮಿಸುತ್ತಲೇ ಇದೆ. ಆದರೂ ಇಲ್ಲಿ ಒಂದೇ ಒಂದು ವಾಹನವೂ ಕನಿಷ್ಠ ಒಂದು ನಿಮಿಷ ಕೂಡ ಒಂದೇ ವೇಗದಲ್ಲಿ ಚಲಿಸಲು ಸಾಧ್ಯವಿಲ್ಲ!

ಏಕೆಂದರೆ ನಗರದ ಹೃದಯ ಭಾಗದಲ್ಲಿ ಸರಾಸರಿ ಪ್ರತಿ 200 ಮೀಟರ್‌ಗೆ ಒಂದು ಟ್ರಾಫಿಕ್‌ ಸಿಗ್ನಲ್‌ ಇದೆ. ಬರೀ ಏರಿಳಿತಗಳಿಂದ ಕೂಡಿದ ಬೆಂಗಳೂರಿನಂತಹ ಭೌಗೋಳಿಕ ಪ್ರದೇಶದಲ್ಲಿ ವಿಪರೀತವಾಗಿ ಹೆಚ್ಚಿರುವ ವಾಹನಗಳ ಸಾಲುಗಳನ್ನು ಹೀಗೆ ತುಂಡು-ತುಂಡಾಗಿ ಮಾಡದೆ ಅನ್ಯಮಾರ್ಗವೂ ಇಲ್ಲ. ಹಾಗಾಗಿ, ಇಲ್ಲಿ ಒಂದು ವಾಹನ, ಒಂದು ನಿಮಿಷ ಕೂಡ ಒಂದೇ ವೇಗದಲ್ಲಿ ಚಲಿಸಲು ಆಗುವುದಿಲ್ಲ ಎಂದು ಸ್ವತಃ ಹೆಚ್ಚುವರಿ ಪೊಲೀಸ್‌ ಆಯುಕ್ತ (ಸಂಚಾರ ವಿಭಾಗ) ಪಿ. ಹರಿ ಶೇಖರನ್‌ ಸ್ಪಷ್ಟಪಡಿಸುತ್ತಾರೆ. ಇದು ಇಡೀ ಬೆಂಗಳೂರಿನ ಸಂಚಾರ ನಿರ್ವಹಣೆಗೆ ಹಿಡಿದ ಕನ್ನಡಿ.

ಚೆನ್ನೈ ಮತ್ತು ಮುಂಬೈನಲ್ಲಿ ಒಂದು ಭಾಗವನ್ನು ಸಮುದ್ರ ಆವರಿಸಿದೆ. ಉಳಿದೊಂದು ಭಾಗದಲ್ಲಿ ಉದ್ದುದ್ದವಾಗಿ ನಗರ ಬೆಳೆಯುತ್ತಾ ಹೋಗುತ್ತದೆ. ಅದಕ್ಕೆ ತಕ್ಕಂತೆ ರಸ್ತೆಗಳೂ ನಿರ್ಮಾಣವಾಗುತ್ತವೆ. ಆದರೆ, ಬೆಂಗಳೂರು ಎತ್ತರದಲ್ಲಿದ್ದು, ಉಬ್ಬು-ತಗ್ಗುಗಳಿಂದ ಆವೃತವಾಗಿದೆ. ಈ ಮಧ್ಯೆ ವಾಹನಗಳ ಸಂಖ್ಯೆ ರಸ್ತೆಯ ಸಾಮರ್ಥ್ಯಕ್ಕಿಂತ ಮೂರುಪಟ್ಟು ಹೆಚ್ಚಾಗಿದೆ. ಹಾಗಾಗಿ, ಇತರೆ ಮಹಾನಗರಗಳಂತೆ ಇಲ್ಲಿ ಒಂದೇ ರೀತಿಯಲ್ಲಿ ರಸ್ತೆಗಳನ್ನು ನಿರ್ಮಿಸಲು ಆಗುವುದಿಲ್ಲ. ತುಂಡು ತುಂಡು ಮಾಡಲೇಬೇಕಾಗುತ್ತದೆ ಹಾಗೂ ಇದು ಅನಿವಾರ್ಯ ಕೂಡ.

ವರ್ತುಲ ರಸ್ತೆ ಜಪ: ಇಲ್ಲಿನ ಸಂಚಾರದಟ್ಟಣೆ ಎಂಬುದು ಚಕ್ರವ್ಯೂಹ. ಅದರೊಳಗೆ ಓಡಾಡುತ್ತಿರುವವರಿಗೆ ತಾವು ಅದನ್ನು ಬೇಧಿಸಿ ನುಗ್ಗುತ್ತಿರುವಂತೆ ಭಾಸವಾಗುತ್ತದೆ. ಆದರೆ, ವಾಸ್ತವವಾಗಿ ಅವರು ಆ ವರ್ತುಲದಲ್ಲೇ ಗಿರಕಿ ಹೊಡೆಯುತ್ತಿರುತ್ತಾರೆ. ತಮಗೆ ಅರಿವಿಲ್ಲದೆ, ಒಬ್ಬರಿಗೊಬ್ಬರು ಮುಖಾಮುಖೀ ಆಗುತ್ತಲೇ ಇರುತ್ತಾರೆ. ಏಕೆಂದರೆ, ಯಾರೊಬ್ಬರೂ ನಗರದ ಯಾವುದೇ ಮೂಲೆಯಿಂದ ಇನ್ನಾವುದೇ ಕಡೆಗೆ ಹೋಗಬೇಕಾದರೂ ಹೃದಯಭಾಗಕ್ಕೆ ಬಂದುಹೋಗುತ್ತಾರೆ. ಭೌಗೋಳಿಕ ಕಾರಣದಿಂದಾಗಿಯೇ ವರ್ತುಲ ರಸ್ತೆಯ ಜಪ ಪದೇ ಪದೆ ಆಗುತ್ತದೆ ಎಂದು ಸಾರಿಗೆ ತಜ್ಞರು ಹೇಳುತ್ತಾರೆ.

Advertisement

ಅವೈಜ್ಞಾನಿಕ ಒನ್‌ ವೇಗಳು; ಆರೋಪ: ಅಗತ್ಯಕ್ಕಿಂತ ಮೂರ್‍ನಾಲ್ಕು ಪಟ್ಟು ವಾಹನಗಳದಟ್ಟಣೆ ಇರುವುದು ಗೊತ್ತಿರುವ ವಿಷಯ. ಆದರೆ, ಇದ್ದ ರಸ್ತೆಗಳ ಸಾಮರ್ಥ್ಯ ಹಾಗೂ ವಾಹನಗಳ ವೇಗ ಹೆಚ್ಚಿಸಲು ಸಂಚಾರ ವಿಭಾಗ ವಿಫ‌ಲವಾಗುತ್ತಿದೆ. ಮುಖ್ಯವಾಗಿ ಇರುವ ರಸ್ತೆಗಳನ್ನು “ಪಾರ್ಕಿಂಗ್‌’ಗೆ ಅತಿಕ್ರಮಿಸಿಕೊಳ್ಳಲಾಗಿರುತ್ತದೆ. ನಗರದಲ್ಲಿ ಸುಮಾರು 40ರಿಂದ 45 ಸಾವಿರ ಜಂಕ್ಷನ್‌ಗಳಿವೆ. ಆದರೆ, ಇರುವ ಸಿಗ್ನಲ್‌ಗ‌ಳು 375. ಇಡೀ ನಗರದ ಸಂಚಾರ ನಿರ್ವಹಣೆಗಾಗಿ ಇರುವ ಸಂಚಾರ ಪೊಲೀಸರ ಸಂಖ್ಯೆ ಒಂದರಿಂದ ಎರಡು ಸಾವಿರ. 13 ಸಾವಿರ ಕಿ.ಮೀ. ರಸ್ತೆಯಲ್ಲಿ 300ಕ್ಕೂ ಅಧಿಕ ಏಕಮುಖ ಮಾರ್ಗ (ಒನ್‌ ವೇ)ಗಳಿವೆ. ಇದರಲ್ಲಿ ಬಹುತೇಕ ಅವೈಜ್ಞಾನಿಕವಾಗಿವೆ ಎಂದು ಸಾರಿಗೆ ತಜ್ಞ ಪ್ರೊ.ಎಂ.ಎನ್‌. ಶ್ರೀಹರಿ ಆರೋಪಿಸುತ್ತಾರೆ.

ಎರಡು ಸಮಾನಾಂತರ ರಸ್ತೆಗಳು ಇರುವ ಕಡೆಗಳಲ್ಲಿ ಮಾತ್ರ ಒನ್‌ ವೇಗಳನ್ನು ಮಾಡಬೇಕು. ಒಂದು ರಸ್ತೆಯಲ್ಲಿ ಹತ್ತು ಸಾವಿರಕ್ಕಿಂತ ಹೆಚ್ಚು ವಾಹನಗಳ ಸಂಚಾರ ಇದ್ದರೆ, ಅಂತಹ ಕಡೆ ಫ್ಲೈಓವರ್‌ಗಳನ್ನು ನಿರ್ಮಿಸಬೇಕು. 5ರಿಂದ 10 ಸಾವಿರ ವಾಹನಗಳಿದ್ದರೆ, ಒಂದು ಸಿಗ್ನಲ್‌ ಮತ್ತು ಒಬ್ಬ ಕಾನ್‌ಸ್ಟೆàಬಲ್‌ ಅನ್ನು ನಿಯೋಜಿಸಬೇಕು. 5 ಸಾವಿರಕ್ಕಿಂತ ಕೆಳಗಿದ್ದರೆ ಇದಾವುದರ ಅವಶ್ಯಕತೆ ಇಲ್ಲ ಎಂದು ಇಂಡಿಯನ್‌ ರೋಡ್‌ ಕಾಂಗ್ರೆಸ್‌ ನಿಯಮ ಹೇಳುತ್ತದೆ. ಆದರೆ, ಅದು ಸರಿಯಾಗಿ ಪಾಲನೆ ಆಗುತ್ತಿಲ್ಲ ಎಂದು ಅವರು ದೂರಿದರು.

ಶೀಘ್ರ ಬರಲಿವೆ ಅಡಾಪ್ಟಿವ್‌ ಸಿಗ್ನಲ್‌ಗ‌ಳು: ನಗರದ ಈಗಿರುವ ಆಟೋಮೆಟಿಕ್‌ ಸಿಗ್ನಲ್‌ಗ‌ಳು ಶೀಘ್ರದಲ್ಲೇ “ಜಾಣ ಸಿಗ್ನಲ್‌’ಗಳಾಗಿ ಮಾರ್ಪಾಡಾಗಲಿವೆ! ಪ್ರಸ್ತುತ ನಿರ್ದಿಷ್ಟ ಸಮಯವನ್ನು ನಿಗದಿಪಡಿಸಿ, ಅದರಂತೆ ಸಿಗ್ನಲ್‌ಗ‌ಳು ಬದಲಾಗುತ್ತವೆ. ಆದರೆ, ಮುಂದಿನ ದಿನಗಳಲ್ಲಿ ವಾಹನಗಳ ಸಾಂದ್ರತೆ ಆಧರಿಸಿ, ಸ್ವತಃ ಕ್ಯಾಮೆರಾಗಳೇ ಪರಸ್ಪರ ಸಂವಹನ ನಡೆಸಿ ವಾಹನ ಸವಾರರಿಗೆ ಸಿಗ್ನಲ್‌ಗ‌ಳನ್ನು ನೀಡುತ್ತವೆ. ಈಗಾಗಲೇ ಪ್ರಾಯೋಗಿಕವಾಗಿ ಇದನ್ನು ಕೆಲವು ಕಡೆಗಳಲ್ಲಿ ಜಾರಿಗೊಳಿಸಲಾಗಿದೆ.

ಶೀಘ್ರ ಸುಮಾರು 60ರಿಂದ 70 ಕೋಟಿ ವೆಚ್ಚದಲ್ಲಿ ನಗರದ ಎಲ್ಲ ಸಿಗ್ನಲ್‌ಗ‌ಳನ್ನು ಈ ವ್ಯವಸ್ಥೆಗೆ ಮಾರ್ಪಾಡು ಮಾಡಲಾಗುವುದು. ಆಗ, ನಗರದಲ್ಲಿ ಪ್ರಸ್ತುತ ಇರುವ ಆಟೋಮೇಟಿಕ್‌ ಸಿಗ್ನಲ್‌ಗ‌ಳನ್ನು ಹೊರವಲಯಗಳಿಗೆ ಸ್ಥಳಾಂತರಿಸಲಾಗುವುದು ಎಂದು ಹರಿ ಶೇಖರನ್‌ ತಿಳಿಸಿದರು. ಇದರಿಂದ ಸಂಚಾರದಟ್ಟಣೆ ಶೇ. 25ರಿಂದ 30ರಷ್ಟು ತಗ್ಗಲಿದೆ. ಜತೆಗೆ ಸಂಚಾರ ವೇಗ ಕೂಡ ವೃದ್ಧಿಯಾಗಲಿದೆ. ಇದರಿಂದ ಪ್ರತಿ ಸಿಗ್ನಲ್‌ಗ‌ಳಲ್ಲಿ ಕಾಯುವಿಕೆ ಅವಧಿ 5ರಿಂದ 10 ನಿಮಿಷ ಕಡಿಮೆ ಆಗಲಿದೆ.

ಬೆಂಗಳೂರು ಸಂಚಾರ ಮಾಹಿತಿ ಕೇಂದ್ರ (B&TIC) ಕೂಡ ಸ್ಥಾಪಿಸಲು ಉದ್ದೇಶಿಸಿದ್ದು, ಜಿಪಿಎಸ್‌, ಕ್ಯೂಎಂಎಸ್‌ ಮತ್ತು ಆಟೊಮೆಟಿಕ್‌ ಟ್ರಾಫಿಕ್‌ ಕೌಂಟರ್ಸ್‌ ಆಂಡ್‌ ಕ್ಲಾಸಿಫೈರ್ಸ್‌ ವ್ಯವಸ್ಥೆಗಳ (ಎಟಿಸಿಎಸ್‌) ಮೂಲಕ ಮಾಹಿತಿಯನ್ನು ಸಂಗ್ರಹಿಸಿ ರಸ್ತೆಯ ಯಾವ ಭಾಗದಲ್ಲಿರುವ ಸಂಚಾರ ಮತ್ತು ವೇಗದ ಪ್ರಮಾಣ ಕುರಿತು ನಿಖರ ಮಾಹಿತಿ ಒದಗಿಸಲಾಗುತ್ತದೆ. ಅಲ್ಲದೆ, ರಸ್ತೆಯಲ್ಲಿ ಯಾವ ವಿಧದ ಎಷ್ಟು ವಾಹನಗಳು ಚಲಿಸುತ್ತಿವೆ ಎನ್ನುವ ನಿಖರ ಮಾಹಿತಿ ಕೂಡ ಲಭ್ಯವಾಗಲಿದೆ.

ಡ್ರೋಣ್‌ ಪ್ರಯೋಗ ಸದ್ಯಕ್ಕಿಲ್ಲ?: ಡ್ರೋಣ್‌ ಮೂಲಕವೂ ನಗರದ ಸಂಚಾರ ನಿರ್ವಹಣೆ ಮಾಡುವ ಬಗ್ಗೆ ಚಿಂತನೆ ನಡೆದಿದೆ. ಡ್ರೋಣ್‌ ಸಹಾಯದಿಂದ ರಸ್ತೆಯಲ್ಲಿ ವಾಹನಗಳ ಸಾಂದ್ರತೆ ಎಷ್ಟಿದೆ? ಎಷ್ಟು ವೇಗದಲ್ಲಿ ಸಂಚರಿಸುತ್ತಿವೆ? ಅತಿ ವೇಗವಾಗಿ ಸಂಚರಿಸುವ ವಾಹನಗಳು, ದೋಷಪೂರಿತ ನಂಬರ್‌ ಪ್ಲೇಟ್‌ಗಳ ಬಗ್ಗೆ ಚಿತ್ರಸಹಿತ ಮಾಹಿತಿ ಸಂಗ್ರಹಿಸಲು ಉದ್ದೇಶಿಸಲಾಗಿತ್ತು.

ಈ ಸಂಬಂಧ ಪೊಲೀಸ್‌ ಇಲಾಖೆ ಟೆಂಡರ್‌ ಕೂಡ ಕರೆಯಲಿದೆ ಎಂದು ಈ ಹಿಂದೆ ಓಮ್ನಿಪ್ರಸೆಂಟ್‌ ರೋಬೋಟ್‌ ಟೆಕ್‌ ಸಂಸ್ಥೆ ಮಾಹಿತಿ ನೀಡಿತ್ತು. ಆದರೆ, “ಸದ್ಯಕ್ಕೆ ಡ್ರೋಣ್‌ಗಳನ್ನು ಸಂಚಾರ ನಿರ್ವಹಣೆಗೆ ಬಳಸಿಕೊಳ್ಳುವ ಯಾವುದೇ ಆಲೋಚನೆ ಇಲ್ಲ. ಈ ಪ್ರಯೋಗದಿಂದ ದಟ್ಟಣೆ ತಗ್ಗಿಸಬಹುದು ಎಂದೂ ನನಗೆ ಅನಿಸುತ್ತಿಲ್ಲ’ ಎಂದು ಹರಿ ಶೇಖರನ್‌ ಸ್ಪಷ್ಟಪಡಿಸಿದರು.

ಅತಿ ಹೆಚ್ಚು ವಾಹನದಟ್ಟಣೆವುಳ್ಳ ರಸ್ತೆಗಳು ಮತ್ತು ಜಂಕ್ಷನ್‌ಗಳು ಹಾಗೂ ಪೀಕ್‌ ಅವರ್‌ನಲ್ಲಿ ಅಂತಹ ಕಡೆಗಳಲ್ಲಿ ವಾಹನದಟ್ಟಣೆ ಎಷ್ಟಿದೆ ಎಂಬುದನ್ನು ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ (ಕೆಆರ್‌ಡಿಸಿಎಲ್‌) ಗುರುತಿಸಿದೆ. ಅವುಗಳ ವಿವರ ಹೀಗಿದೆ.

ರಸ್ತೆ ಪೀಕ್‌ ಅವರ್‌ನಲ್ಲಿ ವಾಹನ ಸಂಚಾರ ವಾಸ್ತವವಾಗಿ ರಸ್ತೆ ಸಾಮರ್ಥ್ಯ
-ಪ್ಲಾಟ್‌ಫಾರಂ ರಸ್ತೆ 14,375 2,486
-ಹಳೆಯ ಮೈಸೂರು ರಸ್ತೆ 16,049 3,492
-ಶೇಷಾದ್ರಿ ರಸ್ತೆ 10,105 3,813
-ಭಾಷ್ಯಂ ರಸ್ತೆ 4,734 1,791
-ಟ್ಯಾಂಕ್‌ಬಂಡ್‌ ರಸ್ತೆ 6,531 2,698
-ಲೂಪ್‌ ರಸ್ತೆ 4,958 1,858
-ರೇಸ್‌ಕೋರ್ಸ್‌ ರಸ್ತೆ 7,375 1,371
-ನಾಗಪ್ಪ ರಸ್ತೆ 6,360 1,714
-ಹರೆ ಕೃಷ್ಣ ರಸ್ತೆ 6,893 2,172
-ಸುಬೇದಾರಛತ್ರ ರಸ್ತೆ 5,934 2,057
-ಓಕಳೀಪುರ ಮುಖ್ಯರಸ್ತೆ 9,848 3,811
-ಜಿಲ್ಲಾಧಿಕಾರಿ ಕಚೇರಿ ರಸ್ತೆ 9,900 4,647
-ಜೆ.ಸಿ. ರಸ್ತೆ 11,813 4,971
-ಲಾಲ್‌ಬಾಗ್‌ ರಸ್ತೆ 8,829 4,142
-ಎಚ್‌. ಸಿದ್ದಯ್ಯ ರಸ್ತೆ 5,742 4,004
-ಆರ್‌.ವಿ. ರಸ್ತೆ 6,554 2,914
-ಎಂಎನ್‌ಕೆ ರಸ್ತೆ 5,009 1,799
-ಕ್ವೀನ್ಸ್‌ ರಸ್ತೆ 5,266 2,163
-ಡಿಕೆನ್ಸನ್‌ ರಸ್ತೆ 5,511 1,971
-ಹಲಸೂರು ರಸ್ತೆ 3,897 1,762
-ಹಳೆಯ ಮದ್ರಾಸ್‌ ರಸ್ತೆ 5,850 2,455
-ರಿಚ್‌ಮಂಡ್‌ ರಸ್ತೆ 7,296 2,914
-ಏರ್‌ಪೋರ್ಟ್‌ ರಸ್ತೆ 7,767 2,900
-ವಿಕ್ಟೋರಿಯ ರಸ್ತೆ 5,394 2,000

ದಟ್ಟಣೆ ಪ್ರದೇಶ ಜಂಕ್ಷನ್‌ಗಳು
-ಮೆಜೆಸ್ಟಿಕ್‌ ಸರ್ಕಲ್‌ 24
-ಹಡ್ಸನ್‌ ಸರ್ಕಲ್‌ 17
-ಮಿನರ್ವ್‌ ಸರ್ಕಲ್‌ 9
-ಕ್ವೀನ್ಸ್‌ ರಸ್ತೆ ಮತ್ತು ಹೊಂದಿಕೊಂಡ ಪ್ರದೇಶ 22
-ಎಂ.ಜಿ. ರಸ್ತೆ 33
-ಒಟ್ಟಾರೆ 106

* ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next