ಬೆಂಗಳೂರು: ಜೀವ ಬೆದರಿಕೆ ಹಾಕಿದ ರೌಡಿಶೀಟರ್‌ಗಳ ವಿರುದ್ಧ ದೂರು ನೀಡಿದ ಉದ್ಯಮಿ ಮನೆಗೆ ನೋಟಿಸ್ ಕೊಡುವ ನೆಪದಲ್ಲಿ ವಿದ್ಯಾರಣ್ಯಪುರ ಠಾಣೆ ಪೊಲೀಸರು ಅಪ್ರಾಪ್ತೆಯ ಫೋಟೋ ಮತ್ತು ವಿಡಿಯೋ ತೆಗೆದು ಬೆದರಿಕೆ ಹಾಕಿರುವ ಆರೋಪ ಕೇಳಿ ಬಂದಿದೆ.
ವಿದ್ಯಾರಣ್ಯಪುರ ನಿವಾಸಿ, ಉದ್ಯಮಿಯೂ ಆಗಿ ರುವ ಶಶಾಂಕ್ ಎಂಬುವರು ನೀಡಿದ ದೂರಿನ ಮೇರೆಗೆ ಶೇಖರ್ ಹಾಗೂ ಇತರರ ವಿರುದ್ಧ ವಿದ್ಯಾರಣ್ಯಪುರ ಠಾಣೆ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಮತ್ತೂಂದೆಡೆ ಉದ್ಯಮಿ ಶಶಾಂಕ್, ವಿದ್ಯಾರಣ್ಯಪುರ ಠಾಣೆ ಪೊಲೀಸರು ತಮ್ಮ ಮನೆಯಲ್ಲಿದ್ದ ಅಪ್ರಾಪೆ¤ಗೆ ನೋಟಿಸ್ ಕೊಟ್ಟು ಆಕೆಯ ಫೋಟೋ, ವಿಡಿಯೋ ತೆಗೆದುಕೊಂಡು ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಸಂಬಂಧ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ. ಈ ಬೆನ್ನಲ್ಲೇ ಯಲಹಂಕ ಉಪವಿಭಾಗದ ಎಸಿಪಿ ನೇತೃತ್ವದಲ್ಲಿ ತನಿಖೆಗೆ ಸೂಚಿಸಲಾಗಿದೆ.
ಅಪ್ರಾಪೆ¤ ಫೋಟೋ, ವಿಡಿಯೋ ತೆಗೆದ ಪೊಲೀಸರು!: ಅ.24ರಂದು ದೂರುದಾರ ಶಶಾಂಕ್ ಅವರು ಆರೋಪಿಗಳಾದ ಶೇಖರ್ ಮತ್ತು ಸಹಚರರ ವಿರುದ್ಧ ವಿದ್ಯಾರಣ್ಯಪುರ ಠಾಣೆಯಲ್ಲಿ ದೂರು ನೀಡಿದ್ದರು. ಆದರೆ, ಪೊಲೀಸರು ಎರಡ್ಮೂರು ದಿನಗಳಾದರೂ ಎಫ್ಐಆರ್ ದಾಖಲಿಸಿಲ್ಲ. ಅದಕ್ಕೆ ಶಶಾಂಕ್ ಬೇಸರಗೊಂಡು ಸುಮ್ಮನಾಗಿದ್ದರು. ಈ ಮಧ್ಯೆ ಶಶಾಂಕ್, ಸಂಬಂಧಿಯೊಬ್ಬರು ಮೃತಪಟ್ಟ ಹಿನ್ನೆಲೆಯಲ್ಲಿ ಕುಟುಂಬದ ಹಿರಿಯರು ಊರಿಗೆ ಹೋಗಿದ್ದರು. ಈ ವೇಳೆ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ಶಶಾಂಕ್ ನೋಟಿಸ್ ಕೊಡಲು ಮನೆಗೆ ಬಂದಿದ್ದರು. ಆದರೆ, ಮನೆಯಲ್ಲಿ ಶಶಾಂಕ್ ಇರಲಿಲ್ಲ. ಹೀಗಾಗಿ ಶಶಾಂಕ್‌ನ ಸಹೋದರನ 15 ವರ್ಷದ ಪುತ್ರಿಗೆ ನೋಟಿಸ್ ಕೊಡಲು ಮುಂದಾಗಿದ್ದಾರೆ.
ಆಕೆ ಈ ಬಗ್ಗೆ ನನಗೆ ಗೊತ್ತಿಲ್ಲ ಎಂದಾಗ, ಮನೆ ಮುಂದೆ ನೋಟಿಸ್ ಅಂಟಿಸಿದ್ದಾರೆ. ಅಲ್ಲದೆ, ಈ ನೋಟಿಸ್ ಅಂಟಿಸಿದ ಬಗ್ಗೆ ಸಾಕ್ಷ್ಯಕ್ಕಾಗಿ ಈ ಬಾಲಕಿಯನ್ನು ನಿಲ್ಲಿಸಿಕೊಂಡು ಫೋಟೋ ಮತ್ತು ವಿಡಿಯೋ ತೆಗೆದುಕೊಂಡಿದ್ದಾರೆ. ಬಳಿಕ ಬಾಲಕಿಗೆ ಬೆದರಿಕೆ ಹಾಕಿದ್ದಾರೆ. ಅದರಿಂದ ಆಕೆಗೆ ಜ್ವರ ಕಾಣಿಸಿಕೊಂಡಿತ್ತು. ಈ ರೀತಿ ದೌರ್ಜನ್ಯ ಎಸಗಿರುವ ಪೊಲೀಸರ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಶಶಾಂಕ್ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ದೂರುದಾರ ಶಶಾಂಕ್ ಅವರು “ಶೇಖರ್ ಮತ್ತು ಸಹಚರರ ವಿರುದ್ಧ ದೂರು ನೀಡಿದಾಗ, ಆರಂಭದಲ್ಲಿ ಎಫ್ಐಆರ್ ದಾಖಲಿಸಿಕೊಳ್ಳದ ಪೊಲೀಸರು, 10 ದಿನಗಳ ಬಳಿಕ ಎಫ್ಐಆರ್ ದಾಖಲಿಸಿಕೊಂಡು ನೋಟಿಸ್ ಕೊಡಲು ಮನೆಗೆ ಬಂದು, ನಮ್ಮ ಬಾಲಕಿಗೆ ನೋಟಿಸ್ ಕೊಡುವ ನೆಪದಲ್ಲಿ ಧಮ್ಕಿ ಹಾಕಿದ್ದಾರೆ. ಆಕೆಯ ಫೋಟೋ ಮತ್ತು ವಿಡಿಯೋ ಮಾಡಿಕೊಂಡಿದ್ದಾರೆ’ ಎಂದು ಆರೋಪಿಸಿದ್ದಾರೆ.
ದೂರಿನಲ್ಲಿ ಏನಿದೆ?: 2024ರ ಅ.24ರಂದು ಸಂಜೆ 5.30ರ ಸುಮಾರಿಗೆ ಆರೋಪಿಗಳಾದ ಶೇಖರ್ ಮತ್ತು ಆತನ ಸಹಚರರರು ತಮ್ಮ ಮನೆ ಹತ್ತಿರ ಬಂದು, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅಲ್ಲದೆ, ನಮ್ಮ ನಿವೇಶನಕ್ಕೆ ಅತಿಕ್ರಮ ಪ್ರವೇಶಕ್ಕೆ ಮುಂದಾಗಿದ್ದರು. ಇದೇ ರೀತಿ ಹಲವು ಮಾಡಿ ದೌರ್ಜನ್ಯ ಎಸಗಿದ್ದಾರೆ. ಅದರಿಂದ ನನಗೆ ಹಾಗೂ ನನ್ನ ಕುಟುಂಬಕ್ಕೆ ಶೇಖರ್ ಮತ್ತು ಆತನ ಸಹಚರ ರಿಂದ ಪ್ರಾಣ ಭಯವಿದ್ದು, ರಕ್ಷಣೆ ಕೊಡಬೇಕು ಹಾಗೂ ಆರೋಪಿಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಈ ಹಿಂದೆಯೂ ದೌರ್ಜನ್ಯ: 2022ರಲ್ಲಿಯೂ ಶೇಖರ್, ತನ್ನ ಸಹಚರರಾದ ಮೋಹನ್, ಜೋಸೆಫ್ ಹಾಗೂ ಇತರರ ಜತೆ ಬಂದು ಉದ್ಯಮಿ ಶಶಾಂಕ್ ನಿವೇಶನಕ್ಕೆ ಅತಿಕ್ರಮ ಪ್ರವೇಶ ಮಾಡಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿತ್ತು. ಇದೀಗ ಆರೋಪಿಗಳು ಮತ್ತೆ ಅದೇ ರೀತಿ ಕಿರುಕುಳ ನೀಡಿದ್ದಾರೆ ಎಂದು ಶಶಾಂಕ್ ಆರೋಪಿಸಿದ್ದಾರೆ.