ಜಮ್ಮು : ಜಮ್ಮು ಕಾಶ್ಮೀರದ ಪೊಲೀಸ್ ಸಿಬಂದಿಯೊಬ್ಬ ಎಕೆ 47 ರೈಫಲ್ ಹಿಡಿದುಕೊಂಡಿರುವ ಆತನ ಫೋಟೋ ಸಾಮಜಿಕ ಜಾಲ ತಾಣದಲ್ಲಿ ವೈರಲ್ ಆಗಿದ್ದು ಆತನು ಲಷ್ಕರ್ ಎ ತಯ್ಯಬ ಉಗ್ರ ಸಂಘಟನೆಯನ್ನು ಸೇರಿಕೊಂಡಿರಬಹುದೆಂಬ ಊಹಾಪೋಹಗಳು ಬಲವಾಗಿವೆ.
ಜಮ್ಮು ಕಾಶ್ಮೀರದ ಕಠುವಾ ಜಿಲ್ಲೆಯಲ್ಲಿನ ಪೊಲೀಸ್ ತರಬೇತಿ ಕೆಂದ್ರದಲ್ಲಿ (ಪಿಟಿಸಿ) ಸೇವೆಗೆ ನಿಯೋಜಿಸಲ್ಪಟ್ಟಿದ್ದ ಪೊಲೀಸ್ ಪೇದೆ ಇಷ್‌ಫಾಕ್ ಅಹ್ಮದ್ ಈಚೆಗೆ ರಜೆಯಲ್ಲಿ ತೆರಳಿದವನು ಕರ್ತವ್ಯಕ್ಕೆ ಮರಳಿಲ್ಲ. ಆತ ಅ.23ರಂದು ಕರ್ತವ್ಯಕ್ಕೆ ಹಾಜರಾಗಬೇಕಿತ್ತು. ಆತನ ವಿರುದ್ಧ ನಾವು ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಪಿಟಿಸಿ ಕಠುವಾ ದ ಓರ್ವ ಹಿರಿಯ ಅಧಿಕಾರಿ ಹೇಳಿದ್ದಾರೆ.
ಎ ಕೆ 47 ರೈಫಲ್ ಹಿಡಿದುಕೊಂಡ ಇಷ್‌ಫಾಕ್ ಅಹ್ಮದ್‌ನ ಫೋಟೋ ಸಾಮಾಜಿಕ ಜಾಲ ತಾಣದಲ್ಲಿ ಕಾಣಿಸಿಕೊಂಡಿದ್ದು ಆತನ ದಕ್ಷಿಣ ಕಾಶ್ಮೀರದಲ್ಲಿ ಎಲ್‌ಇಟಿ ಉಗ್ರ ಸಂಘಟನೆಯನ್ನು ಸೇರಿಕೊಂಡಿರಬಹುದೇ ಎಂದು ಮಾದ್ಯಮದವರು ಕೇಳಿದ ಪ್ರಶ್ನೆಗೆ “ನಾವಿನ್ನೂ ವಿವರಗಳನ್ನು ಪರಿಶೀಲಿಸಬೇಕಷ್ಟೇ; ಈಗಲೇ ಏನೂ ಹೇಳಲಾಗದು’ ಎಂದು ಉತ್ತರಿಸಿದರು.
ದಕ್ಷಿಣ ಶೋಪಿಯಾನ್‌ನ ಹೆಫ್ ಶಿರ್ಮಾಲ್ ಗ್ರಾಮದ ನಿವಾಸಿಯಾಗಿರುವ ಅಹ್ಮದ್, ಜಮ್ಮು ಕಾಶ್ಮೀರ ಪೊಲೀಸ್ ಪಡೆಯನ್ನು ಸೇರಿಕೊಂಡದ್ದು 2012ರಲ್ಲಿ.
ರಜೆ ಪಡೆದು ಮನೆಗೆ ಮರಳಿದ ಬಳಿಕ ಅಹ್ಮದ್ ನಾಪತ್ತೆಯಾದ ಬಗ್ಗೆ ಆತನ ಮನೆಯವರು ಪೊಲೀಸರಿಗೆ ದೂರು ನೀಡಿದ್ದಾರೆ.
ಈಚಿನ ದಿನಗಳಲ್ಲಿ ಪೊಲೀಸ್ ಪಡೆ ತ್ಯಜಿಸಿ ಕಾಶ್ಮೀರದ ಉಗ್ರ ಸಮೂಹಗಳನ್ನು ಸೇರಿಕೊಂಡ ಎಂಟು ಪ್ರಕರಣಗಳು ಈ ವರೆಗೆ ವರದಿಯಾಗಿವೆ.