Advertisement
“ಸರ್, ಈ ಮೊಬೈಲಿಂದ ನಮ್ ಫೋಟೋ ತೆಗೀತೀರಾ? ಪೂರಾ ವಿಧಾನಸೌಧ ಕಾಣಬೇಕು,ಆಯ್ತಾ’- ಅಂದಳು, ಹುಡುಗಿ. ಆ ಮನುಷ್ಯ ಸ್ವಲ್ಪವೂ ಬೇಸರ ಪಟ್ಟುಕೊಳ್ಳಲಿಲ್ಲ. ತನ್ನ ಕೈಯಲ್ಲಿದ್ದ ತೂಕದ
ಕ್ಯಾಮೆರಾವನ್ನು ಬ್ಯಾಗ್‌ಗೆ ತೂರಿಸಿ, ಆಕೆಯ ಗುಂಪಿನ ನಾಲ್ಕೈದು ಫೋಟೋ ತೆಗೆದುಕೊಟ್ಟರು. ಆ ಹೊತ್ತಿಗಾಗಲೇ ವಿಧಾನಸೌಧದ ತಲೆಮೇಲೆ ಮೋಡ ಕಪ್ಪಿಟ್ಟಿತ್ತು. ಅದರ ಎದುರಿದ್ದ, ಫೋಟೋಗ್ರಾಫರ್‌ಗಳ ಮೊಗದಲ್ಲಿ ನಗುವಿನ ಚಿತ್ರಗಳಿದ್ದವು. ಮೊಬೈಲ್ ಬಂದಾದ ಮೇಲೆ, ಎಲ್ಲರ
ಜೇಬಿನಲ್ಲೂ ಸ್ಮಾರ್ಟ್‌ಫೋನ್ ಅತಿಥಿಯಾಗಿಬಿಟ್ಟ ಮೇಲೆ, ಈ ಫೋಟೋಗ್ರಾಫರ್‌ಗಳ ಬಗಲಲ್ಲಿ ತೂಗಿಬಿದ್ದ
ಕ್ಯಾಮೆರಾಗಳು ಹೆಚ್ಚು ಫಳಗುಡುತ್ತಲೇ ಇಲ್ಲ.
Related Articles
“ಬೇರೆ ಉದ್ಯೋಗ ಮಾಡಲು ವಯಸ್ಸಿಲ್ಲ, ಈ ಕೆಲಸ ಬಿಟ್ಟರೆ ಬೇರೇನೂ ಗೊತ್ತಿಲ್ಲ’ ಎನ್ನುತ್ತಾರೆ ಕೃಷ್ಣಪ್ಪ. ಅವರೂ ಇಲ್ಲಿ ಫೋಟೋಗ್ರಾಫರ್. ವಿದೇಶಿಗರೇನಾದರೂ ಬಂದರೆ, ಅವರೊಂದಿಗೆ ಆತ್ಮೀಯವಾಗಿ ಮಾತಾಡುತ್ತಾ, ನೆನಪಿನಲ್ಲಿ ಉಳಿಯುವಂಥ ಫೋಟೋ ತೆಗೆದುಕೊಡುವ ಚಾಣಾಕ್ಷ. ಹಾಗೆ ಪ್ರವಾಸಕ್ಕೆ ಬಂದ ವಿದೇಶಿಗರೊಬ್ಬರು, ಇವರನ್ನು ಜೊತೆಯಲ್ಲಿ ಕರೆದೊಯ್ದು, ಫೋಟೋಗ್ರಫಿ ಮಾಡಿಸಿಕೊಂಡಿದ್ದರಂತೆ. ದಾವಣಗೆರೆ ಮೂಲದ ಇವರು, ಅಲ್ಲಿನ ಕೂಲಿ ಸಾಕಾಗದೇ, ಇಲ್ಲಿ ಕ್ಯಾಮೆರಾ ಹಿಡಿದರಂತೆ.
Advertisement
ರೈತ, ಫೋಟೋಗ್ರಾಫರ್ ಆದ ಕತೆ…ಅಂದಹಾಗೆ, ಈ ವಿಧಾನಸೌಧದ ಮುಂದೆ ಒಬ್ಬ ರೈತ ಕೂಡ ಫೋಟೋಗ್ರಫಿ ಮಾಡುತ್ತಾರೆ. ಅವರೇ
ತುರುವೇಕೆರೆಯ ಎನ್.ಡಿ. ಲೋಕೇಶ್. ಊರಿನಲ್ಲಿ ವ್ಯವಸಾಯ ಮಾಡಿಕೊಂಡು ಇದ್ದರಂತೆ. ಸಕಾಲಕ್ಕೆ
ಮಳೆಯಾಗದೇ, ನಷ್ಟವಾಗಿ, ಇಲ್ಲಿಗೆ ಬಂದು, 10 ವರ್ಷಗಳಿಂದ ಫೋಟೋ ತೆಗೆಯುತ್ತಿದ್ದಾರೆ. ಬೆಳಗ್ಗೆ
10ರಿಂದ ಸಂಜೆ 6ರವರೆಗೆ ಇಲ್ಲಿ ಡ್ನೂಟಿ. ಭಾನುವಾರ ಹಾಗೂ ವಿಶೇಷ ದಿನಗಳಲ್ಲಿ ವಿಧಾನಸೌಧಕ್ಕೆ ಲೈಟಿಂಗ್ ವ್ಯವಸ್ಥೆ ಮಾಡಿದಾಗ, ಫೋಟೋಗ್ರಫಿ ಬ್ಯುಸಿನೆಸ್ ಸ್ವಲ್ಪ ಲಾಭ ತಂದು ಕೊಡುತ್ತದೆ ಅಂತಾರೆ, ಇವರು. ನಗೋದು ಹೇಗೆ ಗೊತ್ತಾ?
ದೂರದ ಹಳ್ಳಿಗಳಿಂದ ಬರುವ ಅನೇಕ ಪ್ರವಾಸಿಗರಿಗೆ, ಫೋಟೋಗೆ ಹೇಗೆ ಫೋಸ್ ಕೊಡಬೇಕು ಅಂತಲೇ
ತಿಳಿದಿರುವುದಿಲ್ಲ. ಆತಂಕದ ದೃಷ್ಟಿ ಬೀರುತ್ತಾ, ಅಟೆನನ್ ಸ್ಥಿತಿಯಲ್ಲಿ ನಿಂತುಕೊಳ್ಳುತ್ತಾರಂತೆ. ಅಂಥವರಿಗೆ ಇವರು, ಫೋಟೋಗೆ ಹೇಗೆ ನಿಲ್ಲಬೇಕು? ಯಾವ ರೀತಿ ಪೋಸು ಕೊಡಬೇಕು?- ಎನ್ನುವ ಪಾಠ ಮಾಡುತ್ತಾರಂತೆ. ಕೆಲವೊಮ್ಮೆ ಇದು ಸರ್ಕಸ್ ಆಗುವುದೂ ಉಂಟಂತೆ!