Advertisement

ಅಕ್ರಮ ಗಣಿಗಾರಿಕೆ: ಕಾರ್ಮಿಕನಿಂದಲೇ ಎಸ್‌ಪಿಗೆ ದೂರು!

08:10 AM Feb 10, 2018 | Karthik A |

ಉಡುಪಿ: ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿದೆ ಎಂದು ಅದೇ ಗಣಿಗಾರಿಕೆಯಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕನೋರ್ವ ಪೊಲೀಸ್‌ ಫೋನ್‌-ಇನ್‌ ಕಾರ್ಯಕ್ರಮದಲ್ಲಿ ಎಸ್‌ಪಿ ಲಕ್ಷ್ಮಣ ಬ. ನಿಂಬರಗಿಯವರಿಗೆ ದೂರು ನೀಡಿದ್ದಾರೆ. ಗಣಿಗಾರಿಕೆ ಮಾಲಕರು ತುಂಬಾ ಕಷ್ಟ ಕೊಡುತ್ತಾರೆ. ರಜೆ ಕೇಳಿದರೆ ಕೊಡೋದಿಲ್ಲ. ಒಂದು ವೇಳೆ ರಜೆ ಕೊಟ್ಟರೂ ಸಂಬಳ ಕಡಿತ ಮಾಡ್ತಾರೆ. ಹಾಗಾಗಿ ಅವರು ಮಾಡುತ್ತಿರುವ ಅಕ್ರಮ ಗಣಿಗಾರಿಕೆ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಕಾರ್ಮಿಕ ಆಗ್ರಹಿಸಿದ್ದಾರೆ. ಈ ಕಲ್ಲು ಗಣಿಗಾರಿಕೆ ಪ್ರದೇಶವು ಕಾರ್ಕಳ ಗ್ರಾಮಾಂತರ ಭಾಗಕ್ಕೆ ಒಳಪಡುತ್ತದೆ.

Advertisement

ಬ್ರಹ್ಮಾವರ ವ್ಯಾಪ್ತಿಯಲ್ಲಿ ಮಟ್ಕಾ ಹಾವಳಿ, ಉಪ್ಪುಂದದಲ್ಲಿ ಮಟ್ಕಾ ರೈಡ್‌ ಆದ ಬಳಿಕ ಅವರು ಉಡುಪಿ ಬಿಟ್ಟು ಭಟ್ಕಳ ನಂಟು ಇರಿಸಿಕೊಂಡು ಫೋನ್‌ನಲ್ಲಿ ವ್ಯವಹಾರ ನಡೆಸುತ್ತಿರುವ ಬಗ್ಗೆ ಸಾರ್ವಜನಿಕರು ಫೋನ್‌ಇನ್‌ನಲ್ಲಿ ದೂರು ನೀಡಿದರು. ಶುಕ್ರವಾರ ಒಟ್ಟು 21 ಕರೆಗಳನ್ನು ಎಸ್‌ಪಿ ಸ್ವೀಕರಿಸಿದರು.

ತಿಂಗಳ ಒಟ್ಟು ಪ್ರಕರಣಗಳು
ಕಳೆದೊಂದು ತಿಂಗಳಲ್ಲಿ ಮಟ್ಕಾ-81 (83 ಬಂಧನ), ಇಸ್ಪೀಟು-81 (131 ಬಂಧನ), ಕೋಟ್ಪಾ-250, ಹೆಲ್ಮೆಟ್‌ ರಹಿತ ಚಾಲನೆ ಕೇಸು-2,471, ಕುಡಿದು ವಾಹನ ಚಾಲನೆ-19, ಓವರ್‌ಸ್ಪೀಡ್‌-254, ಕರ್ಕಶ ಹಾರನ್‌-260, ಚಾಲನೆಯಲ್ಲಿ ಮೊಬೈಲ್‌ ಬಳಕೆ-99, ಅಕ್ರಮ ಮದ್ಯ-1, ಇತರ- 3,022 ಹೀಗೆ ಒಟ್ಟು 6,200 ಮೋಟಾರು ವಾಹನ ಕಾಯ್ದೆ ಕೇಸುಗಳನ್ನು ತಾನು ಅಧಿಕಾರ ಸ್ವೀಕರಿಸಿದಂದಿನಿಂದ ಹಾಕಲಾಗಿದೆ ಎಂದು ಎಸ್‌ಪಿ ತಿಳಿಸಿದರು.

ಮಟ್ಕಾ-ಸೆಕ್ಯೂರಿಟಿ ಕೇಸ್‌; 5 ಲ.ರೂ. ಬಾಂಡ್‌
ಜಿಲ್ಲೆಯ ಮಟ್ಕಾ ಕೇಸುಗಳ ಕುರಿತು ಪ್ರತಿಕ್ರಿಯಿಸಿದ ಎಸ್‌ಪಿಯವರು, ಹಿಂದಿನ 3 ವರ್ಷಗಳಲ್ಲಿ ಆದ ಮಟ್ಕಾ ಕೇಸನ್ನು ಪರಿಶೀಲಿಸಲಾಗಿದ್ದು, ಅದರಲ್ಲಿ ಭಾಗಿಯಾಗಿರುವವರ (ಮಟ್ಕಾ ಚೀಟಿ ಬರೆಯುವವರ ಸಹಿತ ಅದನ್ನು ಮುನ್ನಡೆಸುವವರು) ಹೆಸರಿನ ಪಟ್ಟಿಯನ್ನು ಸಿದ್ಧಪಡಿಸಿಕೊಳ್ಳಲಾಗಿದೆ. ಮುಂದಕ್ಕೆ ಅವರೇನಾದರೂ ಮಟ್ಕಾ ಕೇಸಿನಲ್ಲಿ ಸಿಕ್ಕಿದರೆ ಸೆಕ್ಯೂರಿಟಿ ಪ್ರಕರಣವನ್ನೂ ದಾಖಲಿಸಿಕೊಂಡು ಅವರು 5 ಲಕ್ಷ ರೂ. ದಂಡವನ್ನು ಸರಕಾರಕ್ಕೆ ಕಟ್ಟುವಂತೆ ಮಾಡಲು ಕ್ರಮ ಕೈಗೊಳ್ಳಲಾಗುವುದು. ಇದಕ್ಕೆ ಬಾಂಡ್‌ ಅನ್ನು ಮಾಡಲಾಗುವುದು. 5 ಲ.ರೂ. ಕಟ್ಟದಿದ್ದರೆ ಅವರು ಜೈಲಿಗೆ ಹೋಗುವಂತಹ ಸ್ಥಿತಿ ನಿರ್ಮಾಣ ವಾಗುತ್ತದೆ. ಈ ಮೂಲಕ ಮಟ್ಕಾ ಜುಗಾರಿ ಆಟದ ನಿಯಂತ್ರಣಕ್ಕೆ ಹೊಸ ಹೆಜ್ಜೆ ಇರಿಸಲಾಗಿದೆ ಎಂದವರು ತಿಳಿಸಿದರು.

ಹಾಸ್ಟೆಲ್‌ ಪಕ್ಕ ಮದ್ಯದಂಗಡಿ: ತೆರವಿಗೆ ಆಗ್ರಹ
ಆದಿಉಡುಪಿಯಲ್ಲಿ ವಿದ್ಯಾರ್ಥಿನಿಯರ ವಸತಿ ಹಾಸ್ಟೆಲ್‌ ಇದ್ದು, ಇದರ ಪಕ್ಕದಲ್ಲಿಯೇ ಮದ್ಯದಂಗಡಿ ಪ್ರಾರಂಭವಾಗಿದೆ. ಇದರಿಂದ ವಿದ್ಯಾರ್ಥಿನಿಯರಿಗೆ ತೊಂದರೆಯಾಗುತ್ತಿದೆ. ಹಾಗೆಯೇ ಇದೇ ಪರಿಸರದಲ್ಲಿ ಶಾಲೆಯೂ ಇದೆ. ಜನವಸತಿ ಪ್ರದೇಶವೂ ಆಗಿದೆ ಎನ್ನುವ ದೂರು ಬಂದಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ ಎಸ್‌ಪಿ, ಈ ಮೊದಲೇ ಬಂದ ದೂರಿನಲ್ಲಿ ಸ್ಥಳ ಪರಿಶೀಲನೆ ನಡೆಸಲಾಗಿದೆ. ಈ ವೇಳೆ ಅಲ್ಲಿ ಕಾನೂನು ಉಲ್ಲಂಘನೆಯಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿತ್ತು. ಆ ವರದಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಗಿದೆ. ಮುಂದಿನ ಕ್ರಮವನ್ನು ಡಿಸಿಯವರು ಕೈಗೊಳ್ಳಲಿದ್ದಾರೆ ಎಂದರು.

Advertisement

ಫೋನ್‌-ಇನ್‌ ದೂರಿನ ಪ್ರಮುಖಾಂಶಗಳು
– ಉಡುಪಿ-ಬ್ರಹ್ಮಾವರ-ಹೆಬ್ರಿ ರೂಟ್‌ನಲ್ಲಿ ಖಾಸಗಿ ಬಸ್‌ನವರು ಸರಕಾರಿ ಬಸ್‌ನವರನ್ನು  ಹೆದರಿಸ್ತಾರೆ. ಅನಾರೋಗ್ಯಕರ ಪೈಪೋಟಿ ನಡೆಸುತ್ತಿದ್ದಾರೆ.
– ಮಿತಿಮೀರಿದ ಕರ್ಕಶ ಹಾರ್ನ್ ಕಿರಿಕಿರಿ.
– ಬಸ್‌ನಲ್ಲಿ  ಅಂಗವಿಕಲರು, ಹಿರಿಯ ನಾಗರಿಕರು, ಮಹಿಳೆಯರ ಮೀಸಲು ಸೀಟಿನಲ್ಲಿ ಅನ್ಯ ಪ್ರಯಾಣಿಕರು ಕುಳಿತುಕೊಳ್ಳುವುದು.
– ಮೀನಿನ ಲಾರಿಗಳಿಂದ ದಾರಿಗೆ ನೀರು ಬೀಳುವುದು.
- ಹೆರ್ಗ ಗೋಳಿಕಟ್ಟೆಯಲ್ಲಿ ಬೈಕಿನಲ್ಲಿ ಬಂದು ಸಾರ್ವಜನಿಕರಿಗೆ ತೊಂದರೆ ಕೊಡುವುದು. 
– ಕುಂದಾಪುರ, ಕೋಟೇಶ್ವರದಲ್ಲಿ ರಸ್ತೆ ಬದಿಯಲ್ಲಿಯೇ ವಾಹನ ನಿಲ್ಲಿಸುವುದು.
– ಹಾವಂಜೆಯ ಶಾಲೆಯೊಂದರ ಸಮೀಪ ಜುಗಾರಿ.
– ಉಪ್ಪುಂದ ಸರಕಾರಿ ಕಾಲೇಜು ಪ್ರದೇಶದಲ್ಲಿ ವಿದ್ಯಾರ್ಥಿನಿಯರಿಗೆ ತೊಂದರೆ.
– ಹೆಲ್ಮೆಟ್‌ ಇಲ್ಲದೆ ಬೈಕ್‌ ಚಲಾಯಿಸುವ ವಿದ್ಯಾರ್ಥಿಗಳು.
– ಮಲ್ಪೆಯಲ್ಲಿ ಗುಜರಿ ಹೇರಿಕೊಂಡು ಹೋಗುವ ವಾಹನಗಳಿಂದ ತೊಂದರೆ.
– ಮಣಿಪಾಲ ಮಣ್ಣಪಳ್ಳದಲ್ಲಿ ಅನೈತಿಕ ಚಟುವಟಿಕೆ.
– ಶಿರ್ವದಲ್ಲಿ ಕ್ರಷರ್‌ ಉದ್ಯಮದಿಂದ ಸ್ಥಳೀಯವಾಗಿ ಸಮಸ್ಯೆಯಾಗುವುದು.
– ಟೂರಿಸ್ಟ್‌ ವಾಹನ ಹೊರತುಪಡಿಸಿ ನಿತ್ಯ ಟ್ರಿಪ್‌ನ ಬಸ್‌ಗಳು ಮದುವೆ ಟ್ರಿಪ್‌ ಹೋಗುವುದು.
– ಅಂಬಾಗಿಲು-ಮಣಿಪಾಲ ರಸ್ತೆಯ ಶ್ಯಾಮ್‌ ಸರ್ಕಲ್‌ ಬಳಿ ಬ್ಯಾನರ್‌, ಬಂಟಿಂಗ್ಸ್‌ನಿಂದ ವಾಹನ ಸವಾರರಿಗೆ ತೊಂದರೆ.
–  ಪಾಡಿಗಾರಿನಲ್ಲಿ ಮೊಬೈಲ್‌ ಟವರ್‌ ತೆಗೆಸಲು ಆಗ್ರಹ.
– ಕಾರ್ಕಳ ನಗರದಲ್ಲಿ ಕಟ್ಟಡಕ್ಕೆ ಮರಳಿನ ಕೊರತೆ.
– ಶಂಕರನಾರಾಯಣದಲ್ಲಿ ಅಕ್ರಮ ಮರಳುಗಾರಿಕೆ.
– ಅನುಕಂಪದ ಆಧಾರದ ಪೊಲೀಸ್‌ ಕೆಲಸ ಸಿಕ್ಕಿಲ್ಲ.
– ಹೆದ್ದಾರಿಯಲ್ಲಿ ಅಸಮರ್ಪಕವಾಗಿರುವ ಬ್ಯಾರಿಕೇಡ್‌.
ಹೀಗೆ ಹಲವು ದೂರುಗಳು ಸಾರ್ವಜನಿಕರಿಂದ ಬಂದವು.

‘ಸುರಕ್ಷಾ ಪೊಲೀಸ್‌ ಆ್ಯಪ್‌’ ಪರಿಶೀಲನೆ
ಸುರಕ್ಷಾ ಪೊಲೀಸ್‌ ಆ್ಯಪ್‌ ಅನ್ನು ಪರಿಶೀಲಿಸಿದ್ದೇನೆ. ಈ ಆ್ಯಪ್‌ನ ಕಾರ್ಯಚಟುವಟಿಕೆಯ ಕುರಿತು ‘ಉದಯವಾಣಿ’ಯಲ್ಲಿ ಪ್ರಕಟವಾದ ವರದಿಯನ್ನು ಗಮನಿಸಿದ್ದೇನೆ. ಫೋನ್‌-ಇನ್‌ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಯಾವುದೇ ದೂರುಗಳನ್ನು ಅಳುಕಿಲ್ಲದೆ ಮುಕ್ತವಾಗಿ ಸ್ವತಃ ನನಗೆ ಕೊಡಬಹುದಾದ ಹಿನ್ನೆಲೆಯಲ್ಲಿ ಸುರಕ್ಷಾ ಪೊಲೀಸ್‌ ಆ್ಯಪ್‌ಗೆ ಬರುವ ದೂರುಗಳ ಸಂಖ್ಯೆ ಕಡಿಮೆಯಾಗಿದೆ. ಆದರೂ ಆ್ಯಪ್‌ ಅನ್ನು ಯಾವ ರೀತಿಯಲ್ಲಿ ಸುಧಾರಣೆ ಮಾಡಬಹುದು ಎನ್ನುವುದನ್ನು ಮತ್ತೂಮ್ಮೆ ಪರಿಶೀಲಿಸಲಿದ್ದೇನೆ.
– ಲಕ್ಷ್ಮಣ ಬ. ನಿಂಬರಗಿ, ಎಸ್‌.ಪಿ.

Advertisement

Udayavani is now on Telegram. Click here to join our channel and stay updated with the latest news.

Next