Advertisement

ಶಿಕ್ಷಣ ಕ್ಷೇತ್ರಕ್ಕೆ ಫುಲೆ ದಂಪತಿ ಕೊಡುಗೆ ಅವಿಸ್ಮರಣೀಯ

12:44 PM Jan 04, 2017 | |

ದಾವಣಗೆರೆ: ಮಹಿಳೆಯರು ಅತ್ಯಂತ ಮುಕ್ತವಾಗಿ ವಿದ್ಯಾಭ್ಯಾಸ ಮಾಡುವಂತಹ ವಾತಾವರಣ ನಿರ್ಮಾಣದಲ್ಲಿ ಜ್ಯೋತಿ ಬಾ ಫುಲೆ ಮತ್ತು ಸಾವಿತ್ರಿ ಬಾ ಫುಲೆ ಅವಿಸ್ಮರಣೀಯ ಕೊಡುಗೆ ಇದೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯ ಡಾ| ಮಲ್ಲಿಕಾರ್ಜುನಕಲಮರಲಹಳ್ಳಿ ಸ್ಮರಿಸಿದರು. 

Advertisement

ಮಂಗಳವಾರ ರೋಟರಿ ಬಾಲಭವನದಲ್ಲಿ ಮಾನವ ಬಂಧುತ್ವ ವೇದಿಕೆಯಿಂದ ಹಮ್ಮಿಕೊಂಡಿದ್ದ ಸಾವಿತ್ರಿ ಫುಲೆ ಜಯಂತಿ, ಉಪನ್ಯಾಸ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, ಮಹಿಳೆಯರು, ದಲಿತರು, ಶೋಷಿತರು ಶಿಕ್ಷಣವಂತರಾಗಲು ವೇದಿಕೆಯನ್ನ ನಿರ್ಮಾಣ ಮಾಡಿಕೊಟ್ಟಿರುವ ಜ್ಯೋತಿ ಫುಲೆ ಮತ್ತು ಸಾವಿತ್ರಿ ಫುಲೆ ಅವರನ್ನು ಸ್ಮರಿಸುವುದು ಎಲ್ಲರ ಆದ್ಯ ಜವಾಬ್ದಾರಿ ಕರ್ತವ್ಯ ಎಂದರು. 

ಜ್ಯೋತಿ ಫುಲೆ ಮತ್ತು ಸಾವಿತ್ರಿ ಫುಲೆ ಅವರ ಕಾಲಘಟ್ಟದಲ್ಲಿ ಸಾಮಾಜಿಕ ಪರಿಸ್ಥಿತಿ ಮತ್ತು ಮಹಿಳೆಯರನ್ನು ನೋಡುತ್ತಿದ್ದ ರೀತಿ ಅತಿ ಕೆಟ್ಟದ್ದಾಗಿತ್ತು. ಆಡಳಿತ ನಡೆಸುತ್ತಿದ್ದ ಪೇಶ್ವೆಗಳು ಮನುಸ್ಮೃತಿ ಯನ್ನು ಅನುಷ್ಠಾನಕ್ಕೆ ತರುವುದಕ್ಕೆ ಕಟಿಬದ್ಧರಾಗಿದ್ದರು. ದಲಿತರು, ಮಹಿಳೆಯರು ಅಕ್ಷರ ಕಲಿಯುವುದು ನಿಷಿದ್ಧವಾಗಿತ್ತು.

ಅಂತಹ ವಾತಾವರಣದಲ್ಲಿ ಜ್ಯೋತಿ ಬಾಯಿ ಫುಲೆ ಮತ್ತು ಸಾವಿತ್ರಿ ಬಾ ಫುಲೆ ದಂಪತಿ ಮನುವಾದಿಕೊಳ್ಳಿಗಳ ನಡುವೆಯೂ ಶಿಕ್ಷಣದ ಜ್ಯೋತಿ ಬೆಳಗಿಸಿದಂಥಹ ಆದರ್ಶಪ್ರಾಯರು ಎಂದು ತಿಳಿಸಿದರು. ಆ ಕಾಲದಲ್ಲಿ ಅಸ್ಪೃಶ್ಯರ ಸ್ಥಿತಿ ಅತ್ಯಂತ ದಯನೀಯವಾಗಿತ್ತು. ಮನುವಾದಿಸ್ಮೃತಿಯಿಂದಾಗಿ ಲಿಂಗ ತಾರತಮ್ಯ ಇತ್ತು.

ದಲಿತರು ಅಕ್ಷರ ಕಲಿಯುವುದು ಇರಲಿ ಹಗಲಿನ ವೇಳೆ ಮುಕ್ತವಾಗಿ ಓಡಾಡುವಂತರಲಿಲ್ಲ. ದಲಿತರ ನೆರಳು ಸಹ ಮೇಲ್ವರ್ಗದವರ ಮೇಲೆ ಬೀಳುವಂತೆ ಇರಲಿಲ್ಲ. ಹಾಗಾಗಿ ಅವರು ಸಂಜೆ ಮಾತ್ರ ರಸ್ತೆಯಲ್ಲಿ ಓಡಾಡಬೇಕಾಗುತ್ತಿತ್ತು. ರಸ್ತೆಯಲ್ಲಿ ಉಗುಳುವಂತಿರಲಿಲ್ಲ. ಕೊರಳಿಗೆ ಚಿಪ್ಪು ಕಟ್ಟಿಕೊಂಡು ಅದರಲ್ಲೇ ಉಗುಳಬೇಕಾಗುತ್ತಿತ್ತು. 

Advertisement

ಇಂತದ್ದೆನ್ನೆಲ್ಲಾ ಎದುರಿಸಿ ಜ್ಯೋತಿ ಫುಲೆ ಮತ್ತು ಸಾವಿತ್ರಿ ಫುಲೆ ದಂಪತಿ ದಲಿತರು, ಮಹಿಳೆಯರಿಗೆ ಶಿಕ್ಷಣ ಕೊಟ್ಟಿದ್ದು ಅಸಾಮಾನ್ಯ ಸಂಗತಿ ಎಂದು ಬಣ್ಣಿಸಿದರು. ದಲಿತರು ಮತ್ತು ಮಹಿಳೆಯರಿಗೆ ಅಕ್ಷರ ಕಲಿಸುವುದಕ್ಕಾಗಿಯೇ ಜ್ಯೋತಿ ಫುಲೆ ಅವರು ಸಾವಿತ್ರಿ ಫುಲೆಗೆ ಅಕ್ಷರಭ್ಯಾಸ ಮಾಡಿಸಿದರು.

ಅದು ಕಾಡಿನಲ್ಲಿ ಮರಗಳ ತೊಗಟೆಯಲ್ಲಿ ಎಂಬುದನ್ನು ಗಮನಿಸಬೇಕು. ದಲಿತರು, ಮಕ್ಕಳಿಗಾಗಿ ಶಾಲೆ ತೆರದ ನಂತರ ಕೇವಲ 8 ಜನ ಮಾತ್ರ ಸೇರಿದ್ದರು. ಪಾಠ ಮಾಡಲು ಬರುತ್ತಿದ್ದ ಸಾವಿತ್ರಿ ಬಾಯಿ ಫುಲೆ ಮೇಲೆ ಮನುವಾದಿಗಳು ಕಲ್ಲು, ಸಗಣಿ ತೂರುತ್ತಿದ್ದರು. ದಲಿತರು ಮತ್ತು ಮಹಿಳೆಯರಿಗೆ ಅಕ್ಷರ ಕಲಿಸುವುದು ರಾಷ್ಟ್ರೀಯ ಗೌರವಕ್ಕೆ ಮಾಡುವ ಅಪಮಾನ, ಧರ್ಮದ್ರೋಹ ಎಂದೆಲ್ಲಾ ಕರೆದರು.

ಆದರೂ, ಸಾವಿತ್ರಿ ಬಾ ಫುಲೆ ದಲಿತರು ಮತ್ತು ಮಹಿಳೆಯರಿಗೆ ಅಕ್ಷರ ಕಲಿಸುವುದರಿಂದ ಹಿಂದೆ ಸರಿಯಲಿಲ್ಲ ಎಂದು ಸ್ಮರಿಸಿದರು. ಜಿಪಂ ಸದಸ್ಯ ತೇಜಸ್ವಿ ಪಟೇಲ್‌ ಮಾತನಾಡಿ, ಸದೃಢ ವ್ಯಕ್ತಿತ್ವ ನಿರ್ಮಾಣಕ್ಕೆ ಶಿಕ್ಷಣ ಅತ್ಯಗತ್ಯ ಎಂಬುದನ್ನು ಮನಗಂಡಿದ್ದ ಸಾವಿತ್ರಿ ಬಾಯಿ ಫುಲೆ ದಲಿತರು, ಮಹಿಳೆಯರಿಗೆ ಶಿಕ್ಷಣ ಕೊಟ್ಟರು. 

ಅವರ ಪ್ರೇರಣೆಯಿಂದ ಒಂದಷ್ಟು ಬದಲಾವಣೆ ಹೊಂದುವ ಮೂಲಕ ಅವರಿಗೆ ನಿಜವಾದ ಗೌರವ ಸಲ್ಲಿಸಬೇಕು. ದೇಶದ ಒಟ್ಟಾರೆ ಅಭಿವೃದ್ಧಿಯಾಗಲು ಜಾತಿ, ಲಿಂಗ ತಾರತಮ್ಯ ದೂರ ಆಗಬೇಕು. ಯಾವುದೇ ಹೋರಾಟ, ಚಳವಳಿ ಮಾಡದೆ ಬರೀ ನಾಲಿಗೆಯಲ್ಲಿ ದೇಶಪ್ರೇಮ ತೋರಿಸುತ್ತಿರುವರಿಗೆ ಶಿಕ್ಷಣದ ಮೂಲಕ ನೈಜ ದೇಶಪ್ರೇಮ ತೋರಿಸುವಂತಾಗಬೇಕು ಎಂದರು.
 
ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ಬಸವರಾಜ್‌ ದೊಡ್ಮನಿ ಅಧ್ಯಕ್ಷತೆ ವಹಿಸಿದ್ದರು. ಮಾನವ ಬಂಧುತ್ವ ವೇದಿಕೆ ಜಿಲ್ಲಾ ಸಂಚಾಲಕ ರಾಘು ದೊಡ್ಡಮನಿ ಪ್ರಾಸ್ತಾವಿಕ ಮಾತುಗಳಾಡಿದರು. ವಕೀಲ ಅನೀಸ್‌ ಪಾಷಾ ಇತರರು ಇದ್ದರು.  

Advertisement

Udayavani is now on Telegram. Click here to join our channel and stay updated with the latest news.

Next