Advertisement

ಮಂಗಳೂರು ವಿ.ವಿ. : ತಿಂಗಳೊಳಗೆ ಪಿಜಿ ಫಲಿತಾಂಶ : ಮುಂದಿನ ವರ್ಷದಿಂದ ಡಿಜಿಟಲ್‌ ಮೌಲ್ಯಮಾಪನ

12:55 AM Jan 07, 2022 | Team Udayavani |

ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಪದವಿ ಪರೀಕ್ಷೆಗಳ ಫ‌ಲಿತಾಂಶವನ್ನು ಮುಂದಿನ ಒಂದು ತಿಂಗಳೊಳಗೆ ಪ್ರಕಟಿಸಲು ಎಲ್ಲ ಕ್ರಮ ಕೈಗೊಳ್ಳಲಾಗುವುದು ಎಂದು ಮಂಗಳೂರು ವಿ.ವಿ. ಕುಲಪತಿ ಪ್ರೊ|ಪಿ. ಎಸ್‌.ಯಡಪಡಿತ್ತಾಯ ತಿಳಿಸಿದ್ದಾರೆ.

Advertisement

ಮಂಗಳೂರಿನಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂದಿನ ವರ್ಷದಿಂದ ಡಿಜಿಟಲ್‌ ಮೌಲ್ಯಮಾಪನಕ್ಕೆ ಸಿದ್ಧತೆ ನಡೆಸಲಾಗಿದೆ. ಈ ಬಗ್ಗೆ ಇ – ಟೆಂಡರ್‌ ಪ್ರಕ್ರಿಯೆ ನಡೆದಿದೆ. ಸಿಂಡಿಕೇಟ್‌ ಅನುಮತಿ ಪಡೆದು ಶೀಘ್ರವೇ ಕ್ರಮ ವಹಿಸಲಾಗುವುದು.

ವಿ.ವಿ. (ಪರೀಕ್ಷಾಂಗ) ಕುಲಸಚಿವ ಪ್ರೊ| ಪಿ. ಎಲ್‌. ಧರ್ಮ ಅವರು ಮಾತನಾಡಿ, ಕೊರೊನಾ ಒತ್ತಡ ಹಾಗೂ ಬಂದ್‌ ಸೇರಿದಂತೆ ಹಲವು ಕಾರಣದಿಂದ ಪರೀಕ್ಷೆ ನಡೆಸಲು ಬಹಳಷ್ಟು ಸವಾಲುಗಳನ್ನು ಎದುರಿಸಬೇಕಾಯಿತು. ಕೆಲವೊಂದು ಕಾಲೇಜುಗಳಲ್ಲಿ ಇಂಟರ್‌ನಲ್‌ ಪೇಪರ್‌ ಕೋಡ್‌ ಲಿಂಕ್‌ ಮಾಡುವಾಗ ಆಗಿರುವ ಸಮಸ್ಯೆಯಿಂದ ತೊಂದರೆ ಹಾಗೂ ಫಲಿತಾಂಶ ವಿಳಂಬ ಆಗಿತ್ತು. ಈ ಕುರಿತು ಸಮಸ್ಯೆ ಆಗಿರುವ 38 ಕಾಲೇಜುಗಳ ಪ್ರಾಂಶುಪಾಲರಿಂದ ದಾಖಲೆ ಪಡೆದು ಸಮಸ್ಯೆ ಬಗೆಹರಿಸಲು ಪ್ರಯತ್ನಿಸಲಾಗಿದೆ ಎಂದರು.

2015ರಿಂದ 2020ರ ವರೆಗೆ ಹೊರಗುತ್ತಿಗೆಯಡಿ ಸಾಫ್ಟ್ವೇರ್‌ ಮೂಲಕ ಪರೀಕ್ಷಾ ಫ‌ಲಿತಾಂಶವನ್ನು ಒದಗಿಸಲಾಗುತ್ತಿತ್ತು. ಕಳೆದ ವರ್ಷದಿಂದ ನಾವೇ ಹೊಸ ಸಾಫ್ಟ್ವೇರ್‌ ಅಭಿವೃದ್ಧಿಪಡಿಸಿದ್ದೇವೆ. ಹೊಸತಾಗಿರುವ ಕಾರಣ ಕೆಲವೊಂದು ಸಮಸ್ಯೆಗಳು ಕಾಣಿಸಿಕೊಂಡಿವೆ ಎಂದು ಅವರು ಹೇಳಿದರು.

ಮಂಗಳೂರು ವಿ.ವಿ. ವ್ಯಾಪ್ತಿಯ ಕಾಲೇಜುಗಳ ಪರೀಕ್ಷೆಗಳಿಗೆ ಸಂಬಂಧಿಸಿ ಪ್ರತ್ಯೇಕ ವೆಬ್‌ಸೈಟ್‌ ಮಾಡಲು ಸಿಂಡಿಕೇಟ್‌ನಿಂದ ಅನುಮತಿ ದೊರಕಿದೆ. 2022ರ ಮಾರ್ಚ್‌ನಲ್ಲಿ ಸರಕಾರ ತಿಳಿಸಿದ ಯುಯುಸಿಎಂಎಸ್‌ ತಂತ್ರಾಂಶದ ಮೂಲಕವೇ ಪರೀಕ್ಷೆ ನಡೆಸಲಾಗುವುದು ಎಂದವರು ಹೇಳಿದರು.

Advertisement

“ಮಂಗಳೂರು ವಿ.ವಿ.ಯ ಎಸ್‌ಸಿ/ಎಸ್‌ಟಿ ವಿದ್ಯಾರ್ಥಿಗಳ ಲ್ಯಾಪ್‌ಟಾಪ್‌ ಖರೀದಿಯಲ್ಲಿ ಹಗರಣ ನಡೆದಿದೆ ಎಂಬುದು ಸುಳ್ಳು ಆರೋಪ. ಈ ಹಿಂದೆ ನೀಡಿದ ಲ್ಯಾಪ್‌ಟಾಪ್‌ನಲ್ಲಿ ವಿದ್ಯಾರ್ಥಿಗಳಿಗೆ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿತ್ತು. ಇಂತಹ ಸಮಸ್ಯೆ ಬರಬಾರದು ಎಂಬ ಕಾರಣಕ್ಕಾಗಿಯೇ ನಿಯಮಾವಳಿಯಂತೆ ಉತ್ತಮ ಗುಣಮಟ್ಟದ ಲ್ಯಾಪ್‌ಟಾಪ್‌ ಅನ್ನು ಈ ಬಾರಿ ಖರೀದಿಸಲಾಗಿದೆ’ ಎಂದು ಕುಲಸಚಿವ ಪ್ರೊ| ಕಿಶೋರ್‌ ಕುಮಾರ್‌ ಸಿ.ಕೆ. ತಿಳಿಸಿದರು. ಹಣಕಾಸು ಅಧಿಕಾರಿ ಪ್ರೊ| ನಾರಾಯಣ ಉಪಸ್ಥಿತರಿದ್ದರು.

ಸ್ಕಾರ್ಫ್ – ಕೇಸರಿ ಶಾಲು ವಿವಾದ; ಸಮಿತಿ ರಚಿಸಿ ಸೂಕ್ತ ನಿರ್ದೇಶನ
ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಪ್ರೊ| ಪಿ.ಎಸ್‌. ಯಡಪಡಿತ್ತಾಯ ಅವರು, ಜಿಲ್ಲೆಯ ಕೆಲವು ಕಾಲೇಜುಗಳಲ್ಲಿ ಎದ್ದಿರುವ ಸ್ಕಾರ್ಫ್ ಹಾಗೂ ಕೇಸರಿ ಶಾಲು ವಿವಾದವನ್ನು ಸಂಬಂಧಪಟ್ಟ ಕಾಲೇಜು ಆಡಳಿತ ಮಂಡಳಿಯೇ ಇತ್ಯರ್ಥ ಪಡಿಸಬೇಕು. ಇಂತಹ ಭಾವನಾತ್ಮಕ ವಿಚಾರಗಳಿಂದ ಕಾಲೇಜುಗಳಲ್ಲಿ ಕಲಿಕಾ ವಾತಾವರಣ ಕೆಡದಂತೆ ವಿ.ವಿ. ಮಟ್ಟದಲ್ಲಿ ಸಮಿತಿಯೊಂದನ್ನು ರಚಿಸಲಾಗುವುದು. ಈ ಸಮಿತಿಯ ಸಲಹೆ ಸೂಚನೆಗಳನ್ನು ಆಧರಿಸಿ ಕೆಲವೊಂದು ಮಾರ್ಗಸೂಚಿ ರಚಿಸಿ ಅದನ್ನು ಸಿಂಡಿಕೇಟ್‌ ಸಭೆಯ ಒಪ್ಪಿಗೆ ಪಡೆದು ಎಲ್ಲ ಕಾಲೇಜುಗಳಿಗೆ ಕಳುಹಿಸಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next