ಎಲ್ಲಾ ಮಕ್ಕಳ ಹೆತ್ತವರು ಹೇಳುವುದು ಒಂದೇ ಮಾತು ನನ್ನ ಮಗ/ಮಗಳು ಬಹಳ ಚೆನ್ನಾಗಿ ಚಿತ್ರ ಬರೆಯುತ್ತಾರೆ. ಆದರೆ ಮಗು ಒಂದೊಂದೇ ತರಗತಿ ದಾಟಿದಂತೆ ಈ ಮಾತು ಕ್ಷೀಣಿಸುತ್ತದೆ. ಓದುವಿಕೆ ಮೊದಲಾಗಿ ಕೌಶಲ ಬದಿಗೆ ಹೋಗುತ್ತದೆ. ಹೈಸ್ಕೂಲ್ ದಾಟಿದ ನಂತರ ಚಿತ್ರ ಪ್ರವೃತ್ತಿಗೆ ಅದೇ ಹೆತ್ತವರ ಒತ್ತಡದೊಂದಿಗೆ ತಿಲಾಂಜಲಿಯಾಗುತ್ತದೆ. ಛಲ ಹಿಡಿದು ಕುಳಿತು ಅಲ್ಲೊಂದು ಇಲ್ಲೊಂದು ಕುಡಿ ಮಾತ್ರ ಬೆಳೆಯುತ್ತಿರುತ್ತದೆ. ಅಂತಹ ಕೆಲವು ಕುಡಿಗಳು ಮಣಿಪಾಲ್ ಸ್ಕೂಲ್ ಆಫ್ ಆರ್ಟ್ಸ್ನಲ್ಲಿ ಬೆಳೆಯುತ್ತಿವೆ.
ಮಣಿಪಾಲ್ ಸ್ಕೂಲ್ ಆಫ್ ಆರ್ಟ್ಸ್ ಇತ್ತೀಚೆಗೆ ಉಡುಪಿಯ ವಿಭೂತಿ ಆರ್ಟ್ ಗ್ಯಾಲರಿಯಲ್ಲಿ ಚಿಣ್ಣರ ಕಲಾಕೃತಿಗಳ ಪ್ರದರ್ಶನವನ್ನು ನಡೆಸಿತು. ಕಲಾಶಾಲೆ ನಡೆಸುತ್ತಿರುವ ಹಿರಿಯ ಕಲಾವಿದ ಪಿ.ಎನ್. ಆಚಾರ್ಯರು ಅರಳು ಪ್ರತಿಭೆಗಳಿಗೆ ಮಾರ್ಗದರ್ಶನ ನೀಡಿ ಅವರಿಂದ ಸೃಜನಾತ್ಮಕ ಚಿತ್ರ ಕಲಾಕೃತಿಗಳು ಮೂಡುವಂತೆ ಮಾಡಿದ್ದಾರೆ.
ಬಾಲ ಕಲಾವಿದರಾದ ಅನನ್ಯಾ ನಾಯಕ್, ಅನ್ವೇಶ್ ಪಟೇಲ್, ಆದಿತ್ಯ ಎಸ್. ಕೆ., ವೈಭವ್, ಧನುಷ್ ಪ್ರಕಾಶ್, ವಿಮಲ್, ಪ್ರಜ್ವಲ್ ಕೆನ್ನೆತ್, ವಿಘ್ನೇಶ್ ಎನ್. ಸಾಲ್ಯಾನ್, ಶಿಶಿರ್, ಶಶಾಂಕ್, ಇಶಾನ್ ಭಟ್, ಪರೇಶ್ ಆರ್. ನಾಯಕ್, ನಿಧಿ ವರ್ಮ, ಹಿಮಾಂಶು ಎಸ್. ಕುಂದರ್, ಶ್ರೀನಿಧಿ ಎಸ್. ನಾಯಕ್, ಪ್ರತೀಕ್ಷಾ ಪಿ. ಶೆಣೈ ಹಾಗೂ ಹಿರಿಯ ಕಲಾವಿದೆ ಡಾ. ಗುಣಸಾಗರಿ ರಾವ್ ಸೇರಿ ಒಟ್ಟು ಎಪ್ಪತ್ತು ಆಕ್ರಿಲಿಕ್ ಕಲಾಕೃತಿಗಳು ಉತ್ತಮ ಚೌಕಟ್ಟಿನೊಂದಿಗೆ ಮಧ್ಯಮ ಗಾತ್ರದಲ್ಲಿ ಪ್ರದರ್ಶನದಲ್ಲಿದ್ದವು. ಕಲಾಕೃತಿಗಳ ಆಕರ್ಷಣೆ ಎಷ್ಟು ವಿಶೇಷವಾಗಿತ್ತೆಂದರೆ ಇಪ್ಪತ್ತಕ್ಕೂ ಹೆಚ್ಚು ಕಲಾಕೃತಿಗಳು ಮಾರಾಟವಾಗಿ ಹೋದವು.
ಮಕ್ಕಳ ಹೃನ್ಮನಗಳ ಭಾವಾಭಿವ್ಯಕ್ತಿ ಚಿತ್ರಗಳಲ್ಲಿ ಮೂಡಿದೆ. ಸೀದಾ ಸಾದಾ ರೇಖೆಗಳು, ವಿಷಯದ ನೇರ ಪ್ರಸ್ತಾಪನೆ, ನೇರ ಬಣ್ಣಗಳ ಪ್ರಸರಣ, ಮುಗ್ಧತೆ, ಪ್ರೀತಿ-ಪ್ರೇಮಗಳ ಅನಾವರಣ ಕಾಣುತ್ತದೆ. ಆ ಪ್ರಾಯದಲ್ಲಿ ಗ್ರಹಿಸಬಹುದಾದಷ್ಟು ವಿಷಯಗಳ ಅಭಿವ್ಯಕ್ತಿ ಚಿತ್ರದಲ್ಲಿ ಮೂಡಿದೆ. ಭಾವಚಿತ್ರ, ವಸ್ತುಚಿತ್ರ, ಹೂದಾನಿ, ಮಧುಬನಿ ಚಿತ್ರ, ಚಿಕಣಿಚಿತ್ರ ಸೇರಿದಂತೆ ನಿಸರ್ಗ ದೃಶ್ಯ, ಗ್ರಾಮೀಣ ಪರಿಸರ, ಕಂಬಳ, ಆನೆ, ಕಾಟಿಯನ್ನು ಬೇಟೆಯಾಡುತ್ತಿರುವ ಸಿಂಹ, ಸಾಕುಪ್ರಾಣಿ, ಗಿಳಿ ಮುಂತಾಗಿ ಹಕ್ಕಿಗಳ ಸಮೂಹ, ಮಿಂಚುಳ್ಳಿ, ಸಂಗೀತ ವಾದ್ಯಗಳು, ಯಕ್ಷಗಾನ ಮುಖವರ್ಣಿಕೆ, ವಾಮನ, ಬುದ್ಧ, ಭರತನಾಟ್ಯ, ಭಾರತೀಯ ನಾರಿ, ವೇಂಕಟೇಶ್ವರ, ವೀರ ಹನುಮ, ಭಜರಂಗಿ ಇತ್ಯಾದಿ ಚಿತ್ರಗಳು ಸಹಜ ಸೌಂದರ್ಯದೊಂದಿಗೆ ಮೂಡಿವೆ. ಪ್ರತೀಕ್ಷಾ ಪಿ. ಶೆಣೈ ಅವರ ಬುದ್ಧ ಮತ್ತು ಕಮಲ ಹಾಗೂ ಐದು ಕಲಾಕೃತಿಗಳು ಮನೋಜ್ಞವಾಗಿವೆ. ವೈಭವ್ ಸಮಕಾಲೀನ ಮಾಧ್ಯಮದಲ್ಲಿ ಉತ್ತಮ ಚಿತ್ರಗಳನ್ನು ಪ್ರದರ್ಶಿಸಿದ್ದಾನೆ. ಒಟ್ಟಿನಲ್ಲಿ ಮಕ್ಕಳ ಚಿತ್ರಗಳ ಮೌಲ್ಯವನ್ನು ಎತ್ತಿ ತೋರಿಸುವಲ್ಲಿ ಈ ಕಲಾಪ್ರದರ್ಶನ ಯಶಸ್ವಿಯಾಗಿದೆ. ತನ್ಮೂಲಕ ಮಣಿಪಾಲ್ ಸ್ಕೂಲ್ ಆಫ್ ಆರ್ಟ್ಸ್ ಹಲವು ಅರಳು ಪ್ರತಿಭೆಗಳ ಉಜ್ವಲನಕ್ಕೆ ನಾಂದಿ ಹಾಡುತ್ತಿದೆ.
ಉಪಾಧ್ಯಾಯ ಮೂಡುಬೆಳ್ಳೆ