Advertisement

ದೈಹಿಕ ಶಿಕ್ಷಕರು ಇನ್ಮೇಲೆ ಶೌಚಾಲಯವನ್ನೂ ಕಟ್ಟಿಸಬೇಕು!

08:26 AM Dec 02, 2017 | Team Udayavani |

ಹಾವೇರಿ: ಜಿಲ್ಲೆಯನ್ನು ಬಯಲು ಶೌಚಮುಕ್ತಗೊಳಿಸಲು ನಿರ್ಧರಿಸಿರುವ ಜಿಲ್ಲಾಡಳಿತ ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದಕ್ಕಾಗಿ ದೈಹಿಕ ಶಿಕ್ಷಕರನ್ನು ಬಳಸಿಕೊಳ್ಳುತ್ತಿದೆ. ಜಿಲ್ಲೆಯಲ್ಲಿ 300ಕ್ಕೂ ಹೆಚ್ಚು ದೈಹಿಕ ಶಿಕ್ಷಕರಿದ್ದು, ಇದರಲ್ಲಿ ಆರಂಭಿಕ ಹಂತವಾಗಿ ಹಾವೇರಿ ತಾಲೂಕಿನ 60ಕ್ಕೂ ಹೆಚ್ಚು ದೈಹಿಕ ಶಿಕ್ಷಕರನ್ನು ಬಳಸಿಕೊಳ್ಳಲಾಗುತ್ತಿದೆ. ಅಷ್ಟೇ ಅಲ್ಲ ಶೌಚಖಾನೆ ನಿರ್ಮಾಣದ  ಮೇಲುಸ್ತುವಾರಿಯನ್ನೂ ಇವರ ಹೆಗಲಿಗೆ ವಹಿಸಲಾಗಿದೆ.

Advertisement

ದೈಹಿಕ ಶಿಕ್ಷಕರು ನಿತ್ಯ ಒಂದು ಹಳ್ಳಿಯನ್ನು ಆಯ್ಕೆ ಮಾಡಿಕೊಂಡು ಹೋಗಬೇಕು. ಅಲ್ಲಿ ಬೆಳಗ್ಗೆಯಿಂದ ಸಂಜೆವರೆಗೆ ಮನೆ ಮನೆ ಭೇಟಿ ನೀಡಿ ಶೌಚಗೃಹ ನಿರ್ಮಿಸಿಕೊಳ್ಳುವಂತೆ ಜನರ ಮನವೊಲಿಸಬೇಕು. ಒಂದು ಹಳ್ಳಿಯಲ್ಲಿ ಜಾಗೃತಿ ಹಾಗೂ ಶೌಚಖಾನೆ ನಿರ್ಮಾಣ ಕಾರ್ಯ ಪೂರ್ಣಗೊಂಡ ಬಳಿಕ ಮತ್ತೂಂದು ಹಳ್ಳಿಯನ್ನು ಆಯ್ಕೆ ಮಾಡಿಕೊಂಡು ಅಲ್ಲಿಗೆ ಹೋಗಬೇಕು. ಇಡೀ ಜಿಲ್ಲೆಯನ್ನು ಕಳೆದ ಅಕ್ಟೋಬರ್‌ 2ರೊಳಗೆ ಬಯಲು ಶೌಚಮುಕ್ತಗೊಳಿಸುವ ಗುರಿ ಹಾಕಿಕೊಳ್ಳಲಾಗಿತ್ತು. ಆದರೆ, ಅದು ಸಾಧ್ಯವಾಗಿಲ್ಲ. ಕೇವಲ ಶಿಗ್ಗಾವಿ ತಾಲೂಕನ್ನು ಮಾತ್ರ ಅಂದು ಬಯಲು ಬಹಿರ್ದೆಸೆ ಮುಕ್ತ ತಾಲೂಕು ಎಂದು ಘೋಷಿಸಲಾಯಿತು. ಈಗ 50ಕ್ಕೂ ಹೆಚ್ಚು
ಗ್ರಾಪಂಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಶೌಚಾಲಯ ನಿರ್ಮಿಸಲಾಗಿದ್ದು, ಪ್ರಸಕ್ತ ವರ್ಷ ಒಟ್ಟು 24,258ಕ್ಕೂ ಹೆಚ್ಚು ಶೌಚಾಲಯ ನಿರ್ಮಿಸಲಾಗಿದೆ. ಇನ್ನೂ 80 ಸಾವಿರಕ್ಕೂ ಅಧಿ ಕ ಶೌಚಾಲಯ ನಿರ್ಮಿಸಬೇಕಿದೆ. ಇದರಲ್ಲಿ ಶೇ.100ರಷ್ಟು ಪ್ರಗತಿ ಸಾಧಿಸಲು ಜಿಲ್ಲಾಡಳಿತ ದೈಹಿಕ ಶಿಕ್ಷಕರನ್ನು ಬಳಸಿಕೊಳ್ಳುತ್ತಿದೆ.

ಶೌಚಾಲಯ ಉಸ್ತುವಾರಿ: ಶಿಕ್ಷಕರು ಮನೆ ಮನೆಗೆ ಹೋಗಿ ಶೌಚಾಲಯ ಕಟ್ಟಿಸಿಕೊಳ್ಳುವಂತೆ ಪ್ರೇರಣೆ ನೀಡುವುದಷ್ಟೇ ಅಲ್ಲ. ಸ್ವತಃ ಸ್ಥಳದಲ್ಲಿ ನಿಂತು ಶೌಚಾಲಯ ಕಟ್ಟಡ ನಿರ್ಮಾಣ ಕಾಮಗಾರಿ ಮೇಲುಸ್ತುವಾರಿ ವಹಿಸಬೇಕಿದೆ. ಈ ಕಾರ್ಯದಲ್ಲಿ
ಭಾಗಿಯಾಗಿರುವ ಬಗ್ಗೆ ಹಾಜರಾತಿ, ಎಷ್ಟು ಜನರ ಮನವೊಲಿಕೆ, ಎಷ್ಟು ಶೌಚಖಾನೆ ಕಟ್ಟಿಸಿದ್ದೇವೆ ಎಂಬ ವರದಿಯನ್ನು ಶಿಕ್ಷಕರು ಗ್ರಾಪಂ ಅಭಿವೃದ್ಧಿ ಅಧಿಕಾರಿಗೆ ನೀಡಬೇಕಿದೆ.

ಮೌಖೀಕ ಆದೇಶ: ಶೌಚಾಲಯ ನಿರ್ಮಿಸಿಕೊಳ್ಳಲು ಪ್ರೇರೇಪಿಸುವ ಕಾರ್ಯಕ್ಕೆ ದೈಹಿಕ ಶಿಕ್ಷಕರನ್ನು ನೇಮಿಸಿರುವ ಕುರಿತು ಜಿಲ್ಲಾಡಳಿತ ಯಾವುದೇ ಲಿಖೀತ ಆದೇಶ ಮಾಡಿಲ್ಲ. ಬದಲಾಗಿ ಜಿಪಂ ಸಿಇಒ ಉಪನಿರ್ದೇಶಕರಿಗೆ, ಉಪನಿರ್ದೇಶಕರು ಎಲ್ಲ
ಬಿಇಒಗಳಿಗೆ ಮೌಖೀಕ ಆದೇಶ ಮಾಡಲಾಗಿದೆ. 

ದೈಹಿಕ ಶಿಕ್ಷಕರ ಬಳಕೆಗೆ ಆಕ್ಷೇಪ: ಶೌಚಾಲಯ ನಿರ್ಮಿಸಿಕೊಳ್ಳುವಂತೆ ಪ್ರೇರೇಪಿಸುವ ಕಾರ್ಯ ಒಳ್ಳೆಯದೆ. ಆದರೆ, ಸರ್ಕಾರ ಎಲ್ಲ ಕೆಲಸಗಳಿಗೂ ಶಾಲಾ ಶಿಕ್ಷಕರನ್ನು ಬಳಸಿಕೊಳ್ಳುತ್ತದೆ. ಶಿಕ್ಷಣ ಬಿಟ್ಟು ಬೇರೆ ಕೆಲಸಗಳಿಗೆ ಶಿಕ್ಷಕರನ್ನು ಬಳಸಿಕೊಳ್ಳುತ್ತಿರುವುದಕ್ಕೆ ಪ್ರಜ್ಞಾವಂತರಿಂದ ಆಕ್ಷೇಪ ವ್ಯಕ್ತವಾಗಿದೆ. 

Advertisement

ಕ್ಷೇತ್ರ ಶಿಕ್ಷಣಾಧಿಕಾರಿಯವರು ನಮಗೆ ಇಂದು ಕುರುಬಗೊಂಡ ಗ್ರಾಮಕ್ಕೆ ಬರಲು ಸೂಚಿಸಿದ್ದಾರೆ. ಅಲ್ಲಿ ದೈಹಿಕ ಶಿಕ್ಷಕರು ಹೋಗಿ  ಸಂಜೆವರೆಗೂ ಮನೆ ಮನೆ ಓಡಾಡಿ ಶೌಚಾಲಯ ಕಟ್ಟಿಸಿ ಕೊಳ್ಳುವಂತೆ ಮನ ವರಿಕೆ ಮಾಡ ಬೇಕಿದೆ. ಜಿಲ್ಲೆಯ ಎಲ್ಲ ಹಳ್ಳಿಗಳು ಬಯಲು ಶೌಚಮುಕ್ತ ಆಗುವ ವರೆಗೆ ಬಿಇಒ ಸೂಚಿಸಿದ ಹಳ್ಳಿಗೆ ಹೋಗಿ ಅರಿವು ಮೂಡಿಸಿ, ಶೌಚಖಾನೆ ನಿರ್ಮಿಸು ವವರೆಗೂ ಮೇಲುಸ್ತುವಾರಿ ವಹಿಸಬೇಕು.
 ● ಹೆಸರು ಹೇಳಲಿಚ್ಚಿಸದ ದೈಹಿಕ ಶಿಕ್ಷಕರು

ಶೌಚಾಲಯ ಕಟ್ಟಿಸುವ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ನಾವು ಯಾವ ಶಿಕ್ಷಕರನ್ನು ಎಲ್ಲಿಯೂ ಅಧಿಕೃತವಾಗಿ ನಿಯೋಜಿಸಿಲ್ಲ. ಜಿಪಂ ಸಿಇಒ ಹಾಗೂ ಇಒ ಅವರ ಸೂಚನೆ ಮೇರೆಗೆ ಶಾಲಾ ಅವಧಿ ಬಿಟ್ಟು ಉಳಿದ ಅವಧಿ ಹಳ್ಳಿಗೆ ಹೋಗಿ ಜನರ ಮನವೊಲಿಸಲು, ಶೌಚಖಾನೆ ನಿರ್ಮಾಣದ ಮೇಲುಸ್ತುವಾರಿ ವಹಿಸಲು ಸೂಚಿಸಿದ್ದೇವೆ.
 ●ಸಿ. ಶಿವಣ್ಣ, ಕ್ಷೇತ್ರ ಶಿಕ್ಷಣಾಧಿಕಾರಿ

ಎಚ್‌.ಕೆ. ನಟರಾಜ

Advertisement

Udayavani is now on Telegram. Click here to join our channel and stay updated with the latest news.

Next