Advertisement

ಹೆಚ್ಚುವರಿ ದೈಹಿಕ ಶಿಕ್ಷಣ ಶಿಕ್ಷಕರ ವರ್ಗಾವಣೆ?

09:57 AM Aug 31, 2018 | |

ಬೆಳ್ಮಣ್‌: ಇನ್ನೂರಕ್ಕಿಂತ ಕಡಿಮೆ ವಿದ್ಯಾರ್ಥಿಗಳು ಇರುವ ಸರಕಾರಿ ಶಾಲೆಗಳ ದೈಹಿಕ ಶಿಕ್ಷಣ ಶಿಕ್ಷಕರನ್ನು ಹೆಚ್ಚುವರಿ ಎಂದು ಪರಿಗಣಿಸಿ ಬೇರೆಡೆ ನಿಯೋಜಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
ಈ ಹಿಂದೆ ವಿದ್ಯಾರ್ಥಿ-ಶಿಕ್ಷಕರ ಅನುಪಾತದಡಿ ಇತರ ಶಿಕ್ಷಕರನ್ನು ಹೆಚ್ಚುವರಿ ಎಂದು ಇಲಾಖೆ ಗುರುತಿಸಿತ್ತು. ಈಗ ದೈಹಿಕ ಶಿಕ್ಷಣ ಶಿಕ್ಷಕರನ್ನೂ ಅದೇ ಮಾನದಂಡದಡಿ ಹೆಚ್ಚುವರಿ ಎಂದು ಗುರುತಿಸಿ ಆದೇಶ ಹೊರಡಿಸಿದೆ. ಜತೆಗೆ ನಿಯೋಜನೆಗೆ ದಿನ ನಿಗದಿ ಪಡಿಸುತ್ತಿದೆ. ಎಳವೆಯಿಂದಲೇ ಕ್ರೀಡೆ ಬಗ್ಗೆ ಪ್ರೀತಿ ಬೆಳೆಸಿ ಕ್ರೀಡಾಪಟುಗಳನ್ನು ರೂಪಿಸಲು ಎಲ್ಲ ಶಾಲೆಗಳಲ್ಲಿ ದೈ. ಶಿಕ್ಷಣ ಶಿಕ್ಷಕರನ್ನು ಕಡ್ಡಾಯವಾಗಿ ನೇಮಿಸುವುದಾಗಿ ಸರಕಾರ ಹೇಳಿತ್ತು.

Advertisement

ಜಿಲ್ಲೆಯಲ್ಲಿ  ಹೆಚ್ಚುವರಿ ಸಂಖ್ಯೆ
ಕಾರ್ಕಳ ತಾಲೂಕಿನ‌ 33 ಶಾಲೆಗಳ ಪೈಕಿ 28, ಕುಂದಾಪುರದ 29ರಲ್ಲಿ 25, ಉಡುಪಿಯ 13ರ ಪೈಕಿ 9, ಬ್ರಹ್ಮಾವರದ 31ರ ಪೈಕಿ 26, ಬೈಂದೂರಿನ 38ರ ಪೈಕಿ 31 ಮಂದಿ ದೈಹಿಕ ಶಿಕ್ಷಣ ಶಿಕ್ಷಕರನ್ನು ಹೆಚ್ಚುವರಿ ಎಂದು ಗುರುತಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆ ಯಲ್ಲಿ ಒಟ್ಟು 168 ಮಂದಿ ದೈಹಿಕ ಶಿಕ್ಷಣ ಶಿಕ್ಷಕರು ವರ್ಗಾವಣೆಯ ಗೊಂದಲ ಎದುರಿಸುತ್ತಿದ್ದಾರೆ. ಇವರನ್ನು ಇಳಿಕೆ ಕ್ರಮದ ಆಧಾರದಲ್ಲಿ ಕೌನ್ಸಿಲಿಂಗ್‌ ನಡೆಸಿ ಇತರ ಶಾಲೆಗಳಿಗೆ ನಿಯೋಜಿಸುವ ಇರಾದೆ ಇದೆ. ಜತೆಗೆ ಕಡಿಮೆ ವಿದ್ಯಾರ್ಥಿಗಳಿರುವಲ್ಲಿನ ಶಿಕ್ಷಕರನ್ನು ದೈಹಿಕ ಶಿಕ್ಷಕರಿಲ್ಲದ ಹೆಚ್ಚು ವಿದ್ಯಾರ್ಥಿಗಳಿರುವ ಶಾಲೆಗಳಿಗೆ ಕಳುಹಿಸಲೂ ಸಾಮೂಹಿಕವಾಗಿ ಕೌನ್ಸೆಲಿಂಗ್‌ ನಡೆಸುವ ಆಲೋಚನೆಯೂ ಇದೆ.

ಈ ವರ್ಷದ ಮೊದಲಿಗೆ 60 ವಿದ್ಯಾರ್ಥಿಗಳಿರುವ ಶಾಲೆಗಳ ಅಗತ್ಯ ಅನುಸರಿಸಿ ಮುಖ್ಯ ಶಿಕ್ಷಕರನ್ನು ನೇಮಿಸಿದ್ದ ಮಾದರಿಯಲ್ಲೇ 60 ವಿದ್ಯಾರ್ಥಿ ಗಳಿರುವ ಶಾಲೆಗಳಿಗೆ ಕಡ್ಡಾಯವಾಗಿ ದೈಹಿಕ ಶಿಕ್ಷಣ ಶಿಕ್ಷಕರನ್ನು ನೇಮಿಸಬೇಕು. ಇಲ್ಲವಾದರೆ, ಇನ್ನೊಂದು ಶಾಲೆಗೆ ಹೋಗಿ ಅಲ್ಲಿಯೂ ಮುಂದೆ ಹೆಚ್ಚುವರಿ ಎಂದಾದರೆ ಎಂಬುದು ಜಿಲ್ಲಾ ಶಿಕ್ಷಕರ ಸಂಘದ ಆತಂಕ.

ಹೋದಲ್ಲಿ  ಇನ್ನೂರು ಇದೆಯೇ?
ಆದೇಶದ ಪ್ರಕಾರ ಇನ್ನೊಂದು ಶಾಲೆಗೆ ಹೋಗಬೇಕು. ಆದರೆ ಜಿಲ್ಲೆಯ 144 ಶಾಲೆಗಳಲ್ಲಿ ದೈಹಿಕ ಶಿಕ್ಷಕರಿದ್ದು, ಕೇವಲ 26 ಶಾಲೆಗಳಲ್ಲಿ ಮಾತ್ರ 200ಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. ಆದ ಕಾರಣ 118 ಮಂದಿ ಗೊಂದಲದಲ್ಲಿದ್ದಾರೆ.

ಇವರೇ ಮುಖ್ಯೋಪಾಧ್ಯಾಯರು 
ಕಾರ್ಕಳ ತಾಲೂಕಿನ ನಾಯರ್‌ಕೋಡು, ಕನ್ಯಾನ ಹಾಗೂ ಇನ್ನಾ ಶಾಲೆಗಳಲ್ಲಿ ದೈಹಿಕ ಶಿಕ್ಷಕರೇ ಮುಖ್ಯ ಶಿಕ್ಷಕರು. ಅದರಲ್ಲೂ ಇನ್ನಾ ಶಾಲೆಯ ರವೀಂದ್ರನ್‌ ಏಕೋಪಾಧ್ಯಾಯರು. ಇಂಥವುಗಳಿಗೆ ಆದೇಶದಲ್ಲಿ 
ಪರಿಹಾರ ಸೂಚಿಸದಿರುವುದು ಗೊಂದಲವನ್ನು ಹೆಚ್ಚಿಸಿದೆ. 

Advertisement

ಹೆಚ್ಚುವರಿ ದೈಹಿಕ ಶಿಕ್ಷಕರ ನಿಯೋಜನೆ ಕುರಿತು ತಂತ್ರಾಂಶದಲ್ಲಿ ಬದಲಾವಣೆಗಳನ್ನು ಕೈಗೊಳ್ಳುವ ಸಲುವಾಗಿ
ಆ. 26 ಹಾಗೂ 27ರಂದು ನಡೆಯಬೇಕಾಗಿದ್ದ ಕೌನ್ಸೆಲಿಂಗನ್ನು  ಮುಂದೂಡಲಾಗಿದೆ ಎಂದು ಇಲಾಖೆ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ.
ಶೇಷಶಯನ ಕಾರಿಂಜ
ಉಡುಪಿ ಜಿಲ್ಲಾ  ವಿದ್ಯಾಂಗ ಉಪನಿರ್ದೇಶಕ

ಶಿಕ್ಷಕರ ಎಲ್ಲ ಸಂಘಟನೆಗಳು 
ಹಾಗೂ ಶಿಕ್ಷಕ ಕ್ಷೇತ್ರದ ಜನಪ್ರತಿನಿಧಿ ಗಳು ಆಕ್ಷೇಪಿಸಿದ್ದರಿಂದ ಕೌನ್ಸೆಲಿಂಗ್‌ ನಿಲ್ಲಿಸಲಾಗಿದೆ. ಕನಿಷ್ಠ 100 ವಿದ್ಯಾರ್ಥಿಗಳಿರುವ ಶಾಲೆಗಳಿಗಾದರೂ ಶಿಕ್ಷಕರ ನೇಮಕವಾಗಬೇಕು ಎಂದು ಇಲಾಖೆಯ ಆಯುಕ್ತರನ್ನು 
ಆಗ್ರಹಿಸುತ್ತೇವೆ. ಈಗಾಗಲೇ ಜನಪ್ರತಿನಿಧಿಗಳ ಮೂಲಕ ಆಯುಕ್ತ ರಿಗೆ ಮನವಿ ಮಾಡಲಾಗಿದೆ, ಭರವಸೆಯೂ ಸಿಕ್ಕಿದೆ.
-ಗುಜ್ಜಾಡಿ ಚಂದ್ರಶೇಖರ ಶೆಟ್ಟಿ
ಉಡುಪಿ ಜಿಲ್ಲೆಯ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ
 

* ಶರತ್‌ ಶೆಟ್ಟಿ  ಬೆಳ್ಮಣ್‌

Advertisement

Udayavani is now on Telegram. Click here to join our channel and stay updated with the latest news.

Next