ಬೆಂಗಳೂರು: ಒಂದು ಛಾಯಾಚಿತ್ರ ಸಾವಿರ ನೆನಪು ಹಾಗೂ ಭಾವನೆಗಳಿಗೆ ಸಮ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಜಯಮಾಲ ಅಭಿಪ್ರಾಯಪಟ್ಟರು. ಬೆಂಗಳೂರು ಫೋಟೊ ಜರ್ನಲಿಸ್ಟ್ ಅಸೋಸಿಯೇಷನ್ ನಗರದ ಪ್ರಸ್ ಕ್ಲಬ್‌ನಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿಶ್ವ ಛಾಯಾಗ್ರಹಣ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಯಾವುದೇ ನೆನಪನ್ನಾಗಲಿ ಅಥವಾ ಆ ಕ್ಷಣದ ಭಾವನೆಯನ್ನಾಗಲಿ ದಾಖಲೆಯಾಗಿ ಉಳಿಯುಲು ಛಾಯಾಚಿತ್ರದಿಂದ ಮಾತ್ರ ಸಾಧ್ಯ. ಹೀಗಾಗಿಯೇ ಇಂದಿಗೂ ತಾನು ದಶಕಗಳ ಹಿಂದಿನ ನಟನೆಯ ನೆನಪುಗಳನ್ನು ಕೆಲ ಛಾಯಾಚಿತ್ರಗಳ ಮೂಲಕ ಮೆಲುಕು ಹಾಕಿ ನೆನಪಿನಲ್ಲಿಯೇ ಆ ದಶಕವನ್ನು ಒಂದು ಸುತ್ತಿ ಬರುತ್ತೇನೆ ಎಂದರು.
ಫೋಟೋ ಜರ್ನಲಿಸ್ಟ್‌ಗಳು ಆಫ್ಘಾನಿಸ್ತಾನದ ಯುದ್ಧ ಭೀತಿ, ಸೋಮಾಲಿಯಾದ ಬಡತನ, ಭೋಪಾಲ್ ಅನಿಲ ದುರಂತದಿಂದ ಹಿಡಿದು ಸದ್ಯದ ಕೊಡಗಿನಲ್ಲಾಗಿರುವ ನೆರೆಯ ಹಾನಿವರೆಗೂ ಜನರ ಸಮಸ್ಯೆಗಳನ್ನು ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ. ಅಂತಹ ದುರಂತ ಸ್ಥಳದ ವಸ್ತುಸ್ಥಿತಿಯನ್ನು ತಿಳಿಸಿ ಅವರ ಕಷ್ಟಗಳಿಗೆ ಮೊದಲು ಧ್ವನಿಯಾಗುವ ಮಹಾನ್ ಕಾರ್ಯಕ್ಕೆ ಅವರಿಗೆ ಯಾವ ಪ್ರಶಸ್ತಿ ನೀಡಿದರೂ ಕಡಿಮೆಯೇ ಎಂದು ಶ್ಲಾ ಸಿದರು.
ಪ್ರಸ್‌ಕ್ಲಬ್ ಅಧ್ಯಕ್ಷ ಸದಾಶಿವ ಶೆಣೈ ಮಾತನಾಡಿ, ಕರ್ನಾಟಕದ ಫೋಟೋ ಜರ್ನಲಿಸ್ಟ್‌ಗಳ ಬಗ್ಗೆ ದೇಶಾದ್ಯಂತ ಗೌರವಿದೆ. ಇಲ್ಲಿನ ಅನೇಕರು ತಮ್ಮ ಅದ್ಭುತ ಛಾಯಾಚಿತ್ರಗಳನ್ನು ಪ್ರದರ್ಶನ, ಪುಸ್ತಕ ಮಾಡಿ ಪ್ರಕಟಿಸಿದ್ದಾರೆ. ಈ ಹಿಂದೆ ಮಾಜಿ ಡಿಸಿಎಂ ಎಂ.ಪಿ ಪ್ರಕಾಶ್ ಅವರು ಫೋಟೋ ಜರ್ನಲಿಸ್ಟ್‌ಗಳ ಸಾಧನೆಯನ್ನು ಗುರುತಿಸಿ ಪ್ರಶಸ್ತಿ ನೀಡಿದ್ದರು. ಆ ನಂತರ ಗುರುತಿಸಿ ಪ್ರೊತ್ಸಾಹಿಸುವವರ ಸಂಖ್ಯೆ ಕಡಿಮೆಯಾಗಿದ್ದು, ರಾಜ್ಯಪ್ರಶಸ್ತಿ ಸೇರಿದಂತೆ ವಿವಿಧ ಪ್ರಶಸ್ತಿಗಳಿಗೆ ಛಾಯಾಗ್ರಹಕರನ್ನು ಪರಿಗಣಿಸಬೇಕು ಎಂದರು.
ಹಿರಿಯ ಛಾಯಾಗ್ರಹಕ ಸಗ್ಗರೆ ರಾಮಸ್ವಾಮಿ ಮಾತನಾಡಿ, ಪ್ರಸ್ತುತ ಛಾಯಾಗ್ರಹಣ ತಂತ್ರಜ್ಞಾನ ಸಾಕಷ್ಟು ಅಭಿವೃದ್ಧಿಯಾಗಿದ್ದು, ಪತ್ರಿಕೋದ್ಯಮಕ್ಕೆ ಆಧಾರ ಸ್ತಂಭವಾಗಿದೆ ಎಂದರು. ಅಸೋಸಿಯೇಷನ್ ಅಧ್ಯಕ್ಷ ಈಶ್ವರ್ ಶಿವಣ್ಣ, ಕಾರ್ಯದರ್ಶಿ ಶರಣಬಸಪ್ಪ ಇತರರಿದ್ದರು.