ಹೊಸದಿಲ್ಲಿ : ಪಾಕಿಸ್ಥಾನದ ಕಡೆಯಿಂದ ನಡೆದಿದ್ದ ಕರ್ತಾರ್‌ಪುರ ಕಾರಿಡಾಲ್ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡ ವೇಳೆ ಖಾಲಿಸ್ಥಾನ್ ಪರ ನಾಯಕ ಗೋಪಾಲ್ ಚಾವ್ಲಾ ಜತೆಗೆ ಫೋಟೋ ಗೆ ನಿಂತುಕೊಂಡ ಪಂಜಾಬ್ ಸಚಿವ ನವಜೋತ್ ಸಿಂಗ್ ಸಿಧು ಅವರನ್ನು ರಾಷ್ಟ್ರೀಯ ಭದ್ರತಾ ಕಾಯಿದೆಯಡಿ ಬಂಧಿಸಬೇಕು ಎಂದು ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಆಗ್ರಹಿಸಿದ್ದಾರೆ.
ಸಿಧು ಅವರನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ಬಂಧಿಸಿ ತನಿಖೆಗೆ ಗುರಿಪಡಿಸಬೇಕು ಎಂದು ಸ್ವಾಮಿ ಒತ್ತಾಯಿಸಿದರು.
ಗೋಪಾಲ್ ಚಾವ್ಲಾ ಯಾರೆಂದೇ ತನಗೆ ಗೊತ್ತಿಲ್ಲ ಎಂದು ಹೇಳಿಕೊಂಡಿರುವ ಸಿಧು ಅವರನ್ನು ಬಲವಾಗಿ ಟೀಕಿಸಿರುವ ಸ್ವಾಮಿ, “ಹಾಗಿದ್ದರೆ ನೀವು ನನಗೂ-ಖಾಲಿಸ್ಥಾನಕ್ಕೂ ಯಾವುದೇ ಸಂಬಂಧ ಇಲ್ಲ; ನಾನದನ್ನು ಖಂಡಿಸುತ್ತೇನೆ’ ಎಂಬುದಾಗಿಯೂ ಹೇಳುವಿರಿ” ಎಂದಿರುವ ಸ್ವಾಮಿ ‘ಆದುದರಿಂದ ಸಿಧುವನ್ನು ಎನ್‌ಐಎ ರಾಷ್ಟ್ರೀಯ ಭದ್ರತಾ ಕಾಯಿದೆಯಡಿ ಬಂಧಿಸಿ ತನಿಖೆಗೆ ಗುರಿಪಡಿಸಬೇಕು’ ಎಂದು ಹೇಳಿದರು.
ಕರ್ತಾರ್‌ಪುರ ಕಾರಿಡಾರ್ ಶಿಲಾನ್ಯಾಸ ಸಮಾರಂಭಕ್ಕೆಂದು ವೈಯಕ್ತಿಕ ನೆಲೆಯಲ್ಲಿ ಪಾಕಿಸ್ಥಾನಕ್ಕೆ ಹೋಗಿದ್ದ ಸಿಧು ಜತೆಗೆ ನಿಂತುಕೊಂಡು ತಾನು ತೆಗೆಸಿಕೊಂಡಿದ್ದ ಫೋಟೋವನ್ನು ಖಾಲಿಸ್ಥಾನ ಪರ ನಾಯಕ ಗೋಪಾಲ್ ಚಾವ್ಲಾ ಅದನ್ನು ತಮ್ಮ ಫೇಸ್‌ಬುಕ್ ಪ್ರೊಫೈಲ್‌ಗೆ ಹಾಕಿಕೊಂಡಿದ್ದರು.
ಇದನ್ನು ಅನುಸರಿಸಿ ರಾಜಕೀಯ ವಲಯದಲ್ಲಿ ವ್ಯಾಪಕ ಟೀಕೆ, ಖಂಡನೆ ವ್ಯಕ್ತವಾಗಿತ್ತು. ಸಿಧು ಪಾಕ್ ಏಜಂಟ್ ಎಂದು ಕೇಂದ್ರ ಸಚಿವ, ಎಸ್‌ಎಡಿ ನಾಯಕಿ ಹರ್‌ಸಿಮ್ರತ್ ಕೌರ್ ಆರೋಪಿಸಿದ್ದರಲ್ಲದೆ ಈ ಬಗ್ಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸ್ಪಷ್ಟೀಕರಣ ನೀಡಬೇಕೆಂದು ಒತ್ತಾಯಿಸಿದ್ದರು.