ಭೌತಶಾಸ್ತ್ರದ ಮತ್ತು ಅದರ ವಿವಿಧ ಶಾಖೆಗಳು ಇಂದಿಗೂ ಅದೆಷ್ಟೋ ಮಂದಿಗೆ ವಿಸ್ಮಯ ಮತ್ತು ಕೌತುಕದ ಸಂಗತಿಗಳು ಎಂದರೆ ತಪ್ಪಾಗಲಾರದು. ಕೇವಲ ವಿಜ್ಞಾನಿಗಳು, ವಿಜ್ಞಾನ ವಿದ್ಯಾರ್ಥಿಗಳನ್ನು ಮಾತ್ರವಲ್ಲದೆ ಅನೇಕ ಸಂದರ್ಭಗಳಲ್ಲಿ ಜನ ಸಾಮಾನ್ಯರನ್ನೂ ಸೆಳೆಯುವ ಇಂಥ ಭೌತಶಾಸ್ತ್ರ ಕುರಿತು ಈಗೊಂದು ಚಿತ್ರ ತೆರೆಗೆ ಬರುತ್ತಿದೆ. ಅಂದಹಾಗೆ, ಆ ಚಿತ್ರದ ಹೆಸರು “ಫಿಸಿಕ್ಸ್ ಟೀಚರ್’.
ಚಿತ್ರದ ಹೆಸರೇ ಹೇಳುವಂತೆ, “ಫಿಸಿಕ್ಸ್ ಟೀಚರ್’ ಭೌತಶಾಸ್ತ್ರದ ಶಿಕ್ಷಕ ಮತ್ತು ಅವನ ಜೀವನದ ಸುತ್ತ ನಡೆಯುವ ಚಿತ್ರ. ಈ ಹಿಂದೆ “ರಾಜಸ್ಥಾನ್ ಡೈರೀಸ್’ ಚಿತ್ರದಲ್ಲಿ ಅಭಿನಯಿಸಿದ್ದ ಯುವ ನಟ ಸುಮುಖ ಈ ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದು, ಜೊತೆಗೆ ಚಿತ್ರದ ನಿರ್ದೇಶನದ ಜವಾಬ್ದಾರಿಯನ್ನೂ ಹೊತ್ತುಕೊಂಡಿದ್ದಾರೆ.
ಪ್ರೇರಣಾ ಕಂಬಂ ಚಿತ್ರದಲ್ಲಿ ನಾಯಕಿಯಾಗಿದ್ದು, ಉಳಿದಂತೆ ರಾಜೇಶ್ ನಟರಂಗ, ಮಂಡ್ಯ ರಮೇಶ್ ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯ “ಫಿಸಿಕ್ಸ್ ಟೀಚರ್’ ಚಿತ್ರದ ಪ್ರೀ-ಪ್ರೊಡಕ್ಷನ್ ಕೆಲಸ ಅಂತಿಮ ಹಂತದಲ್ಲಿರುವ ಚಿತ್ರತಂಡ, ಇತ್ತೀಚೆಗೆ ಚಿತ್ರದ ಮೊದಲ ಟೀಸರ್ ಬಿಡುಗಡೆ ಮಾಡಿದೆ.
“ಪಾಸಿಂಗ್ ಶಾಟ್ಸ್ ಫಿಲ್ಮ್’ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ “ಫಿಸಿಕ್ಸ್ ಟೀಚರ್’ ಚಿತ್ರದಲ್ಲಿ ಮೂರು ಹಾಡುಗಳಿದ್ದು, ಸ್ಕಂದ ಸುಬ್ರಮಣ್ಯ ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಚಿತ್ರಕ್ಕೆ ರಘು ಗ್ಯಾರಹಳ್ಳಿ ಛಾಯಾಗ್ರಹಣ, ಅಜಯ್ ಕುಮಾರ್ ಸಂಕಲನವಿದೆ.
ಇದೇ ಅ. 7ರಿಂದ ಚಿತ್ರದ ಚಿತ್ರೀಕರಣ ಶುರುವಾಗಲಿದ್ದು, ಬೆಂಗಳೂರು ಸುತ್ತಮುತ್ತ ಮೂರು ಪ್ರಮುಖ ಸ್ಥಳಗಳಲ್ಲಿ ಚಿತ್ರದ ಚಿತ್ರೀಕರಣ ನಡೆಸಲು ಚಿತ್ರತಂಡ ಪ್ಲಾನ್ ಹಾಕಿಕೊಂಡಿದೆ. ಎಲ್ಲ ಅಂದುಕೊಂಡಂತೆ ನಡೆದರೆ, ಇದೇ ತಿಂಗಳಾಂತ್ಯಕ್ಕೆ ಚಿತ್ರೀಕರಣ ಮುಗಿಯುವ ಯೋಜನೆಯಲ್ಲಿರುವ ಚಿತ್ರತಂಡ, ಇದೇ ವರ್ಷದ ಕೊನೆಗೆ ಅಥವಾ ಹೊಸ ವರ್ಷದ ಆರಂಭದಲ್ಲಿ ಚಿತ್ರವನ್ನು ತೆರೆಗೆ ತರುವ ಯೋಚನೆಯಲ್ಲಿದೆ.