ಕಂದಹಾರ್/ ಮುಂಬೈ: ಅಫ್ಘಾನಿಸ್ಥಾನದ ಕಂದಹಾರ್ ನಲ್ಲಿ ನಡೆಯುತ್ತಿರುವ ಗಲಭೆಯಲ್ಲಿ ಭಾರತೀಯ ಫೋಟೊ ಜರ್ನಲಿಸ್ಟ್ ದ್ಯಾನಿಶ್ ಸಿದ್ದಿಕಿ ಹತ್ಯೆಯಾಗಿದೆ ಎಂದು ವರದಿಯಾಗಿದೆ.
ಪ್ರತಿಷ್ಠಿತ ಪುಲಿಟ್ಜರ್ ಪ್ರಶಸ್ತಿ ವಿಜೇತ ಫೋಟೊ ಜರ್ನಲಿಸ್ಟ್ ಆಗಿರುವ ದ್ಯಾನಿಶ್ ಸಿದ್ದಿಕಿ ಅವರು ಸುದ್ದಿ ಸಂಸ್ಥೆ ರಾಯ್ಟರ್ಸ್ ಗೆ ಕೆಲಸ ಮಾಡುತ್ತಿದ್ದರು. ಕಳೆದ ಕೆಲವು ದಿನಗಳಿಂದ ದ್ಯಾನಿಶ್ ಸಿದ್ದಿಕಿ ಕಂದಹಾರ್ ನಲ್ಲಿ ನಡೆಯುತ್ತಿರುವ ಗಲಭೆಗಳ ಫೋಟೊಗೆಂದು ಅಲ್ಲಿ ತೆರಳಿದ್ದರು. ಅಫ್ಘಾನ್ ವಿಶೇಷ ಪಡೆಯ ಭದ್ರತೆಯೊಂದಿಗೆ ಅವರು ಅಲ್ಲಿ ಕೆಲಸ ಮಾಡುತ್ತಿದ್ದರು.
ಜೂನ್ 13ರಂದು ದ್ಯಾನಿಶ್ ಸಿದ್ದಿಕಿ ವಿಶೇಷ ಪಡೆಯೊಂದಿಗೆ ಪ್ರಯಾಣಿಸುತ್ತಿದ್ದಾಗ ಅವರ ವಾಹನಗಳ ಮೇಲೆ ದಾಳಿಯಾಗಿತ್ತು. ಈ ಕುರಿತು ಅವರು ಟ್ವೀಟ್ ಮಾಡಿ, ಅದೃಷ್ಟವಶಾತ್ ನಾನು ಸುರಕ್ಷಿತವಾಗಿದ್ದೇನೆ. ಅಲ್ಲದೆ ರಾಕೆಟ್ ಹೊಡೆಯುವ ದೃಶ್ಯವನ್ನು ಸೆರೆ ಹಿಡಿಯಲು ಸಾಧ್ಯವಾಗಿದೆ ಎಂದು ಅವರು ಬರೆದುಕೊಂಡಿದ್ದರು.
ಇದನ್ನೂ ಓದಿ:ವಿದಿಶಾ: ಬಾಲಕನನ್ನು ರಕ್ಷಿಸಲು ಹೋಗಿ ಬಾವಿಗೆ ಬಿದ್ದ 30 ಮಂದಿ ಗ್ರಾಮಸ್ಥರು! ಮೂವರು ಸಾವು
ತಾಲಿಬಾನ್ ಮತ್ತು ಸರ್ಕಾರಿ ಪಡೆಗಳ ನಡುವಿನ ಘರ್ಷಣೆಯಲ್ಲಿ ಡ್ಯಾನಿಶ್ ಸಿದ್ದಿಕಿ ಕೊಲ್ಲಲ್ಪಟ್ಟಿದ್ದಾರೆ ಎಂದು ವರದಿಯಾಗಿದೆ. ಅಮೇರಿಕ ನೇತೃತ್ವದ ಅಂತಾರಾಷ್ಟ್ರೀಯ ಪಡೆಗಳು ಅಫ್ಗಾನ್ ನಿಂದ ಹಿಂದೆ ಸರಿಯುತ್ತಿರುವ ಕಾರಣದಿಂದ ಉತ್ತರ ಮತ್ತು ಪಶ್ಚಿಮ ಅಫ್ಘಾನ್ ನ ಹಲವಾರು ಜಿಲ್ಲೆಗಳು ಮತ್ತು ಗಡಿರೇಖೆಗಳನ್ನು ತಾಲಿಬಾನ್ ವಶಪಡಿಸಿಕೊಂಡಿದೆ.
ದೆಹಲಿಯಲ್ಲಿ ಪೌರತ್ವ ಕಾಯ್ದೆ ವಿರೋಧಿಸಿ ನಡೆದ ಪ್ರತಿಭಟನೆ ಮತ್ತು ಹಿಂಸಾಚಾರದ ವೇಳೆ ದ್ಯಾನಿಶ್ ಸಿದ್ದಿಕಿ ತೆಗೆದ ಚಿತ್ರಗಳು ಭಾರಿ ಮನ್ನಣೆ ಗಳಿಸಿದ್ದವು.