Advertisement

ಉಡುಪಿ ತಾಲೂಕಿನಲ್ಲಿ  38 ಮಕ್ಕಳಿಗೆ ಫಿಸಿಯೋಥೆರಪಿ

06:00 AM Jun 29, 2018 | |

ಉಡುಪಿ: ಸರ್ವ ಶಿಕ್ಷಣ ಅಭಿಯಾನದಡಿ ಪ್ರತೀ ವರ್ಷ ವೈದ್ಯಕೀಯ ಶಿಬಿರ ನಡೆಸಿ ವಿಶೇಷ ಅಗತ್ಯವುಳ್ಳ ದೈಹಿಕ ಹಾಗೂ ಮಾನಸಿಕ ಮಕ್ಕಳನ್ನು ಗುರುತಿಸಿ ಅವರಿಗೆ ಜೀವನ ಕೌಶಲ್ಯ, ಸ್ವಯಂ ಸ್ವತ್ಛತಾ ನಿರ್ವಹಣೆ ಮತ್ತು ಅಗತ್ಯವುಳ್ಳವರಿಗೆ ಫಿಸಿಯೋಥೆರಪಿ ಒದಗಿಸಲಾಗುತ್ತಿದೆ.
 
ಉಡುಪಿಯಲ್ಲಿ  ಕಳೆದ 7 ವರ್ಷಗಳಿಂದ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಪದನಿಮಿತ್ತ ಕ್ಷೇತ್ರ ಸಮನ್ವಯಾಧಿಕಾರಿಗಳ ಕಚೇರಿ ಉಡುಪಿ ವಲಯದ ಆಶ್ರಯದಲ್ಲಿ ಉಡುಪಿಯ ಸಿಟಿ ಬಸ್‌ನಿಲ್ದಾಣ ಸಮೀಪದ ಖಾದರ್‌ ಬಿಲ್ಡಿಂಗ್‌ನಲ್ಲಿರುವ ಹಾಜಿ ಅಬ್ದುಲ್ಲಾ ಸರಕಾರಿ ಸಮನ್ವಯ ಶಿಕ್ಷಣ ಸಂಪನ್ಮೂಲ ಕೇಂದ್ರ ಹಾಗೂ ವಿಶೇಷ ಅಗತ್ಯವುಳ್ಳ ಮಕ್ಕಳ ಪೂರ್ವ ಸಿದ್ಧತಾ ಕೇಂದ್ರದಲ್ಲಿ ಫಿಸಿಯೋಥೆರಪಿ ತರಗತಿ ನಡೆಯುತ್ತಿದೆ.

Advertisement

ತಾಲೂಕಿನಲ್ಲಿ 38 ಮಕ್ಕಳು
ತಾಲೂಕಿನಲ್ಲಿ ಫಿಸಿಯೋಥೆರಪಿ ಅಗತ್ಯವುಳ್ಳ 38 ವಿಶೇಷ ಅಗತ್ಯವುಳ್ಳ ಮಕ್ಕಳು ಹಾಗೂ ಮನೆಯಿಂದ ಹೊರಗೆ ಬರಲಾಗದ  (ಗೃಹ ಆಧಾರಿತ ಶಿಕ್ಷಣ) 35 ಮಕ್ಕಳಿದ್ದಾರೆ. ಪ್ರಸ್ತುತ ಪಿಸಿಯೋಥೆರಪಿ ಅಗತ್ಯವುಳ್ಳ 38 ಮಕ್ಕಳಲ್ಲಿ 9 ಮಕ್ಕಳು ಮಾತ್ರ ಕೇಂದ್ರಕ್ಕೆ ಪ್ರಯೋಜನ ಪಡೆಯುತ್ತಿದ್ದಾರೆ. ಮನೆಯಿಂದ ಬರಲಾಗದ 35 ಮಕ್ಕಳ ಮನೆಗೆ ತೆರಳಿ ಅವರಿಗೆ ಜೀವನ ಕೌಶಲ್ಯ, ಸ್ವಯಂ ಸ್ವಚ್ಛತಾ ನಿರ್ವಹಣೆ ಇತ್ಯಾದಿಗಳನ್ನು ಕಲಿಸಿಕೊಡಲಾಗುತ್ತಿದೆ. 

ಕೇಂದ್ರದಲ್ಲಿ ಮಕ್ಕಳಿಗೆ ಬೇಕಾಗುವ ಆಟಿಕೆ ಪರಿಕರಗಳು, ವಿಶೇಷ ಶೌಚಾಲಯ ವ್ಯವಸ್ಥೆಗಳಿವೆ. ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಪ್ರಸ್ತುತ ವಾರಕ್ಕೆರಡು ದಿನ (ಸೋಮವಾರ, ಗುರುವಾರ) ಫಿಸಿಯೋಥೆರಪಿ ನೀಡಲಾಗುತ್ತಿದೆ. ಮಕ್ಕಳಿಗೆ ಅವಶ್ಯ ಪರಿಕರಗಳನ್ನು ವಿತರಿಸಲಾಗುತ್ತಿದೆ. 

ಪರಿಕರ ಒದಗಣೆ
ಹೆತ್ತವರಿಗೆ ಮಕ್ಕಳನ್ನು ಕೇಂದ್ರಕ್ಕೆ ಕರೆತರಲು ಅನುಕೂಲವಾಗುವಂತೆ ಉಡುಪಿಯಲ್ಲಿ ಈಗಿರುವ ಕೇಂದ್ರವನ್ನು ಬದಲಾಯಿಸಿ ಬೋರ್ಡ್‌ ಹೈಸ್ಕೂಲ್‌ನಲ್ಲಿ ಖಾಲಿಯಿರುವ ವಿಶಾಲ ಕೊಠಡಿಯಲ್ಲಿ ಪೂರ್ವ ಸಿದ್ಧತಾ ಕೇಂದ್ರ (ಪಿಸಿಯೋಥೆರಪಿ) ತೆರೆಯಲು ಕ್ರಮ ವಹಿಸಲಾಗುವುದು. ಬೇಕಾದ ಪರಿಕರಗಳನ್ನು ನಗರಸಭೆಯಿಂದ ಒದಗಿಸಿಕೊಡಲು ಕ್ರಮಕೈಗೊಳ್ಳಲಾಗುವುದು.
– ಕೆ. ರಘುಪತಿ ಭಟ್‌,ಶಾಸಕರು

 250 ರೂ. ಸಾರಿಗೆ ಭತ್ತೆ 
ಫಿಸಿಯೋಥೆರಪಿ ಪಡೆದ ವಿಶೇಷ ಅಗತ್ಯವುಳ್ಳ ಮಕ್ಕಳು ಶಾಲೆಗೆ ತೆರಳಲು ಸಿದ್ಧರಾದರೆ ಅವರನ್ನೂ ಶಾಲೆಗೆ ಸೇರಿಸಲು ಅನುಕೂಲವಾಗುತ್ತದೆ.  ಈ ಮಕ್ಕಳನ್ನು ಕೇಂದ್ರಕ್ಕೆ ಕರೆತರಲು ಹೆತ್ತವರಿಗೆ ತಿಂಗಳಿಗೆ 250 ರೂ. 
ಸಾರಿಗೆ ಭತ್ತೆ ನೀಡ ಲಾಗುತ್ತಿದೆ.  ಮಕ್ಕಳಿಗೆ ತೊಂದರೆಯಾಗಬಾರ ದೆಂಬ ನೆಲೆಯಲ್ಲಿ ನವ್ಯಚೇತನ ಟ್ರಸ್ಟಿನ ಸಹಕಾರದೊಂದಿಗೆ ಪಿಸಿಯೋಥೆರಪಿ ನಡೆಸಲಾಗುತ್ತಿದೆ.  
– ಶೇಷಶಯನ ಕಾರಿಂಜ ಡಿಡಿಪಿಐ

Advertisement
Advertisement

Udayavani is now on Telegram. Click here to join our channel and stay updated with the latest news.

Next