Advertisement
ಕಾಶ್ಮೀರಿ ಮಹಿಳೆಯರ ಸಾಂಪ್ರದಾಯಿಕ ಉಡುಗೆಯ ವೈಶಿಷ್ಟéವೆಂದರೆ ಅವುಗಳು ಅಲ್ಲಿನ ತೀವ್ರ ಚಳಿ ಹಾಗೂ ಕಡಿಮೆ ಉಷ್ಣತೆಯ ಹಮಾಮಾನದಿಂದ ದೇಹವನ್ನು ರಕ್ಷಿಸುತ್ತವೆ. ಅಂತೆಯೇ ಈ ಉಡುಗೆಗಳು ಉಣ್ಣೆ ಮಿಶ್ರಿತ ಹತ್ತಿ, ರೇಶೆ¾ ಹಾಗೂ ಉಣ್ಣೆಯಿಂದ ತಯಾರಾದ ದಿರಿಸುಗಳಾಗಿವೆ.
“ಫೇರನ್’ ಉಡುಗೆಗೆ “ಪ್ರವರ್ನಾ’ ಎಂಬ ಹೆಸರೂ ಇದೆ. ಈ ಉಡುಗೆ 2 ಬಗೆಯ ದಿರಿಸುಗಳಿಂದ ಕೂಡಿದೆ. ಪಂಚೆಯಂತೆ ಸುತ್ತಿಕೊಳ್ಳುವ ಬಿಳಿ ಅಥವಾ ತಿಳಿಬಣ್ಣದ ಉಡುಗೆಗೆ “ಪೊಟ್‌ಶ್’ ಎನ್ನುತ್ತಾರೆ. ಅದರ ಮೇಲೆ ಉದ್ದದ ನಿಲುವಂಗಿಯಂತೆ ಕಾಣುವ ಗಾಢಬಣ್ಣದ ರಂಗುರಂಗಿನ, ಕಸೂತಿಯ ಚಿತ್ತಾರ ಉಳ್ಳ ಫೇರನ್ ತೊಡುಗೆ ಧರಿಸುತ್ತಾರೆ. ಕಾಶ್ಮೀರದ ಮಹಿಳೆಯರಲ್ಲಿ ಹಿಂದೂಗಳು ಹಾಗೂ ಮುಸ್ಲಿಮರು “ಫೇರನ್’ ಅನ್ನು ಸಾಂಪ್ರದಾಯಿಕವಾಗಿ ಧರಿಸುತ್ತಾರೆ. ಮುಸ್ಲಿಂ ಮಹಿಳೆಯರಲ್ಲಿ ನಿಲುವಂಗಿಯ ಉದ್ದ ಹಾಗೂ ತೋಳಿನ ಉದ್ದ ಅಧಿಕವಾಗಿರುತ್ತದೆ. ತಲೆಯ ಮೇಲೆ ಧರಿಸುವ ತಿಳಿವಸ್ತ್ರಕ್ಕೆ “ಕಸಬಾ’ ಎಂದು ಕರೆಯುತ್ತಾರೆ.
Related Articles
ಇದರೊಂದಿಗೆ ಅಂದದ ಬಣ್ಣ ಬಣ್ಣದ ಮೇಲ್‌ವಸ್ತ್ರವನ್ನು ತಲೆಯ ಮೇಲೆ ಧರಿಸುತ್ತಾರೆ. ಲಡಾಖ್‌ನಲ್ಲಿ ಧರಿಸುವ ಸಾಂಪ್ರದಾಯಕ ಉಡುಗೆಯ ಹೆಸರು “ಕುಂಟೋಪ್’ ಎಂದು. ಇದೂ ಸಹ “ಬೋಕ್’ ಎಂದು ಕರೆಯಲಾಗುವ ಆಕರ್ಷಕ ಶಾಲ್‌ನ್ನು ಹೊಂದಿರುತ್ತದೆ.
Advertisement
ಕಾಶ್ಮೀರಿ ಮಹಿಳೆಯರ ಉಡುಗೆಯ ಅಂದಕ್ಕೆ ವಿಶೇಷ ಮೆರುಗು ನೀಡುವುದು ಅವರು ಧರಿಸುವ ದೊಡ್ಡ ಗಾತ್ರದ ಆಕರ್ಷಕ ಶೈಲಿಯ ಬೆಳ್ಳಿಯ ಆಭರಣಗಳು. ಜಮ್ಮು ಕಾಶ್ಮೀರಿ ಮಹಿಳೆಯ ಸಾಂಪ್ರದಾಯಕ ಉಡುಗೆಗಳು ಹೆಚ್ಚಾಗಿ ವೈವಿಧ್ಯಮಯ ಕಿವಿಯ ಬೆಂಡೋಲೆ, ನತ್ತು, ದೊಡ್ಡ ಹಾರ, ಬಳೆ ಹಾಗೂ ಕಾಲಿನ ಗೆಜ್ಜೆಯೊಂದಿಗೆ ಒಪ್ಪಗೊಂಡಿರುತ್ತವೆ. ಬಂಗಾರದ ಆಭರಣಗಳನ್ನು ವಿಶೇಷ ಸಮಾರಂಭಗಳಲ್ಲಿ ಅಧಿಕವಾಗಿ ಧರಿಸಲಾಗುತ್ತದೆ.
ಕಾಶ್ಮೀರಿ ವಧುವಿನ ಸಾಂಪ್ರದಾಯಿಕ ಉಡುಗೆ ಇಂದಿಗೂ ಫೇರನ್ ಆಗಿದೆ. ಆಧುನಿಕ ಕಾಲಕ್ಕೆ ತಕ್ಕಂತೆ ವೈಭವಯುತವಾಗಿ ವಧುವಿನ ಫೇರನ್ ದಿರಿಸಿಗೆ ಕನ್ನಡಿಯಿಂದ ಅಲಂಕಾರ, ಜರತಾರಿ ಕಸೂತಿಗಳ ಆಕರ್ಷಕ ವಿನ್ಯಾಸಗಳನ್ನು ಮಾಡಲಾಗುತ್ತದೆ. ಮದುವೆಗಳಲ್ಲಿ ಧರಿಸುವ ಕಾಶ್ಮೀರಿ ಶಾಲ್‌ಗಳನ್ನು ಕೈಮಗ್ಗದಿಂದಲೇ ತಯಾರಿಸುತ್ತಾರೆ. ವಿಶಿಷ್ಟವಾಗಿ “ಪಶ್ಮಿನಾ’ ಶಾಲ್‌ಗಳು ಮಹತ್ವಪೂರ್ಣವಾಗಿವೆ. ಪಶ್ಮಿನಾ ಶಾಲ್‌ಗಳ ಕುರಿತಾಗಿ ಒಂದು ಮಾತಿದೆ- ಪಶ್ಮಿನಾ ಶಾಲುಗಳಲ್ಲಿ ಎಷ್ಟು ಹುಡುಕಿದರೂ ವಿನ್ಯಾಸದಲ್ಲಿ ಒಂದು ಶಾಲು ಇನ್ನೊಂದನ್ನು ಹೋಲುವ ರೀತಿಯಲ್ಲಿ ಇರುವುದಿಲ್ಲ. ಅಂದರೆ ಅಷ್ಟು ಜತನದಿಂದ ಒಂದೊಂದು ಪಶ್ಮಿನಾ ಶಾಲುಗಳನ್ನು ಕೈಯಿಂದಲೇ ವಿನ್ಯಾಸಗೊಳಿಸಲಾಗುತ್ತದೆ.
ಪ್ರವಾಸಿಗಳ ಮುಖ್ಯ ಆಕರ್ಷಣೆ ಎಂದರೆ ಪಾರಂಪರಿಕ ಕಾಶ್ಮೀರಿ ಉಡುಗೆ-ತೊಡುಗೆ. ವಿಶ್ವದ ಎಲ್ಲೆಡೆಯಿಂದ ಪ್ರವಾಸಕ್ಕೆ ಬರುವ ಪ್ರವಾಸಿಗಳು ಕಾಶ್ಮೀರಿ ಸಾಂಪ್ರದಾಯಕ ಉಡುಗೆ, ಆಭರಣ ತೊಟ್ಟು ಸಂಭ್ರಮಿಸುವುದಲ್ಲದೆ, ತಮ್ಮೊಂದಿಗೆ ನೆನಪಿನಿಂದ ಕಾಶ್ಮೀರಿ ಶಾಲ್‌ಗಳನ್ನು ಒಯ್ಯುತ್ತಾರೆ.
-ಅನುರಾಧಾ ಕಾಮತ್