ಬೆಂಗಳೂರು: ಗುತ್ತಿಗೆದಾರರ ಪ್ಯಾಕೇಜ್ ಸಿಸ್ಟಂ ಅನ್ನು ಹಂತಹಂತವಾಗಿ ಕಡಿಮೆ ಮಾಡಲಾಗುವುದು. ಆ ಕೆಲಸವನ್ನು ಸರಕಾರ ಮಾಡಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘ ಅರಮನೆ ಮೈದಾನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಎರಡು ದಿನಗಳ ರಾಜ್ಯ ಗುತ್ತಿಗೆದಾರರ ರಾಜ್ಯಮಟ್ಟದ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹೊರರಾಜ್ಯದ ಗುತ್ತಿಗೆದಾರರ ಬಗ್ಗೆ ಮತ್ತು ಪ್ಯಾಕೇಜ್ ವ್ಯವಸ್ಥೆ ರದ್ದತಿ ಬಗ್ಗೆ ಪ್ರಸ್ತಾವ ಮಾಡಿದ್ದೀರಿ. ಆದರೆ, ಒಮ್ಮೆಲೆ ಬೇರೆ ರಾಜ್ಯದ ಗುತ್ತಿಗೆದಾರರನ್ನು ಓಡಿಸಲು ಸಾಧ್ಯವಿಲ್ಲ. ಹಂತಹಂತವಾಗಿ ಪ್ಯಾಕೇಜ್‌ಗಳನ್ನು ಕಡಿಮೆ ಮಾಡಿ ರಾಜ್ಯದ ಗುತ್ತಿಗೆದಾರರಿಗೆ ನೀಡಬೇಕು. ಆ ಕೆಲಸವನ್ನು ಸರಕಾರ ಮಾಡಲಿದೆ. ಆದರೆ ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳುವುದಕ್ಕೆ ಆದ್ಯತೆ ನೀಡಿ ಎಂದರು.
ಸಣ್ಣ ಗುತ್ತಿಗೆದಾರರ ಅನುಕೂಲಕ್ಕಾಗಿ ಕ್ಷೇತ್ರವಾರು 25 ಕೋಟಿಯಂತೆ 4 ಸಾವಿರ ಕೋ. ರೂ. ಕಾಮಗಾರಿ ನೀಡಲು ಲೋಕೋಪಯೋಗಿ ಸಚಿವರಿಗೆ ಸೂಚಿಸಿದ್ದೇನೆ. ಸಣ್ಣ ಗುತ್ತಿಗೆದಾರರನ್ನು ಉಳಿಸುವ ನಿಟ್ಟಿನಲ್ಲಿ ಸರಕಾರ ಕೆಲಸ ಮಾಡುತ್ತಿದೆ. ಈಗಾಗಲೇ ಗುತ್ತಿಗೆದಾರರ ಭವನಕ್ಕೆ ಅನುದಾನ ಕೂಡ ಗುತ್ತಿಗೆದಾರರ ಸಂಘ ಕೇಳಿದೆ, ಬೇಡಿಕೆಗಳ ಈಡೇರಿಸುವ ಬಗ್ಗೆ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವರಾದ ಸತೀಶ್ ಜಾರಕಿಹೊಳಿ, ಬೋಸರಾಜು, ಜಮೀರ್ ಅಹಮದ್ ಖಾನ್, ದಿನೇಶ್ ಗುಂಡೂರಾವ್ ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ಕೆಂಪಣ್ಣ, ಕಾರ್ಯಾಧ್ಯಕ್ಷ ಆರ್. ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.