Advertisement

ತಮಿಳುನಾಡು ವಿಧಾನಸಭೆಯಲ್ಲಿ ಸ್ಪೀಕರ್ ಅಧಿಕಾರ ತೋರಿಸಿದ್ದ ಮಾಜಿ ಸ್ಪೀಕರ್ ಪಾಂಡಿಯನ್ ವಿಧಿವಶ

11:01 AM Jan 05, 2020 | Team Udayavani |

ಚೆನ್ನೈ:ಸ್ಪೀಕರ್ ಅಂದ್ರೆ ರಬ್ಬರ್ ಸ್ಟ್ಯಾಂಪ್ ಅಲ್ಲ. ಆಕಾಶದೆತ್ತರ ಅಧಿಕಾರ ಇದೆ ಎಂದು ಹೇಳಿ ತೋರಿಸಿಕೊಟ್ಟಿದ್ದ ತಮಿಳುನಾಡು ವಿಧಾನಸಭೆಯ ಮಾಜಿ ಸ್ಪೀಕರ್, ಆಡಳಿತಾರೂಢ ಎಐಎಡಿಎಂಕೆ ಹಿರಿಯ ಮುಖಂಡ ಪಿಎಚ್ ಪಾಂಡಿಯನ್(74ವರ್ಷ) ಶನಿವಾರ ಚೆನ್ನೈನಲ್ಲಿ ನಿಧನರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

Advertisement

ಪಾಂಡಿಯನ್ ಹೃದಯಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು, ವೆಲ್ಲೂರಿನ ಕ್ರಿಶ್ಚಿಯನ್ ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ವಿಧಿವಶರಾಗಿದ್ದಾರೆ ಎಂದು ಪಾಂಡಿಯನ್ ನಿಕಟವರ್ತಿ ತಿಳಿಸಿರುವುದಾಗಿ ವರದಿ ಹೇಳಿದೆ.

ಎಐಎಡಿಎಂಕೆಯ ಸ್ಥಾಪಕ ಸದಸ್ಯರಲ್ಲಿ ಒಬ್ಬರಾಗಿದ್ದ ಪಾಂಡಿಯನ್, ಡಿಎಂಕೆ ತೊರೆದ ನಂತರ ಎಂಜಿಆರ್ ಜತೆ ಎಐಎಡಿಎಂಕೆ ಸ್ಥಾಪಿಸುವಲ್ಲಿ ಮುಂಚೂಣಿಯಲ್ಲಿದ್ದರು. ಪಾಂಡಿಯನ್ ನಾಲ್ಕು ಬಾರಿ ಶಾಸಕರಾಗಿದ್ದರು. ಎಂಜಿಆರ್ ಕಾಲಾವಧಿಯಲ್ಲಿ (1985-89) ಸ್ಪೀಕರ್ ಆಗಿ ಕಾರ್ಯನಿರ್ವಹಿಸಿದ್ದರು. 1999ರಲ್ಲಿ ತಿರುನೆಲ್ವೇಲಿ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿದ್ದರು.

ಸಂಪಾದಕರಿಗೆ ಜೈಲುಶಿಕ್ಷೆ ವಿಧಿಸಿದ್ದ ಸ್ಪೀಕರ್!

ಸ್ಪೀಕರ್ ಗೆ ಬಾನೆತ್ತರದ ಅಧಿಕಾರವಿದೆ ಎಂದು ಪಾಂಡಿಯನ್ ಹೇಳುತ್ತಿದ್ದರು. ತಮ್ಮ ಅಧಿಕಾರವನ್ನು ಚಲಾಯಿಸಿದ್ದರು ಕೂಡಾ. ತಮಿಳು ವಾರ ಪತ್ರಿಕೆ ವಿಕಟನ್ ನಲ್ಲಿ ಎಂಜಿಆರ್ ಅವರನ್ನು ಟೀಕಿಸುವ ವ್ಯಂಗ್ಯಚಿತ್ರವನ್ನು ಪ್ರಕಟಿಸಿತ್ತು. ಸ್ಪೀಕರ್ ಪಾಂಡಿಯನ್ ಅವರು ಪತ್ರಿಕಾ ಸಂಪಾದಕರಿಗೆ ನೋಟಿಸ್ ಜಾರಿ ಮಾಡಿದ್ದರು.

Advertisement

ಸಂಪಾದಕ ಬಾಲಸುಬ್ರಮಣಿಯನ್ ಅವರು ಸ್ಪೀಕರ್ ಅವರನ್ನು ಭೇಟಿಯಾಗುವ ಮೊದಲೇ ಕ್ಷಮೆಯಾಚಿಸುವಂತೆ ಬೇಡಿಕೆ ಇಟ್ಟಿದ್ದರು. ಆದರೆ ಬಾಲಸುಬ್ರಮಣಿಯನ್ ಅದನ್ನು ನಿರಾಕರಿಸಿದ್ದರು. ನಂತರ ಸ್ಪೀಕರ್ ಪಾಂಡಿಯನ್ ಅವರು ಸಂಪಾದಕ ಬಾಲಸುಬ್ರಮಣಿಯನ್ ಗೆ ಮೂರು ತಿಂಗಳ ಜೈಲು ಶಿಕ್ಷೆ ನೀಡಿ ಆದೇಶ ನೀಡಿದ್ದರು. ಈ ಘಟನೆ 80ರ ದಶಕದಲ್ಲಿ ಮಾಧ್ಯಮಗಳಲ್ಲಿ ಹೆಡ್ ಲೈನ್ ಆಗಿತ್ತು ಎಂದು ವರದಿ ವಿವರಿಸಿದೆ.

ಈ ವಿಷಯ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿತ್ತು. ಸ್ಪೀಕರ್ ಆಗಿ ನೋಟಿಸ್ ಜಾರಿ ಮಾಡಿದ್ದೇನೆ. ಆದರೆ ನೋಟಿಸ್ ಸ್ವೀಕರಿಸಲು ನಿರಾಕರಿಸಿದ್ದು, ಸ್ಪೀಕರ್ ಆದವರಿಗೆ ಆಕಾಶದೆತ್ತರ ಅಧಿಕಾರವಿದೆ ಎಂದು ವಾದಿಸಿದ್ದರು.

ಎಂಜಿಆರ್ ನಿಧನದ ನಂತರ ಪಾಂಡಿಯನ್ ಎಂಜಿಆರ್ ಪತ್ನಿ ಜಾನಕಿ ರಾಮಚಂದ್ರನ್ ಅವರ ಬೆಂಬಲಕ್ಕೆ ನಿಂತಿದ್ದರು. ಆದರೆ ನಂತರ ಎಐಎಡಿಎಂಕೆ ಜೆ.ಜಯಲಲಿತಾ ಅವರ ಹಿಡಿತಕ್ಕೆ ಹೋದ ಮೇಲೆ ತಮ್ಮ ನಿಷ್ಠೆಯನ್ನು ಜಯಲಲಿತಾರತ್ತ ಬದಲಾಯಿಸಿಕೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next