ಕೋಲಾರ: ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಫೋನ್ ಇನ್ ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ ಸಿಕ್ಕಿದ್ದು, 212 ಮಕ್ಕಳು ದೂರವಾಣಿ ಕರೆ ಮಾಡಿದ್ದರು. ಸಂಪನ್ಮೂಲ ವ್ಯಕ್ತಿಗಳು 300ಕ್ಕೂ ಹೆಚ್ಚು ಪ್ರಶ್ನೆಗಳಿಗೆ ಉತ್ತರಿಸಿದರು ಎಂದು ಡಿಡಿಪಿಐ ಕೆ.ರತ್ನಯ್ಯ ತಿಳಿಸಿದರು.
ಗುರುವಾರ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಸಮಸ್ಯೆಗಳ ಪರಿಹಾರಕ್ಕಾಗಿ ಹಮ್ಮಿಕೊಂಡಿದ್ದ ಫೋನ್ ಇನ್ ಕಾರ್ಯಕ್ರಮ ನೇತೃತ್ವ ವಹಿಸಿ ಅವರು ಈ ವಿವರ ನೀಡಿದರು. ಕೋವಿಡ್ ಸೋಂಕು ಹರಡುವಿಕೆ ತಡೆಗಾಗಿ ಪರೀಕ್ಷೆ ಮುಂದೂಡಲಾಗಿದೆ. ಆದರೆ, ವಿದ್ಯಾರ್ಥಿಗಳಲ್ಲಿನ ಆತಂಕ ಪರಿಹಾರಕ್ಕೆ ಒತ್ತು ನೀಡುವ ಅಗತ್ಯವಿದ್ದು, ಈ ಹಿನ್ನೆಲೆಯಲ್ಲಿ ಫೋನ್ ಇನ್ ಕಾರ್ಯಕ್ರಮ ಹಮ್ಮಿಕೊಂಡು ಮಕ್ಕಳ ಹಲವು ಪ್ರಶ್ನೆಗಳಿಗೆ ಉತ್ತರ ನೀಡಿದ್ದಾಗಿ ತಿಳಿಸಿದರು.
ಪರೀಕ್ಷೆ ನಡೆಯುತ್ತೆ: ಪರೀಕ್ಷಾ ನೋಡಲ್ ಅಧಿಕಾರಿ ಎ.ಎನ್.ನಾಗೇಂದ್ರಪ್ರಸಾದ್, ಮಕ್ಕಳು ದೂರವಾಣಿ ಕರೆ ಮಾಡಿ ಪರೀಕ್ಷೆ ನಡೆಯುತ್ತದೆಯೇ? ಹಾಗೆಯೇ ಪಾಸ್ ಮಾಡುತ್ತಾರೆಂಬ ವದಂತಿಗಳಿದ್ದು ನಿಜವೇ ಎಂದು ಪ್ರಶ್ನಿಸಿದರು ಎಂದು ತಿಳಿಸಿದರು. ಯಾವುದೇ ಕಾರಣಕ್ಕೂ ಪರೀಕ್ಷೆ ಮುಂದೂಡುವುದಿಲ್ಲ, ಮಕ್ಕಳು ವದಂತಿಗಳಿಗೆ ಕಿವಿಗೊಡದಿರಿ, ಆತಂಕ ಬೇಡ, ನಿಮ್ಮ ಶೈಕ್ಷಣಿಕ ಜೀವನಕ್ಕೆ ಯಾವುದೇ ಸಮಸ್ಯೆ ಎದುರಾಗುವುದಿಲ್ಲ ಎಂದು ಧೈರ್ಯ ತುಂಬಿದ್ದಾಗಿ ತಿಳಿಸಿದರು. ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆಯೇ ವೇಳಾಪಟ್ಟಿ ಪ್ರಕಟಿಸಿ, ಪ್ರತಿ ವಿಷಯದ ಪರೀಕ್ಷೆ ನಡುವೆ ಓದಲು ಅವಕಾಶವೂ ನೀಡಲಾಗುತ್ತದೆ, 10 ದಿನಗಳ ಪುನರ್ಮನನ ತರಗತಿಯೂ ನಡೆಯುತ್ತದೆ, ಆತಂಕಬೇಡ, ನಿಮ್ಮ ಅಧ್ಯಯನ ಮುಂದುವರಿಸಿ ಎಂದು ತಿಳಿಸಿದರು.
ಮಕ್ಕಳಿಂದ ಪ್ರಶ್ನೆಗಳು: ಹಲವಾರು ವಿದ್ಯಾರ್ಥಿಗಳು ಎರಡು-ಮೂರು ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದುಕೊಂಡರು. ಒಟ್ಟು 212 ಮಕ್ಕಳು ದೂರವಾಣಿ ಕರೆ ಮಾಡಿದ್ದು, ಅದರಲ್ಲಿ ಕನ್ನಡಕ್ಕೆ ಸಂಬಂಧಿಸಿದಂತೆ 10 ಪ್ರಶ್ನೆ, ಇಂಗ್ಲಿಷ್ ವಿಷಯಕ್ಕೆ 12 ಪ್ರಶ್ನೆ, ಗಣಿತಕ್ಕೆ 50 ಪ್ರಶ್ನೆ, ಸಮಾಜ ವಿಜ್ಞಾನಕ್ಕೆ 22 ಹಾಗೂ ವಿಜ್ಞಾನ ವಿಷಯಕ್ಕೆ ಸಂಬಂಧಿಸಿದಂತೆ ಅತಿ ಹೆಚ್ಚು ಅಂದರೆ 60 ಪ್ರಶ್ನೆಗಳನ್ನು ಮಕ್ಕಳು ಕೇಳಿ ಉತ್ತರ ಪಡೆದುಕೊಂಡಿದ್ದಾಗಿ ವಿವರಿಸಿದರು. ಫೋನ್ ಇನ್ ಕಾರ್ಯಕ್ರಮದಲ್ಲಿ ವಿಷಯವಾರು ಸಮಸ್ಯೆಗಳಿಗೆ ಸಂಪನ್ಮೂಲ ವ್ಯಕ್ತಿಗಳಾದ ಎಸ್.ಅನಂತಪದ್ಮನಾಭ್, ಬಿ.ಕೆ.ನಾಗರಾಜ್, ಫಣಿಮಲರ್, ಎನ್.ಎಸ್ .ಭಾಗ್ಯಾ, ನರಸಿಂಹಪ್ರಸಾದ್, ಬಸವರಾಜ್, ಶೋಭಾ ಉತ್ತರಿಸಿ ಆತಂಕ ನಿವಾರಿಸಿದರು.
ಪರೀಕ್ಷಾ ಸಿದ್ಧತೆ, ವೇಳಾಪಟ್ಟಿ ಮತ್ತಿತರ ಸಮಸ್ಯೆಗಳಿಗೆ ಡಿಡಿಪಿಐ ಕೆ.ರತ್ನಯ್ಯ, ಪರೀಕ್ಷಾ ನೋಡಲ್ ಅಬಕಾರಿ ಎ.ಎನ್ .ನಾಗೇಂದ್ರಪ್ರಸಾದ್, ಶಿಕ್ಷಣಾಧಿಕಾರಿ ಸಿ.ಆರ್. ಅಶೋಕ್, ಡಿವೈಪಿಸಿ ಮೋಹನ್ ಬಾಬು, ಎವೈಪಿಸಿ ಸಿದ್ದೇಶ್, ವಿಷಯ ಪರಿವೀಕ್ಷಕ ಗಾಯತ್ರಿ, ಕೃಷ್ಣಪ್ಪ ಉತ್ತರಿಸಿದರು.