Advertisement

ಬಾಲ ಕಲಾವಿದರ ಚಿತ್ರ ಪ್ರದರ್ಶನ 

06:00 AM Mar 16, 2018 | |

ಎಳವೆಯಲ್ಲಿಯೇ ಮಕ್ಕಳ ಪ್ರತಿಭೆಗಳನ್ನು ಒರೆಗೆ ಹಚ್ಚುವ ಕೆಲಸ ಆಗದಿದ್ದಲ್ಲಿ ಅದು ಪೋಲಾಗಿ ಅವರ ಭವಿಷ್ಯ ಮಸುಕಾಗಬಹುದು. ಅವರಲ್ಲಿ ಮೊಳಕೆಯೊಡೆಯುತ್ತಿರುವ ಸೃಜನಾತ್ಮಕ ಕಲೆ-ಕೌಶಲ್ಯಗಳನ್ನು ಹೆತ್ತವರು ಗುರುತಿಸಿ ತಕ್ಕ ಮಾರ್ಗದರ್ಶನಕ್ಕಾಗಿ ಹಿರಿಯ ಕಲಾವಿದರಲ್ಲಿ ತರಬೇತಿಗೊಳಿಸಿದಾಗ ಅವರ ಪ್ರತಿಭೆ ಬೆಳಕಿಗೆ ಬರುತ್ತದೆ. ಅಂತಹ ವಿಶಿಷ್ಟ ಕೈಂಕರ್ಯ ಮಣಿಪಾಲ ಸ್ಕೂಲ್‌ ಆಫ್ ಆರ್ಟ್‌ನಿಂದ ನಡೆಯುತ್ತಿದೆ. ಖ್ಯಾತ ಕಲಾವಿದರಾದ ಉಡುಪಿಯ ಪಿ.ಎನ್‌.ಆಚಾರ್ಯರ ಮಾರ್ಗದರ್ಶನದಲ್ಲಿ ಪುಟಾಣಿಗಳು ಮರಿ ಕಲಾವಿದರಾಗಿ ಬೆಳೆದು ಕಲಾಪ್ರದರ್ಶನ ನಡೆಸುತ್ತಿರುತ್ತಾರೆ. ನಿರಂತರ ಹನ್ನೆರಡು ಕಲಾಪ್ರದರ್ಶನಗಳು ನಡೆದು ಇದೀಗ ಹದಿಮೂರನೆಯ ಕಲಾ ಪ್ರದರ್ಶನ ಉಡುಪಿ ಚಿತ್ರಕಲಾ ಮಹಾವಿದ್ಯಾಲಯದ ವಿಭೂತಿ ಆರ್ಟ್‌ ಗ್ಯಾಲರಿಯಲ್ಲಿ ಇತ್ತೀಚೆಗೆ ನಡೆಯಿತು. 

Advertisement

ಮೊಬೈಲ್‌, ಕಂಪ್ಯೂಟರಿನ ಆಕರ್ಷಣೆಯಿಂದ ಮಕ್ಕಳ ಮನಸ್ಸನ್ನು ವಿಕರ್ಷಿಸಿ ಅವರ ಸೃಜನಶೀಲತೆ ಬೆಳಕಿಗೆ ಬರಲು ಸೂಕ್ತ ಕಲಾ ತರಬೇತಿಯನ್ನು ನೀಡುವುದೆಂದರೆ ಸುಲಭದ ಕೆಲಸವಲ್ಲ. ಪಿ.ಎನ್‌.ಆಚಾರ್ಯರ ಕಲಾಗರಡಿಯಲ್ಲಿ ಅಂತಹ ಆಕರ್ಷಣೆಯಿದೆ. ಇವರ ಜೊತೆಗೆ ಕಲಾವಿದ ಅನಿಲ್‌ ಮಾಬೆನ್‌ ಸಾಥ್‌ ನೀಡುತ್ತಿದ್ದಾರೆ. ಕಲಿಯುವ ಮಕ್ಕಳಿಗೆ ಇಲ್ಲಿ ಯಾವುದೇ ಒತ್ತಡದ ಸನ್ನಿವೇಶಗಳಿಲ್ಲ. ಅವರವರು ಬಯಸುವ ವಿಷಯದಲ್ಲಿ ಚಿತ್ರರಚನಾ ತರಬೇತಿ ನೀಡುತ್ತಾರೆ. ಹಾಗಾಗಿ ಇದು ಹವ್ಯಾಸಿ ಕಲಿಕೆಯವರಿಗೆ ಆಕರ್ಷಕ ತಾಣವಾಗಿದ್ದು ಎಲ್ಲಾ ಹರೆಯದ ಕಲಾಸಕ್ತರು, ಉದ್ಯೋಗಸ್ಥರು ಇಲ್ಲಿ ತರಬೇತಿ ಪಡೆಯುತ್ತಿದ್ದಾರೆ. 

 ಈ ಕಲಾಪ್ರದರ್ಶನದಲ್ಲಿರುವ ಚಿತ್ರಗಳನ್ನು ಕಾಣುವಾಗ ವಿದ್ಯಾರ್ಥಿಗಳು ನಾಮುಂದು ತಾಮುಂದು ಎಂದು ಆಸಕ್ತರಾಗಿ ಭಾಗವಹಿಸಿ ಒಂದಷ್ಟು ಸೃಜನಾತ್ಮಕ ರಚನೆಗಳನ್ನು ಹುಟ್ಟುಹಾಕಿದಂತೆ ಕಾಣುತ್ತದೆ. ನಮ್ಮ ಶ್ರೀಮಂತ ಸಂಸ್ಕೃತಿಯ ತುಣುಕುಗಳನ್ನು ಬಿಂಬಿಸುವ ಕಲಾಕೃತಿಗಳು ಇಲ್ಲಿವೆ. ಒಟ್ಟು ಹದಿನೆಂಟು ಮಂದಿ ಕಲಾವಿದರು ಐವತ್ತಕ್ಕೂ ಮೀರಿ ಚಿತ್ರಕೃತಿಗಳನ್ನು ರಚಿಸಿಟ್ಟಿದ್ದಾರೆ. ಅವುಗಳಲ್ಲಿ ಕೆಲವಂತೂ ತುಂಬಾ ಗುಣಾತ್ಮಕ ಅಂಶಗಳಿಂದ ಕೂಡಿದ್ದವು. ಡಾ| ಗುಣಸಾಗರಿ ರಾವ್‌, ಅಕ್ಷತ್‌ ಪಿ. ಆಚಾರ್ಯ ಚಿತ್ರಿಸಿರುವ ಜನಪದ ಚಿತ್ರ ಹಾಗೂ ಮೆರವಣಿಗೆಯ ದೃಶ್ಯಗಳು, ವೈಭವ್‌ನ ದೇವಕನ್ನಿಕೆ, ವಿಮಲ್‌ ಚಿತ್ರಿಸಿರುವ ಯಕ್ಷಗಾನ ದೃಶ್ಯಗಳು, ಶಶಾಂಕ್‌, ವಿಘ್ನೇಶ ಎನ್‌. ಚಿತ್ರಿಸಿರುವ ಭೂತದ ಕೋಲ ದೃಶ್ಯಗಳು, ವಿಘ್ನೇಶ್‌ ಪ್ರಭು, ರೊನಾಕ್‌ ಪಿ. ಶೆಟ್ಟಿ, ಧೈರ್ಯ ಶಹಾ, ವರ್ಷಿಣಿ, ನಿದೀಶ್‌ ಎನ್‌. ಪ್ರಜಾರಿ, ಸುಯೇಶ್‌ರವರು ನಿರೂಪಿಸಿರುವ ಹಳ್ಳಿಮನೆಗಳ ನಿಸರ್ಗ ದೃಶ್ಯಗಳು, ಇಶಾನ್‌ ಭಟ್‌ ಚಿತ್ರಿಸಿರುವ ಗಣಪತಿ, ಪ್ರತೀಕ್ಷಾ ಪಿ. ಶೆಣೈ ರಚಿಸಿರುವ ಜನಪದ ಶೈಲಿಯ ರಾಧಾಕೃಷ್ಣ, ಆದಿತ್ಯ ಎಸ್‌.ಕೆ., ಪರೇಶ್‌ ಆರ್‌. ನಾಯಕ್‌ ಚಿತ್ರಿಸಿರುವ ಆದರ್ಶ ನಾರಿಯರು, ಪ್ರಸನ್ನ ಕೆ.ಭಟ್‌ನ ಸಾಹಿತಿಗಳು, ಸಪ್ನಾ ಎನ್‌. ಕೆ. ರಚಿಸಿರುವ ಹೂದಾನಿಯ ಚಿತ್ರಗಳು ಸೊಗಸಾಗಿದ್ದವು. ಒಟ್ಟಿನಲ್ಲಿ ಮಣಿಪಾಲ ಸ್ಕೂಲ್‌ ಆಫ್ ಆರ್ಟ್‌ ಹಲವು ಕಲಾಪ್ರತಿಭೆಗಳ ಉಜ್ವಲನಕ್ಕೆ ನಾಂದಿ ಹಾಡಿದೆ ಎನ್ನಬಹುದು. 

ಉಪಾಧ್ಯಾಯ ಮೂಡುಬೆಳ್ಳೆ 

Advertisement

Udayavani is now on Telegram. Click here to join our channel and stay updated with the latest news.

Next