ಹೊನ್ನಾವರ: ಹವ್ಯಾಸಿ ಛಾಯಾಗ್ರಾಹಕ ಭವಾನಿ ಸಂಘಟನೆಯಲ್ಲಿ ಜಿಲ್ಲೆಯ ಕೆಲವು ಪ್ರಸಿದ್ಧ ಹವ್ಯಾಸಿ ಛಾಯಾಗ್ರಾಹಕರ ಛಾಯಾಚಿತ್ರ ಪ್ರದರ್ಶನ ನ್ಯೂ ಇಂಗ್ಲಿಷ್ ಸ್ಕೂಲನಲ್ಲಿ ಆರಂಭವಾಗಿದೆ. ಪ್ರಾಂಶುಪಾಲೆ ಡಾ| ವಿಜಯಲಕ್ಷ್ಮೀ ನಾಯ್ಕ ಪ್ರದರ್ಶನ ಉದ್ಘಾಟಿಸಿ, ಛಾಯಾಚಿತ್ರ ತೆಗೆಯುವ ಹವ್ಯಾಸವನ್ನು ವಿದ್ಯಾರ್ಥಿಗಳು ಮುಂದಿನ ಜೀವನದಲ್ಲಿ ಅಳವಡಿಸಿಕೊಳ್ಳುವುದರ ಮೂಲಕ ವ್ಯಕ್ತಿತ್ವ ವಿಕಸನ ಮಾಡಿಕೊಳ್ಳಬೇಕು. ಛಾಯಾಗ್ರಹಣ ಕಲೆ ಮೊಬೈಲ್‌ನಿಂದಾಗಿ ಸರ್ವವ್ಯಾಪಿಯಾಗಿದೆ. ಇದನ್ನು ಸದುಪಯೋಗಮಾಡಿಕೊಳ್ಳಬೇಕು ಎಂದರು.
ಪತ್ರಕರ್ತರ ಸಂಘದ ಅಧ್ಯಕ್ಷ ಎಂ.ಜಿ. ಹೆಗಡೆ ಮಾತನಾಡಿದರು. ನ್ಯೂ ಇಂಗ್ಲಿಷ್ ಶಿಕ್ಷಣ ಸಂಸ್ಥೆ ಅಧ್ಯಕ್ಷ, ಉದ್ಯಮಿ ಜಗದೀಶ ಪೈ ಅಧ್ಯಕ್ಷತೆ ವಹಿಸಿ, ಭವಾನಿ ನಾಯ್ಕರು ಸಾಂಸ್ಕೃತಿಕ ರಾಯಭಾರಿಯಾಗಿದ್ದು ಇತ್ತೀಚೆ ನಮ್ಮನಗಲಿದ ವಾಜಪೇಯಿಯವರ ಕಾಲದಿಂದ ಆರಂಭಿಸಿ ಈವರೆಗೆ ಹೊನ್ನಾವರದ ಎಲ್ಲ ಪ್ರಮುಖ ಘಟನೆಗಳನ್ನು, ಸ್ಥಳಗಳನ್ನು ದಾಖಲಿಸಿದ್ದಾರೆ. ಅವರು ಕಲಾಪ್ರದರ್ಶನ ಏರ್ಪಡಿಸಿ ಇತರರಿಗೆ ಸ್ಪೂರ್ತಿಯಾಗಿದ್ದಾರೆ, ಅವರು ಹೊನ್ನಾವರದ ಆಸ್ತಿ ಎಂದು ಅಭಿನಂದಿಸಿದರು.
ನಿಸರ್ಗದ ವರ್ಣಗಳನ್ನು ಸೆರೆಹಿಡಿಯುವಲ್ಲಿ ಪ್ರಸಿದ್ಧರಾದ ಗೋಪಿ ಜಾಲಿ, ಹೊನ್ನಾವರದ ವಿವಿಧ ಸಮಯದ ಭಾವನೆಗಳನ್ನು ಸೆರೆಹಿಡಿದ ಡಾ| ಕೃಷ್ಣಾ ಹೊನ್ನಾವರ ಮೂಲದ ಪ್ರಸಿದ್ಧ ಪರಿಸರ ಛಾಯಾಗ್ರಾಹಕ ಪ್ರಮೋದ ಶಾನಭಾಗ, ಯಕ್ಷಗಾನದ ಅಸಂಖ್ಯ ಛಾಯಾಗ್ರಹಣ ಮಾಡಿದ ಷಣ್ಮುಖ, ರಮೇಶ ನಾಯ್ಕ, ಬಾಲ ಛಾಯಾಗ್ರಹಕಿ ಸಿಂಧೂರಿ ಶಿರೂರು, ಕಮಲಾಕರ, ಕಿರಣ, ಅಕ್ಷಯ ಪಡಿಯಾರ, ರವಿ ಕೋಲೆಕರ, ಗಣೇಶ ಹೆಗಡೆ, ಹರ್ಷ ನಾಯ್ಕ, ಗುರಿ ಗುರಿ, ಭಾಸ್ಕರ ನಾಯ್ಕ, ಶ್ರೀವೈಭವ, ಆನಂದ ಹೆಗಡೆ ಮತ್ತು ಭವಾನಿ ಅವರ 150ಕ್ಕೂ ಹೆಚ್ಚು ಚಿತ್ರಗಳು ಪ್ರದರ್ಶಿಸಲಾಗಿದ್ದು ದೊಡ್ಡ ಪರದೆಯಲ್ಲಿ 300ಕ್ಕೂ ಹೆಚ್ಚು ಚಿತ್ರಗಳನ್ನು ಪ್ರದರ್ಶಿಸಲಾಗುತ್ತಿದೆ. ಆರ್.ಎನ್. ಶೆಟ್ಟಿಯವರಿಗೆ 90 ವರ್ಷ ತುಂಬಿದ ನಿಮಿತ್ತ ಮುರ್ಡೇಶ್ವರದ ವಿಶೇಷ ಚಿತ್ರಗಳನ್ನು, ಅಟಲ್ ಜೀ ಅವರ ಚಿತ್ರಗಳನ್ನು ಪತ್ರಿಕಾ ವರದಿಗಳನ್ನು ಇಲ್ಲಿ ಪ್ರರ್ಶಿಸಲಾಗಿದೆ.
ನ್ಯೂ ಇಂಗ್ಲಿಷ್ ಸ್ಕೂಲ್ ಶಿಕ್ಷಕರು, ಸಿಬ್ಬಂದಿ, ಪತ್ರಕರ್ತರ ಸಂಘ, ಇಕೋ ಕ್ಲಬ್ ಸಹಕರಿಸಿತ್ತು. ರವಿವಾರ ಸಂಜೆಯ ತನಕ ಪ್ರದರ್ಶನವನ್ನು ವೀಕ್ಷಿಸಬಹುದಾಗಿದೆ. ಮುಖ್ಯೋಪಾಧ್ಯಾಯ ವಿ.ಎಸ್. ಅವಧಾನಿ ಸ್ವಾಗತಿಸಿದರು. ಶಿಕ್ಷಕ ರಾಘವೇಂದ್ರ ಹೆಗಡೆ ವಂದಿಸಿದರು.