Advertisement

ಫೋನ್ ಕದ್ದಾಲಿಕೆ ಪ್ರಕರಣವನ್ನು ಸಿಬಿಐಗೆ ವಹಿಸಿರುವುದು ಸ್ವಾಗತಾರ್ಹ : ಬಿ.ಶ್ರೀರಾಮುಲು

10:19 AM Aug 19, 2019 | keerthan |

ಬಳ್ಳಾರಿ: ಫೋನ್ ಕದ್ದಾಲಿಕೆ ಪ್ರಕರಣವನ್ನು ಸಿಬಿಐಗೆ ವಹಿಸಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನಿರ್ಧಾರ ಸ್ವಾಗತಾರ್ಹ ಎಂದು ಮೊಳಕಾಲ್ಮುರು ಶಾಸಕ ಬಿ.ಶ್ರೀರಾಮುಲು ಅಭಿಪ್ರಾಯಪಟ್ಟರು.

Advertisement

ನಗರದ ತಮ್ಮ ನಿವಾಸದಲ್ಲಿ  ಸುದ್ದಿಗಾರರೊಂದಿಗೆ ಮಾತನಾಡಿ, ಫೋನ್ ಕದ್ದಾಲಿಸುವ ಕೆಲಸವನ್ನು ಮಾಜಿ, ಹಾಲಿ ಮುಖ್ಯಮಂತ್ರಿಗಳ್ಯಾರು ಮಾಡಬಾರದು. ಈ  ಹಿಂದೆ ಫೋನ್ ಕದ್ದಾಲಿಸಿದ್ದ ರಾಮಕೃಷ್ಣ ಹೆಗಡೆಯವರ ಸರ್ಕಾರವೇ ಬಿದ್ದಿದೆ. ಇಂಥಹ ಕೆಲಸವನ್ನು ಯಾರೊಬ್ಬರು ಮಾಡಬಾರದು. ರಾಷ್ಟ್ರೀಯ ನಾಯಕರ ಫೋನ್ ಗಳನ್ನು ಸಹ ಕದ್ದಾಲಿಸಿರುವ ಹಿನ್ನೆಲೆಯಲ್ಲಿ ಯಡಿಯೂರಪ್ಪನವರು ಪ್ರಕರಣವನ್ನು ಸಿಬಿಐಗೆ ವಹಿಸಿರಬಹುದು ಎಂದು ತಿಳಿಸಿದರು.

ಸಿಎಂ ಬಿಎಸ್ ವೈ ಹಾಗೂ ಪ್ರಧಾನಿ ನರೇಂದ್ರ ಮೋದಿಯವರು ನೆರೆಹಾವಳಿ ಬಗ್ಗೆ ವೈಮಾನಿಕ ಸಮೀಕ್ಷೆ ನಡೆಸಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯನವರು  ಆರೋಪಿಸುತ್ತಿದ್ದಾರೆ. ಆದರೆ ಸಿದ್ದರಾಮಯ್ಯನವರಿಗೆ ರಾಜಕೀಯವಾಗಿ ಮರುಜನ್ಮ ನೀಡಿದ ಬಾದಾಮಿ ಕ್ಷೇತ್ರಕ್ಕೆ ಒಮ್ಮೆಯೂ ಭೇಟಿ ನೀಡಿಲ್ಲ. ಕಣ್ಣು ನೋವಿನ ನೆಪದಲ್ಲಿ ನೆರೆಹಾವಳಿಗೆ ತುತ್ತಾಗಿದ್ದ ಕ್ಷೇತ್ರದ ಜನರ ಬಗ್ಗೆ ನಿಮಗೆ ಕಾಳಜಿಯಿಲ್ಲ. ಕಣ್ಣು ನೋವಿದೆ ಎಂದು ದೆಹಲಿಗೆ ಹೋಗುತ್ತೀರಿ. ಬಿರಿಯಾನಿ ತಿನ್ನುತ್ತೀರಿ, ಕ್ಷೇತ್ರದ ಬಗ್ಗೆ ಮಾತ್ರ ಗಮನ ಹರಿಸದ ನೀವು ಬಿಎಸ್ ವೈ, ಮೋದಿ ಬಗ್ಗೆ ಮಾತನಾಡಲು ಯಾವ ನೈತಿಕತೆ ಇದೆ ಎಂದು ಹರಿಹಾಯ್ದರು.

ಇದೇ ಆಗಸ್ಟ್ 21 ರಂದು ಸಚಿವ ಸಂಪುಟ ವಿಸ್ತರಣೆ ಆಗಲಿದೆ ಎಂದು ಮಾಧ್ಯಮಗಳಿಂದ ತಿಳಿದುಬಂದಿದೆ. ಈ ಕುರಿತು ಪಕ್ಷದ ರಾಷ್ಟ್ರೀಯ ಅಧ್ಯಕ್ಷರು, ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿ ಚರ್ಚಿಸಿ ನಿರ್ಣಯ ಕೈಗೊಂಡಿದ್ದಾರೆ.  ಈ ಕುರಿತು ನಾನು ಕೂಡ ಸಿ.ಎಂ  ಬಿಎಸ್ ವೈ ಅವರೊಂದಿಗೆ ಚರ್ಚಿಸುತ್ತೇನೆ.  ಸಚಿವ ಸ್ಥಾನದ ಬಗ್ಗೆ ಪಕ್ಷದ ನಿರ್ಣಯಕ್ಕೆ ಬದ್ಧ ಎಂದು ಸ್ಪಷ್ಟಪಡಿಸಿದರು. ಈ ವೇಳೆ ಮಾಜಿ ಸಂಸದ ಸಣ್ಣ ಪಕ್ಕೀರಪ್ಪ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next