Advertisement

ಪ್ರವಾಸೋದ್ಯಮ ಚಿವುಟುತ್ತಿರುವ ನೌಕರಶಾಹಿ

09:44 AM Apr 21, 2022 | Team Udayavani |

ಹೊನ್ನಾವರ: ನೆರೆಯ ಕೇರಳ, ಗೋವಾಗಳಲ್ಲಿ ಮಾತ್ರವಲ್ಲ ದಕ್ಷಿಣಕನ್ನಡದಲ್ಲೂ ಪ್ರವಾಸೋದ್ಯಮ ಅಪೂರ್ವ ಬೆಳವಣಿಗೆ ಕಂಡಿರುವಾಗ ಜಿಲ್ಲೆಯಲ್ಲಿ ಇತ್ತೀಚಿನ ವರ್ಷ ಚಿಗುರುತ್ತಿರುವ ಪ್ರವಾಸೋದ್ಯಮವನ್ನು ಚಿವುಟುವ ಕೆಲಸ ನೌಕರಶಾಹಿಯಿಂದ ನಡೆಯುತ್ತಿದೆ.

Advertisement

25 ಇಲಾಖೆಗಳ ಎನ್‌ಒಸಿ ನೆಪವೊಡ್ಡಲಾಗುತ್ತಿದೆ. ಜಲಸಾಹಸ ಕ್ರೀಡೆಯಲ್ಲಿ ಒಂದು ಅಪಘಾತ ನಡೆದರೆ ಆ ಕ್ರೀಡೆಯನ್ನೇ ನಿಷೇಧಿಸುವ ಕೆಲಸ ಕಾಳಿದಂಡೆಯಲ್ಲಿ ನಡೆದಿದೆ. ತಪ್ಪಿದ್ದರೆ ತಿದ್ದಿ, ದಂಡ ಹಾಕಿ, ನೂರಾರು ಜನರ ಜೀವನಾಧಾರ ಆಗುವ ಪ್ರವಾಸೋದ್ಯಮದ ಚಿಗುರನ್ನು ಚಿವುಟುವುದನ್ನು ನೋಡುತ್ತ ಕುಳಿತುಕೊಂಡಿರುವ ಜನಪ್ರತಿನಿಧಿಗಳು ಎಚ್ಚರಾಗಿ ಎಂದು ಹೇಳಬೇಕಾಗಿದೆ.

ಮೊಸಳೆ ಪಾರ್ಕ್‌ನಿಂದ ಒಂದು ಮೊಸಳೆ ನಗರಕ್ಕೆ ಬಂದರೆ ಪಾರ್ಕ್‌ನ ಅಗತ್ಯವನ್ನೇ ಪ್ರಶ್ನಿಸುವುದು ಸರಿಯಲ್ಲ. ಮುರ್ಡೇಶ್ವರದಲ್ಲಿ ಸ್ಕೂಬಾ ಡೈವಿಂಗ್‌ ನಡೆದಿದೆ. ಜಲಸಾಹಸ ಕ್ರೀಡೆಗಳು ಎಷ್ಟೇ ಸುರಕ್ಷಿತ ಕ್ರಮಕೈಗೊಂಡರೂ ಅಪಾಯದ ಸಾಧ್ಯತೆ ಇದ್ದೇ ಇರುತ್ತದೆ. ಇದು ಗೊತ್ತಿದ್ದೇ ಪ್ರವಾಸಿ ಯುವಕರು ಸಾಹಸಕ್ಕಿಳಿಯುತ್ತಾರೆ.

ದಾಂಡೇಲಿ ಘಟನೆ ನಂತರ ಶರಾವತಿಯಲ್ಲಿ ನಡೆಯುವ ಮದುವೆಯ ಮೊದಲಿನ ಚಿತ್ರೀಕರಣಕ್ಕೂ ನಿರ್ಬಂಧ ವಿಧಿಸಲಾಗಿದೆ. ನೆರೆ ಬಂದ ಕಾಲದಲ್ಲೂ ಯಾರ ಜೀವಕ್ಕೂ ಅಪಾಯ ಮಾಡದ ಶರಾವತಿ ಈಗ ಪ್ರಶಾಂತವಾಗಿ ಹರಿಯುತ್ತಿರುವಾಗ ಅಪಾಯ ಮಾಡುವುದು ಸಾಧ್ಯವೇ? ಏಕಾಏಕಿ ಪ್ರಿ ವೆಡ್ಡಿಂಗ್‌ ಶೂಟಿಂಗ್‌ನ್ನು ನಿಲ್ಲಿಸಿದ ಕಾರಣ ಉತ್ತಮ ವ್ಯವಹಾರ ನಡೆಸುತ್ತಿದ್ದ ಲಾಡ್ಜ್ಗಳು, ಬೋಟ್‌ ಮಾಲಕರು ತೊಂದರೆಗೊಳಗಾಗಿದ್ದಾರೆ.

ಪ್ರವಾಸೋದ್ಯಮ ಇಲಾಖೆಯೇ ನಡೆಸುವ ಬ್ಲೂ ಫ್ಲ್ಯಾಗ್ ಕಿರೀಟ ಹೊತ್ತ ಇಕೋಬೀಚ್‌ ಬಳಿಯ ಕಡಲ ತೀರವೇ ಸುರಕ್ಷತಾ ನಿಯಮ ಪಾಲಿಸದಿರುವಾಗ ಖಾಸಗಿಯವರಿಗೆ ಅಧಿಕಾರಿಗಳು ಅತಿನಿರ್ಬಂಧ ಹೇರುವುದು ಸರಿಯಲ್ಲ. ಏಪ್ರಿಲ್‌, ಮೇ ತಿಂಗಳಲ್ಲಿ ಹೆದ್ದಾರಿ ಮೇಲೆ ಸಂಚಾರ ಎರಡು ಪಟ್ಟು ಹೆಚ್ಚುತ್ತದೆ. ಅಪಘಾತಗಳೂ ಹೆಚ್ಚುತ್ತವೆ. ಅಂದ ಮಾತ್ರಕ್ಕೆ ಹೆದ್ದಾರಿಯನ್ನೇ ಬಂದ್‌ ಮಾಡಲು ಸಾಧ್ಯವಿಲ್ಲ.

Advertisement

ಹಾಗೆಯೇ ಸಾಹಸ ಜಲಕ್ರೀಡೆ ನಡೆಯುವ ಸ್ಥಳಗಳಲ್ಲಿ ಮುರ್ಡೇಶ್ವರ, ಧಾರೇಶ್ವರ, ಗೋಕರ್ಣ, ಕಾರವಾರ ಮೊದಲಾದ ಕಡಲತಡಿಗಳಲ್ಲಿ ನದಿ ಒಳನಾಡುಗಳಲ್ಲಿ ಪ್ರವಾಸಿಗರು ಬಹುಸಂಖ್ಯೆಯಲ್ಲಿ ಓಡಾಡುವುದರಿಂದ ಅವರ ಸುರಕ್ಷತೆಗೆ ಕಾವಲುಗಾರರನ್ನು ಪ್ರವಾಸೋದ್ಯಮ ಇಲಾಖೆ ನೇಮಿಸಬೇಕೇ ವಿನಃ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಪ್ರವಾಸೋದ್ಯಮವನ್ನು ಚಿವುಟಿ ಹಾಕುವುದು ಸರಿಯಲ್ಲ. ಎಲ್ಲೂ ಇಲ್ಲದ ನಿರ್ಬಂಧಗಳನ್ನು ಜಿಲ್ಲೆಯಲ್ಲಿ ಹೇರಿದರೆ ಯಾರೂ ಪ್ರವಾಸಕ್ಕೆ ಬರಲಾರರು. ಇಲಾಖೆಗಳು ಗಮನಿಸಲಿ.

-ಜೀಯು

Advertisement

Udayavani is now on Telegram. Click here to join our channel and stay updated with the latest news.

Next