ವರದಿ : ದತ್ತು ಕಮ್ಮಾರ
ಕೊಪ್ಪಳ: ರಾಜ್ಯದ ಯಾವುದೇ ಕೋವಿಡ್ ಆಸ್ಪತ್ರೆಯಲ್ಲೂ ಇಲ್ಲದ ಪಿಜಿಯೋಥೆರಪಿ ವ್ಯವಸ್ಥೆ ಗವಿಮಠದ ಕೋವಿಡ್ ಆಸ್ಪತ್ರೆಯಲ್ಲಿದೆ. ನಿತ್ಯವೂ ಸೋಂಕಿತರಿಗೆ ಮಸಾಜ್ ಮಾಡುತ್ತಿರುವ ಆಸ್ಪತ್ರೆಯ ತಂಡ ಅವರ ಮನಸ್ಸು, ದೈಹಿಕ ಭಾರ ಕಡಿಮೆ ಮಾಡಿ ನಿರಾಳತೆಗೆ ಬರುವಂತೆ ಮಾಡುತ್ತಿರುವುದು ಗಮನಾರ್ಹ ಸಂಗತಿ.
ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡುವ ವಿಧಾನದಲ್ಲಿ ವಿಭಿನ್ನ ಹಾಗೂ ವಿಶೇಷತೆಗೆ ಹೆಸರಾಗಿರುವ ಕೊಪ್ಪಳ ಗವಿಮಠ ಅಲೋಪಥಿ, ಆಯುರ್ವೇದದ ಜತೆಗೆ ಧ್ಯಾನ, ಅಧ್ಯಾತ್ಮ, ಸಂಗೀತ, ಕ್ರೀಡೆಗಳನ್ನೂ ನಡೆಸಿ ಎಲ್ಲೆಡೆ ಹೆಸರಾಗಿದೆ. ಇದಕ್ಕಿಂತಲೂ ಒಂದು ಹೆಜ್ಜೆ ಮುಂದೆ ಹೋಗಿ ಸೋಂಕಿತರ ಮಾನಸಿಕ ಒತ್ತಡ ಕಡಿಮೆ ಮಾಡಲು ಪಿಜಿಯೋಥೆರಪಿ ಮಾಡುವ ಮೂಲಕ ಮತ್ತಷ್ಟು ಆರೈಕೆಗೆ ಮುಂದಾಗಿದೆ. ತೀವ್ರ ಆರೋಗ್ಯ ಸಮಸ್ಯೆ ಎದುರಿಸುತ್ತಿರುವ ಸೋಂಕಿತರನ್ನು ಬಿಟ್ಟು ಉಳಿದೆಲ್ಲ ಸೋಂಕಿತರಿಗೂ ಗವಿಮಠದ ಆರ್ಯುವೇದ ಆಸ್ಪತ್ರೆಯಲ್ಲಿನ ನುರಿತ ತಂಡ ನಿತ್ಯ ದೈಹಿಕ ಮಸಾಜ್ ಮಾಡುವ ಕಾಯಕದಲ್ಲಿ ತೊಡಗಿದೆ. ಕೋವಿಡ್ ಸೋಂಕಿತರು ಎಂದಾಕ್ಷಣ ಮಾರುದ್ದ ದೂರ ಸರಿಯುವ ಸಂದರ್ಭದಲ್ಲಿ ಗವಿಮಠದ ಆಸ್ಪತ್ರೆಯಲ್ಲಿ ಸೋಂಕಿತರು ನಮ್ಮವರು, ಅವರ ಆರೈಕೆಯೇ ನಮ್ಮ ಧ್ಯೇಯವೆಂದು ಅವರ ಮನಸ್ಸಿನ ಭಾರ ಕಡಿಮೆ ಮಾಡಲು ಕೈ, ಕಾಲು, ತಲೆ ಹಾಗೂ ಬೆನ್ನಿನ ಭಾಗವನ್ನು ಮಸಾಜ್ ಮಾಡುವ ಮೂಲಕ ದೈಹಿಕ ಭಾರ ಕಡಿಮೆ ಮಾಡಲಾಗುತ್ತಿದೆ.
ಕೋವಿಡ್ ಸೋಂಕಿತರ ಆರೈಕೆಯಲ್ಲಿ ರಾಜ್ಯ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಚಿಕಿತ್ಸೆ ನಡೆಯುತ್ತಿದೆ. ಆದರೆ ಅತ್ಯುನ್ನತ ಆಸ್ಪತ್ರೆಗಳಲ್ಲಿಯೇ ಸೋಂಕಿತರನ್ನು ಮುಟ್ಟಲು ಹಿಂದೇಟು ಹಾಕುತ್ತಿದ್ದಾರೆ. ಪ್ರತಿಷ್ಠಿತ ಆಸ್ಪತ್ರೆಗಳಲ್ಲಿಯೇ ಇಲ್ಲದಂತಹ ಪಿಜಿಯೋಥೆರಪಿ ಸೌಲಭ್ಯ ಗವಿಮಠದ ಆಸ್ಪತ್ರೆಯಲ್ಲಿ ಇರುವುದು ಸೋಂಕಿತರಿಗೆ ಅನುಕೂಲವಾಗಿದೆ. ಗವಿಮಠದ ಶ್ರೀಗಳು ಸೋಂಕಿತರ ಚಿಕಿತ್ಸೆ ಬಗ್ಗೆ ಸಾಕಷ್ಟು ಕಾಳಜಿ ವಹಿಸಿರುವುದಕ್ಕೆ ಇದು ಸಾಕ್ಷಿ.
ಅಧ್ಯಾತ್ಮ ಕೇಂದ್ರ: ಗವಿಮಠದ ಆಸ್ಪತ್ರೆ ಎಲ್ಲ ಆಸ್ಪತ್ರೆಗಳಿಗಿಂತ ಭಿನ್ನವಾಗಿದೆ. ಇದೊಂದು ಕೋವಿಡ್ ಆಸ್ಪತ್ರೆಯಲ್ಲ. ಯಾವುದೋ ಅಧ್ಯಾತ್ಮ ಕೇಂದ್ರ ಎನ್ನುವಂತೆ ಸೋಂಕಿತರ ಮನಸ್ಸಿನಲ್ಲಿ ಮೂಡುತ್ತಿದೆ. ನಾವು ಇಂತಹ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದೇವೆ ಎಂದರೆ ಅದು ನಮ್ಮ ಪೂರ್ವಜನ್ಮದ ಪುಣ್ಯವೇ ಸರಿ. ಇಲ್ಲಿ ಶ್ರೀಗಳ ಹಿತವಚನ ಆಲಿಸಿದರೆ ನಮ್ಮ ಮನಸ್ಸು ಹಗುರವಾಗುತ್ತದೆ. ವೈದ್ಯರ ಸಲಹೆ ಕೇಳಿದರೆ ನಮಗಿರುವ ಅರ್ಧ ಸೋಂಕು ದೂರವಾದಂತೆ ಆಗುತ್ತಿದೆ.
ಇನ್ನು ಇಲ್ಲಿ ಸಿಬ್ಬಂದಿ ಮಾಡುವ ಆರೈಕೆ ನೋಡಿದರೆ ಯಾವುದೇ ಪ್ರತಿಷ್ಠಿತ ಆಸ್ಪತ್ರೆಗಳಲ್ಲೂ ಇಂತಹ ಸಕಲ ಸೌಕರ್ಯಗಳಿಲ್ಲ. ಹಣ್ಣು-ಹಂಪಲು, ಬಿಸಿ ಊಟ, ಕಷಾಯ ಸೇರಿ ಸೋಂಕಿತರಿಗೆ ಕೊಡುವುತ್ತಿರುವ ಗಮನಿಸಿದರೆ ಇದೊಂದು ಪುಣ್ಯಾಶ್ರಮದಂತಿದೆ ಎನ್ನುತ್ತಿದ್ದಾರೆ ಆರೈಕೆಯಲ್ಲಿರುವ ಸೋಂಕಿತರು.