Advertisement
ಒಂದು ದಿನ ಆಟವಾಡುತ್ತಿರುವಾಗ ಉದ್ಧವ್ ಎಡವಿ ಬಿದ್ದರಂತೆ. ಇದನ್ನು ನೋಡಿದ ರಾಜ್ ಮತ್ತು ಅವರ ಗೆಳೆಯರು ಬಿದ್ದೂ ಬಿದ್ದು ನಕ್ಕರಂತೆ.
Related Articles
Advertisement
ಆ ಸಮಯದಲ್ಲಿ ರಾಜ್ ಠಾಕ್ರೆಗೆ ಶಿವಸೇನೆಯಲ್ಲಿ ಪ್ರತಿಸ್ಪರ್ಧಿಯೇ ಇಲ್ಲವಾಗಿತ್ತು. ಅತ್ತ, ಉದ್ಧವ್ ಠಾಕ್ರೆ ರಾಜಕೀಯಕ್ಕೂ ತಮಗೂ ಸಂಬಂಧವೇ ಇಲ್ಲದಂತೆ ಬದುಕುತ್ತಿದ್ದರು. ಜೆಜೆ ಇನ್ಸ್‌ಟಿಟ್ಯೂಟ್ ಆಫ್ ಅಪ್ಲೆ„ಡ್ ಆರ್ಟ್ಸ್ ಕಾಲೇಜಿನಲ್ಲಿ ಪದವಿ ಪಡೆದು, ಪೂರ್ಣಾವಧಿ ಫೋಟೋಗ್ರಾಫರ್ ಆಗಿಯೇ ಬದುಕು ಸವೆಸುತ್ತೇನೆ ಎಂದು ನಿರ್ಧರಿಸಿದ್ದ ಉದ್ಧವ್ ಜಗತ್ತಿನಾದ್ಯಂತ ಭೂದೃಶ್ಯಗಳನ್ನು, ವನ್ಯ ಮೃಗಗಳನ್ನು, ಅಪ್ಪ ಬಾಳಾ ಠಾಕ್ರೆಯ ರ್ಯಾಲಿಗಳಲ್ಲಿನ ಜನಸಾಗರವನ್ನು, ರಾಜ್ ಠಾಕ್ರೆಯ ಆಕ್ರಮಣಶೀಲ ಭಂಗಿಗಳನ್ನು ಕ್ಯಾಮೆರಾದಲ್ಲಿ ಸೆರೆ
ಹಿಡಿಯುತ್ತ ಸಮಯ ಕಳೆಯುತ್ತಿದ್ದರು. ಆದಾಗ್ಯೂ ಅವರು 1985ರಲ್ಲಿ ಮುಂಬಯಿ ಮಹಾನಗರಪಾಲಿಕೆ ಚುನಾವಣೆಯಲ್ಲಿ ಶಿವಸೇನೆಯ ಪರ ಪ್ರಚಾರ ಮಾಡಿ ಪಕ್ಷಕ್ಕೆ ಗೆಲುವು ತಂದು ಕೊಟ್ಟಿದ್ದರಾದರೂ, ಸಕ್ರಿಯ ರಾಜಕಾರಣಕ್ಕೆ ಧುಮುಕಲು ಹಿಂದೇಟು ಹಾಕುತ್ತಲೇ ಬಂದರು. ಆದಾಗ್ಯೂ ಬಾಳಾ ಠಾಕ್ರೆಯವರಿಗೆ ಉದ್ಧವ್, ಮೂರನೆಯ ಮಗ. ಮೊದಲ ಮಗ ಬಿಂದುಮಾಧವ್ ಠಾಕ್ರೆ ಸಿನೆಮಾ ವಿತರಣೆ, ಪ್ರೊಡಕ್ಷನ್‌ನಲ್ಲೇ ಕಳೆದುಹೋಗಿದ್ದರು, ಎರಡನೆಯ ಮಗ ಜೈದೇವ ಠಾಕ್ರೆಗೂ ಬಾಳಾ ಠಾಕ್ರೆಗೂ ಹೊಂದಾಣಿಕೆಯೇ ಆಗುತ್ತಿರಲಿಲ್ಲ. ಹೀಗಾಗಿ ಮೂರನೆಯ ಮಗನಾದರೂ ರಾಜಕೀಯಕ್ಕೆ ಬರಬೇಕು ಎಂಬ ಇಚ್ಛೆ ಅವರಿಗೆ ಆರಂಭವಾಯಿತು ಎನ್ನಲಾಗುತ್ತದೆ.
ದಿ ಠಾಕ್ರೆ ಕಸಿನ್ಸ್ ಪುಸ್ತಕದ ಲೇಖಕ ಧವಲ್ ಕುಲ್ಕರ್ಣಿ ಉದ್ಧವ್ ಠಾಕ್ರೆಯವರ ರಾಜಕೀಯದ ಆರಂಭಿಕ ದಿನಗಳ ಬಗ್ಗೆ ಹೀಗೆ ಹೇಳುತ್ತಾರೆ, “”ಅದು 1991. ನಾಗಪುರದಲ್ಲಿ ನಿರುದ್ಯೋಗದ ವಿರುದ್ಧ ರಾಜ್ ಠಾಕ್ರೆ ನೇತೃತ್ವದಲ್ಲಿ ರ್ಯಾಲಿಯೊಂದು ಆಯೋಜಿತವಾಗಿತ್ತು. ಎಲ್ಲಾ ತಯ್ನಾರಿ ಪೂರ್ಣಗೊಂಡು, ರಾಜ್ ಠಾಕ್ರೆಯೊಬ್ಬರೇ ಭಾಷಣ ಮಾಡಲಿದ್ದಾರೆ ಎಂದೂ ನಿರ್ಧರಿತವಾಗಿತ್ತು. ಆದರೆ ರ್ಯಾಲಿಗೂ ಮುನ್ನಾ ದಿನ ರಾಜ್ ಠಾಕ್ರೆಗೆ ಮಾತೋಶ್ರಿಯಿಂದ(ಬಾಳಾ ಠಾಕ್ರೆ ನಿವಾಸ) ಒಂದು ಕರೆ ಬಂತು. “ರಾಜ್, ನಿನ್ನ ಜತೆಗೆ ನಿನ್ನ ಅಣ್ಣ ಉದ್ಧವ್ ಭಾಷಣ ಮಾಡುತ್ತಾನೆ’ ಎಂಬ ಆದೇಶ ಅತ್ತಲಿಂದ ಬಂತು! ರಾಜ್ ಠಾಕ್ರೆಇದರಿಂದ ಕೆರಳಿ ಕೆಂಡವಾದರು…ನಂತರದಿಂದ ಉದ್ಧವ್ ಮತ್ತು ರಾಜ್ ನಡುವೆ
ಮತಭೇದ ಬೆಳೆಯುತ್ತ ಹೋಯಿತು.” ಅಂದು ಉದ್ಧವ್ ಠಾಕ್ರೆ ಮಾಡಿದ್ದ ಭಾಷಣದಿಂದ ಜನರಿಗೆ ಒಂದು ಅಂಶ ಸ್ಪಷ್ಟವಾಗಿತ್ತು- ಏನೆಂದರೆ, ಉದ್ಧವ್ ತನ್ನ ತಂದೆ ಮತ್ತು ರಾಜ್ ಠಾಕ್ರೆಗಿಂತ ಸಂಪೂರ್ಣ ಭಿನ್ನ ವ್ಯಕ್ತಿತ್ವ ಹೊಂದಿದ್ದಾರೆ ಹಾಗೂ ಎಲ್ಲಕ್ಕಿಂತ ಮುಖ್ಯವಾಗಿ ಬಾಳಾ ಠಾಕ್ರೆ ಅಥವಾ ರಾಜ್‌ರಂಥ ಫೈಯರ್ ಬ್ರ್ಯಾಂಡ್ ಅಲ್ಲ ಹಾಗೂ ಅವರಿಬ್ಬರಲ್ಲಿರುವಂಥ ಭಾಷಾ ಪಾಂಡಿತ್ಯವಾಗಲಿ, ಹಾಸ್ಯಪ್ರಜ್ಞೆಯಾಗಲಿ, ಸಾಮಾಜಿಕ-ರಾಜಕೀಯದ ವಿಷಯದಲ್ಲಿ ಆಳವಾಗಲಿ ಇಲ್ಲ ಎನ್ನುವುದು! 1995-96ರ ನಡುವಿನ ಕೆಲ ಘಟನಾವಳಿಗಳು ಶಿವಸೇನೆಯ ದಿಕ್ಕು ಬದಲಾಗಲು ಕಾರಣವಾದವು. 1995ರವರೆಗೂ ಬಾಳಾ ಠಾಕ್ರೆಯವರ ಜತೆಯೇ ವಾಸಿಸುತ್ತಿದ್ದ ಅವರ ಎರಡನೆಯ ಮಗ ಜೈದೇವ್ ಠಾಕ್ರೆ, ಅದೇ ವರ್ಷ ತಮ್ಮ ಪತ್ನಿ ಸ್ಮಿತಾಗೆ ವಿಚ್ಛೇದನ ನೀಡಿ, ಮತ್ತೂಂದು ಮದುವೆಯಾಗಿ, ಮನೆ ತೊರೆದುಬಿಟ್ಟರು. ಈ ಘಟನೆಯಿಂದಾಗಿ ಬಾಳಾ ಠಾಕ್ರೆ ಬಹಳ ಆಘಾತಕ್ಕೀಡಾದರು ಮತ್ತು ಜೈದೇವ್‌ರ ಬಗ್ಗೆ ಅವರಿಗಿದ್ದ ಅಸಮಾಧಾನ ವಿಪರೀತವಾಗಿ, ಅವರೊಂದಿಗೆ ಮಾತನಾಡುವುದನ್ನೇ ನಿಲ್ಲಿಸಿಬಿಟ್ಟರು. ಇನ್ನು ಅದೇ ವರ್ಷವೇ ನಡೆದ ವಿಧಾನಸಭಾ ಚುನಾವಣೆಯಲ್ಲಿ ಶಿವಸೇನೆ-ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿತ್ತು ಹಾಗೂ ಅದೇ ವರ್ಷ ಬಾಳಾ ಠಾಕ್ರೆಯವರ ಮಡದಿ ಮೀನಾ ಮೃತಪಟ್ಟರು! ಇದು ಸಾಲದೆಂಬಂತೆ, ಮರು ವರ್ಷವೇ, ಅಂದರೆ, 1996ರಲ್ಲಿ ಬಾಳಾ ಠಾಕ್ರೆಯವರ ಹಿರಿಯ ಮಗ ಬಿಂದುಮಾಧವ ರಸ್ತೆ ಅಪಘಾತವೊಂದರಲ್ಲಿ ಅಕಾಲ ಮೃತ್ಯುವಿಗೀಡಾದರು! ಈ ಘಟನೆಯ ನಂತರವಂತೂ ಬಾಳಾ ಠಾಕ್ರೆ ಕುಸಿದುಬಿಟ್ಟರು. ಪರಿವಾರಕ್ಕೆ ಬಂದ ಈ ವಿಪತ್ತಿನ ಸಮಯದಲ್ಲಿ ಅಪ್ಪನಿಗೆ ಸಮಾಧಾನ ಹೇಳಲು ಜೈದೇವ ಠಾಕ್ರೆ ಕೂಡ ಮನೆಗೆ ಬಂದರು. ಬಾಳಾ ಠಾಕ್ರೆ ಕೂಡ ಜೈದೇವರನ್ನು ಕ್ಷಮಿಸಿ, ಇನ್ಮುಂದೆ ಇವನೂ ನಮ್ಮ ಜತೆಗಿರುತ್ತಾನೆ ಎಂದೇ ಭಾವಿಸಿದರು. ಆದರೆ ಕೆಲವೇ ದಿನಗಳಲ್ಲಿ ಜೈದೇವ, ಮತ್ತೆ ಮನೆ ಬಿಟ್ಟು ಹೋಗಿಬಿಟ್ಟರು. ಆ ನೋವಿನ ಸಮಯದಲ್ಲಿ ಬಾಳಾ ಠಾಕ್ರೆಗೆ ಹೆಗಲಾದ ಏಕೈಕ ವ್ಯಕ್ತಿ ಉದ್ಧವ್ ಠಾಕ್ರೆ. ಆ ಸಮಯದಲ್ಲಿ ರಾಜ್ ಠಾಕ್ರೆಗೂ ಬಾಳಾ ಠಾಕ್ರೆ ಜತೆ ನಿಲ್ಲಲಾಗಲಿಲ್ಲ. ಏಕೆಂದರೆ, ಅದೇ ವರ್ಷವೇ ಪುಣೆಯಲ್ಲಿ ನಡೆದಿದ್ದ ಕೊಲೆ ಪ್ರಕರಣವೊಂದರಲ್ಲಿ ರಾಜ್ ಠಾಕ್ರೆ ಹೆಸರು ತಳಕು ಹಾಕಿಕೊಂಡುಬಿಟ್ಟಿತ್ತು! ಆಗ ರಮೇಶ್ ಕಿಣಿ ಎನ್ನುವವರ ಹತ್ಯೆಯ ಪ್ರಕರಣದಲ್ಲಿ ರಾಜ್ ಠಾಕ್ರೆಯವರ ಹೆಸರು ಕೇಳಿಬಂದಿತ್ತು. ಸೆಂಟ್ರಲ್ ಮುಂಬೈಯಿಯ ನಿವಾಸಿಯಾಗಿದ್ದ ರಮೇಶ್ ಕಿಣಿಯವರ ದೇಹವು ಪುಣೆ ಥಿಯೇಟರ್‌ನಲ್ಲಿ ಸಿಕ್ಕಿತ್ತು. “”ನನ್ನ ಪತಿಯ ಸಾವಿಗೆ ರಾಜ್ ಠಾಕ್ರೆ ಮತ್ತವರ ಗೆಳೆಯರೇ ಕಾರಣ. ಏಕೆಂದರೆ, ನಾವಿರುವ ಮನೆಯನ್ನು ಖಾಲಿ ಮಾಡಿಸಲು ರಾಜ್ ಠಾಕೆಯ ಗೆಳೆಯ ಪ್ರಯತ್ನಿಸುತ್ತಿದ್ದ, ನಾವು ಅದಕ್ಕೆ ಒಪ್ಪಿರಲಿಲ್ಲ. ರಾಜ್ ಠಾಕ್ರೆ ನನ್ನ ಮನೆಯವರನ್ನು ಅನೇಕ ಬಾರಿ ಕಚೇರಿಗೆ ಕರೆಸಿಕೊಂಡು ಎಚ್ಚರಿಕೆ ನೀಡಿದ್ದರು’ ಎಂದು ರಮೇಶ್ ಕಿಣಿಯ ಪತ್ನಿ ಆರೋಪಿಸಿದ್ದರು. ಈ ಸಮಯದಲ್ಲಿ ಬಿಜೆಪಿ- ಶಿವಸೇನೆಯ ಸರ್ಕಾರ ಅಧಿಕಾರಕ್ಕೆ ಬಂದು ಕೇವಲ ಒಂದು ವರ್ಷವಾಗಿತ್ತು. ರಾಜ್ ಠಾಕ್ರೆ ವಿರುದ್ಧದ ಈ ಪ್ರಕರಣವು ಶಿವಸೇನೆ-ಬಿಜೆಪಿ ಸರ್ಕಾರವನ್ನು ಅಲುಗಾಡಿಸಿದ್ದು ಸುಳ್ಳಲ್ಲ. ಮೊದಲೇ ವೈಯಕ್ತಿಕ ಬದುಕಿನಲ್ಲಾದ ಹಾನಿಯಿಂದ ತತ್ತರಿಸಿದ್ದ ಬಾಳಾ ಠಾಕ್ರೆ ಇದರಿಂದ ಕೆರಳಿ ಕೆಂಡವಾದರು. ಈ ಪ್ರಕರಣದಿಂದ ರಾಜ್ ಠಾಕ್ರೆ ದೋಷಮುಕ್ತರಾದದ್ದು ನಿಜವೇ ಆದರೂ, ನಂತರದ ಕೆಲವು ವರ್ಷಗಳಲ್ಲಿ ಅವರು ರಾಜಕೀಯವಾಗಿ ತಣ್ಣಗಾಗಿಬಿಟ್ಟರು(ರಾಜ್ ಠಾಕ್ರೆಯವರನ್ನು ಖುಲಾಸೆಗೊಳಿಸಲು ಬಾಳಾ ಠಾಕ್ರೆ ಬಹಳ ಶ್ರಮಪಟ್ಟರು ಎನ್ನಲಾಗುತ್ತದೆ). ಈ ಪ್ರಕರಣವನ್ನೇ ನೆಪವಾಗಿಟ್ಟುಕೊಂಡ ಪಕ್ಷದಲ್ಲಿನ ಕೆಲವರು, ಉದ್ಧವ್‌ರನ್ನು ಶಿವಸೇನೆಯಲ್ಲಿ ಮುಂದೆ ತರಬೇಕೆಂದು ಬಾಳಾ ಠಾಕ್ರೆಯವರಿಗೆ ಸಲಹೆ ನೀಡಲಾರಂಭಿಸಿದರು. ಇತ್ತ ಉದ್ಧವ್ ಠಾಕ್ರೆಯವರ ಪತ್ನಿ ರಶ್ಮಿಯವರೂ ಕೂಡ ತಮ್ಮ ಪತಿಗೆ ರಾಜಕೀಯದಲ್ಲಿ ಹೆಚ್ಚು ಸಕ್ರಿಯವಾಗುವಂತೆ ಒತ್ತಾಯಿಸಿದರು ಎನ್ನಲಾಗುತ್ತದೆ.
ಅಧಿಕಾರದಾಸೆಯು ಉದ್ಧವ್‌ರನ್ನು ಹಿಂದುತ್ವ ತೊರೆದು ಎನ್‌ಸಿಪಿ ಜತೆ ಸೇರುವಂತೆ ಮಾಡಿದೆ ಎನ್ನುವುದು ನಿಜ. ಆದರೆ, ಇದೇ ವೇಳೆಯಲ್ಲೇ ಹಿಂದುತ್ವದ ವಿಷಯ ಬಂದಾಗ, ತನಗೆ ಬಿಜೆಪಿಯನ್ನು ಮೀರಿಸಲು ಸಾಧ್ಯವೇ ಆಗದು ಎನ್ನುವುದು ಉದ್ಧವ್‌ರಿಗೆ ಸ್ಪಷ್ಟವಾಗಿ ಅರಿವಾಗಿದೆ. ಈ ಕಾರಣಕ್ಕಾಗಿಯೇ, ಉದ್ಧವ್ ಈಗ ಹಿಂದುತ್ವದ ಕೈಬಿಟ್ಟು, ಮತ್ತೆ ಮರಾಠಾ ಅಸ್ಮಿತೆಯ ರಾಜಕಾರಣದತ್ತ ವಾಲಲು ಮುಂದಾಗಿದ್ದಾರೆ ಎಂದೂ ಹೇಳಲಾಗುತ್ತದೆ. ಶಿವಸೇನೆಯ ಪ್ರಮುಖ ಅಜೆಂಡಾ ಆಗಿದ್ದ ಮರಾಠಾ ಅಸ್ಮಿತೆಯೊಂದೇ ಭವಿಷ್ಯದಲ್ಲಿ ಶಿವಸೇನೆಯ ಕೈ ಹಿಡಿಯಬಹುದು ಎನ್ನಲಾಗುತ್ತದೆ. ಆದರೆ, ಎನ್‌ಸಿಪಿ-ಕಾಂಗ್ರೆಸ್ ಜೊತೆಗಿನ ಈ ಅತಂತ್ರ ಮೈತ್ರಿಯು ಉದ್ಧವ್‌ರ ಈ ಕನಸಿಗೆ ಸಹಕರಿಸಲಿದೆಯೇ ಎಂಬುದೇ ಮುಖ್ಯ ಪ್ರಶ್ನೆ. ಒಟ್ಟಲ್ಲಿ ಉದ್ಧವ್ ಅಂತೂ ಬಹಳ ದೊಡ್ಡ ರಿಸ್ಕ್ ಅನ್ನೇ ತೆಗೆದುಕೊಂಡಿದ್ದಾರೆ… ಇಲ್ಲಿ ಒಂದು ಘಟನೆಯನ್ನು ಹೇಳಲೇಬೇಕು. 90ರ ದಶಕದಲ್ಲಿ ರಾಜ್ ಠಾಕ್ರೆ ನಿಯಮಿತವಾಗಿ ಬ್ಯಾಡ್ಮಿಂಟನ್ ಆಡಲು ದಾದರ್‌ಗೆ ಹೋಗುತ್ತಿದ್ದರಂತೆ. ಬ್ಯಾಡ್ಮಿಂಟನ್‌ನಲ್ಲಿ ಪಳಗಿ ಫಿಟ್ ಆಗಿದ್ದ ರಾಜ್, ನಂತರದಲ್ಲಿ ಉದ್ಧವ್‌ರನ್ನೂ ಆಟವಾಡಲು ಜತೆಗೆ ಕರೆದೊಯ್ಯಲಾರಂಭಿಸಿದರಂತೆ. ಒಂದು ದಿನ ಆಟವಾಡುತ್ತಿರುವಾಗ ಉದ್ಧವ್ ಠಾಕ್ರೆ ರಾಜ್ ಹೊಡೆದ ಶಟಲ್ ಅನ್ನು ಹಿಂದಿರುಗಿಸಲು ಹೋಗಿ ಎಡವಿ ಬಿದ್ದರಂತೆ. ಇದನ್ನು ನೋಡಿದ ರಾಜ್ ಮತ್ತು ಅವರ ಗೆಳೆಯರು ಬಿದ್ದೂ ಬಿದ್ದು ನಕ್ಕರಂತೆ. ಈ ಘಟನೆಯ ನಂತರ ಉದ್ಧವ್ ಅಲ್ಲಿಗೆ ಹೋಗುವುದನ್ನೇ ಬಿಟ್ಟುಬಿಟ್ಟರಂತೆ! ಬಹುಶಃ ಉದ್ಧವ್ ಅವಮಾನದಿಂದಾಗಿ ಬ್ಯಾಡ್ಮಿಂಟನ್ ಆಡುವುದನ್ನೇ ಬಿಟ್ಟುಬಿಟ್ಟಿರಬೇಕು ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಉದ್ಧವ್ ಪ್ರಾಕ್ಟೀಸ್ ಮಾಡುವುದಕ್ಕೆ ಬೇರೆಯದ್ದೇ ಬ್ಯಾಡ್ಮಿಂಟನ್ ಕೋರ್ಟ್ ಬುಕ್ ಮಾಡಿದ್ದರು! ಅಷ್ಟೇ ಅಲ್ಲದೇ, ರಾಜ್ ಠಾಕ್ರೆಗೆ ಕಲಿಸಿಕೊಡುತ್ತಿದ್ದ ಕೋಚ್‌ರನ್ನೇ ತಮ್ಮ ಕೋಚಿಂಗ್‌ಗೂ ಕರೆಸಿಕೊಂಡಿದ್ದರು. ಕೆಲವೇ ದಿನಗಳಲ್ಲಿ ಉದ್ಧವ್‌ರ ಆಟದಲ್ಲಿ ಎಷ್ಟು ಸುಧಾರಣೆ ಕಂಡುಬಂದಿತೆಂದರೆ, ಒಬ್ಬ ಅನುಭವಿ ಆಟಗಾರನಿಗೂ ಬೆವರಿಳಿಸುವಂಥ ಆಟಗಾರನಾದರು ಎಂದು ಅವರ ಕೋಚ್
ಹೇಳುತ್ತಾರೆ. ಈಗ ರಾಜಕೀಯ ಕೋರ್ಟ್‌ನಲ್ಲೂ ಹೊಸ ಮೈದಾನಕ್ಕೆ ತೆರಳಿದ್ದಾರೆ ಉದ್ಧವ್. ಹೊಸ ಕೋರ್ಟ್‌ನಲ್ಲಿ ಅವರು ಸದೃಢ ರಾಜಕಾರಣಿಯಾಗಿ ಪಳಗುತ್ತಾರೋ ಅಥವಾ ಹೊರಬಿದ್ದು ರಾಜ್ ಠಾಕ್ರೆಯವರಂತೆ ಏಕಾಂಗಿಯಾಗಿ ಹೋಗುತ್ತಾರೋ ನೋಡಬೇಕಿದೆ. ಏಕೆಂದರೆ, ಪವಾರ್ ಉದ್ಧವ್‌ರನ್ನು ಅದ್ಭುತ ಆಟಗಾರನನ್ನಾಗಿ ಮಾಡಬಲ್ಲ ಕೋಚ್ ಅಲ್ಲವಲ್ಲ! ಆಚಾರ್ಯ