Advertisement

ಭತ್ತದ ಗದ್ದೆಗಳಲ್ಲಿ ಬತ್ತದ ಚಿತ್ರಕಾವ್ಯ!

10:55 AM Sep 07, 2017 | Team Udayavani |

ಹಾಳೆ ಮೇಲೆ, ಪುಸ್ತಕಗಳಲ್ಲಿ, ಕ್ಯಾನ್‌ವಾಸ್‌ನಲ್ಲಿ, ಗೋಡೆ ಮೇಲೆ, ಅಷ್ಟೇ ಏಕೆ, ರಸ್ತೆಗಳ ಮೇಲೂ ಚಿತ್ರ ಬಿಡಿಸುವುದನ್ನು ಕಂಡಿದ್ದೇವೆ. ಇಲ್ಲಿ ಗದ್ದೆ, ಪೈರುಗಳನ್ನೇ ಕಲಾಕೃತಿಯನ್ನಾಗಿಸಿದ್ದಾರೆ. ಈ ಪ್ರಯೋಗವಾಗಿರುವುದು ಜಪಾನ್‌ ದೇಶದ ಇನಾಕಾಡತೆ ಎಂಬ ಹಳ್ಳಿಯಲ್ಲಿ. ಭತ್ತದ ಪೈರುಗಳೇ ಇಲ್ಲಿ ವಿವಿಧ ಚಿತ್ರಗಳಾಗಿ ರೂಪುಗೊಂಡು ಲಕ್ಷಾಂತರ ಪ್ರವಾಸಿಗರನ್ನು ಸೆಳೆಯುತ್ತಿವೆ.

Advertisement

ಜಪಾನ್‌ನ ಇನಾಕಾಡತೆ ಹಳ್ಳಿಯ ಗದ್ದೆಗಳಲ್ಲಿ ಪ್ರತಿ ವರ್ಷ ಭತ್ತದ ಪೈರುಗಳಲ್ಲಿ ಚಿತ್ರಗಳನ್ನು ರಚಿಸಲಾಗುತ್ತಿದೆ. ಇಲ್ಲಿ ಮುಖ್ಯವಾಗಿ ಪುರಾಣದ ಕಥೆಗಳನ್ನು ಪ್ರತಿನಿಧಿಸುವ ಚಿತ್ರಗಳನ್ನು ನೋಡಬಹುದು. ಮೊನಾಲಿಸಾ, ನೆಪೋಲಿಯನ್‌, ಮರ್ಲಿನ್‌ ಮನ್ರೊ ಮುಂತಾದ ಖ್ಯಾತನಾಮರ ಚಿತ್ರಗಳಲ್ಲದೆ, ಪ್ರಕೃತಿಯ ರಮಣೀಯ ದೃಶ್ಯಗಳು, ಕಾಲ್ಪನಿಕ ಪಾತ್ರಗಳ ಚಿತ್ರಗಳನ್ನೂ ಇಲ್ಲಿ ಕಾಣಬಹುದಾಗಿದೆ. ಈ ಕಲೆಯನ್ನು ಅವರು “ಟ್ಯಾನ್‌ಬೋ ಆರ್ಟ್‌’ ಎಂದು ಕರೆಯುತ್ತಾರೆ.

ಈ ಹಳ್ಳಿಯ ಜನರು ಮುಖ್ಯವಾಗಿ ಭತ್ತದ ಬೆಳೆಯನ್ನು ಸಾವಿರಾರು ವರ್ಷಗಳಿಂದ ಬೆಳೆಯುತ್ತಾ ಬಂದಿದ್ದಾರೆ. ಇದರ ಸವಿನೆನಪಿಗಾಗಿ ಭತ್ತದ ಪೈರುಗಳಿಂದಲೇ ಚಿತ್ರಗಳನ್ನು ಮೂಡಿಸುವ ಯೋಚನೆಯೊಂದು ಇವರ ತಲೆಗೆ ಬಂದದ್ದೇ ತಡ; 1990ರಿಂದ ಇಂಥ ವಿಶೇಷ ಚಿತ್ರಗಳನ್ನು ರೂಪಿಸುತ್ತಿದ್ದಾರೆ. ಇದು ವಿಶ್ವದಲ್ಲಿಯೇ ಬಹು ಜನಪ್ರಿಯಗೊಂಡು ಪ್ರತಿ ವರ್ಷ ಲಕ್ಷಾಂತರ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಿ , ಚಿತ್ರಗಳನ್ನು ವೀಕ್ಷಿಸುತ್ತಿದ್ದಾರೆ.

ತಯಾರಿ ಹೇಗೆ?
ಪೈರಿನಲ್ಲಿ ಚಿತ್ರ ರಚಿಸುವ ಮುನ್ನ ಹಳ್ಳಿಯವರು ಸಭೆ ನಡೆಸುತ್ತಾರೆ. ಅಲ್ಲಿ ಯಾವ ಚಿತ್ರಗಳನ್ನು ರಚಿಸಬೇಕೆಂದು ನಿರ್ಧರಿಸುತ್ತಾರೆ. ನಂತರ ಆ ಚಿತ್ರವನ್ನು ಕಂಪ್ಯೂಟರ್‌ನಲ್ಲಿ ಸಿದ್ಧಪಡಿಸುತ್ತಾರೆ. ಅದನ್ನೇ ಮಾದರಿಯಾಗಿಟ್ಟುಕೊಂಡು ಯಾವ ಯಾವ ಬಣ್ಣಕ್ಕೆ ಯಾವ ಯಾವ ಭತ್ತದ ತಳಿಯನ್ನು ಬಳಸುವುದೆಂದು ಲೆಕ್ಕಾಚಾರ ಹಾಕಿ, ತುಂಬಾ  ಜಾಣತನದಿಂದ, ಶ್ರಮವಹಿಸಿ ಕಲಾಕೃತಿ ರಚಿಸುತ್ತಾರೆ.

ಚಿತ್ರಗಳ ವಿನ್ಯಾಸಕ್ಕೆ ತಕ್ಕಂತೆ ಇಲ್ಲಿನ ಗದ್ದೆಗಳಲ್ಲಿ ನಾಟಿ ಮಾಡಬೇಕಾಗುತ್ತದೆ. ಏಪ್ರಿಲ್‌ನಲ್ಲಿ ನಡೆಯುವ ಈ ಕಾರ್ಯ ಮುಗಿಯಲು ಎರಡೂರು ತಿಂಗಳುಗಳೇ ಹಿಡಿಯುತ್ತವೆ. ಈ ಅವಧಿಯಲ್ಲಿ ಭತ್ತವನ್ನು ಚೆನ್ನಾಗಿ ಬೆಳೆಸುತ್ತಾರೆ. ಜುಲೈ ನಿಂದ ಆಗಸ್ಟ್ ತಿಂಗಳಲ್ಲಿ ಈ ಕಲಾಕೃತಿಗಳನ್ನು ನೋಡಲು ಪ್ರವಾಸಿಗರು ಪ್ರವಾಹೋಪಾದಿಯಲ್ಲಿ ಬರುತ್ತಾರೆ. ಅಕ್ಟೋಬರ್‌ವರೆಗೂ ಈ ಪ್ರದರ್ಶನ ನೋಡಲು ಲಭ್ಯ.

Advertisement

ಈ ಬಾರಿಯ ವಿಶೇಷ!
ಪ್ರತಿ ವರ್ಷ ಒಂದು ವಿಷಯವನ್ನು ಆರಿಸಿಕೊಂಡು, ಅದಕ್ಕೆ ಹೊಂದುವ ಚಿತ್ರ, ವಿನ್ಯಾಸವನ್ನು ರಚಿಸುತ್ತಾರೆ. ಈ ಬಾರಿ ಜಪಾನಿನ ಜಾನಪದ ಕತೆಗಳನ್ನೇ ವಿಷಯವಾಗಿ ಆರಿಸಿಕೊಂಡಿದ್ದಾರೆ. ಈ ಚಿತ್ರಗಳನ್ನು ವಿನ್ಯಾಸಗೊಳಿಸಲು ಸುಮಾರು 700 ಕಲಾವಿದರು ಶ್ರಮಿಸಿ¨ªಾರೆ. ಸುಮಾರು ಹದಿನೈದು ಸಾವಿರ ಚದರ ಅಡಿಗಳ ಪ್ರದೇಶದಲ್ಲಿ ವಿವಿಧ ಬಗೆಯ ಚಿತ್ರಗಳು ನಿರ್ಮಾಣಗೊಂಡಿವೆ. ಈ ಚಿತ್ರಗಳನ್ನು ನೋಡಲು ಅಟ್ಟಣಿಗೆಗಳನ್ನು ಸಿದ್ದಗೊಳಿಸಲಾಗಿದೆ. 

ಇತಿಹಾಸ, ಸಂಸ್ಕೃತಿಯನ್ನು ಉಳಿಸಿಕೊಳ್ಳಲು, ಮುಂದಿನ ಪೀಳಿಗೆಗೆ ಅದರ ಮಹತ್ವ ಸಾರಲು ವಿನೂತನ ಮಾರ್ಗವನ್ನು ಕಂಡುಕೊಂಡಿರುವ ಜಪಾನ್‌ನ ಈ ಹಳ್ಳಿಗರ ಪ್ರಯತ್ನ ಶ್ಲಾಘನೀಯ.

ದಂಡಿನಶಿವರ ಮಂಜುನಾಥ್‌

Advertisement

Udayavani is now on Telegram. Click here to join our channel and stay updated with the latest news.

Next