ಬೆಂಗಳೂರು: 2023ನೇ ಸಾಲಿನ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯ (ನೀಟ್) ವೈದ್ಯಕೀಯ ಹಾಗೂ ದಂತವೈದ್ಯಕೀಯ ಪಿ.ಜಿ. ಕೌನ್ಸೆಲಿಂಗ್ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಅರ್ಹತಾ ಅಂಕವನ್ನು ಶೂನ್ಯಕ್ಕೆ ಇಳಿಸಿರುವುದನ್ನು ಆಕ್ಷೇಪಿಸಿ ಸಲ್ಲಿಸಲಾದ ಅರ್ಜಿ ಸಂಬಂಧ ಹೈಕೋರ್ಟ್ ಕೇಂದ್ರ ಸರಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ.
ಈ ವಿಚಾರವಾಗಿ ಹುಬ್ಬಳ್ಳಿ ಮೂಲದ ವೈದ್ಯ ಹಾಗೂ ವಕೀಲ ಡಾ| ವಿನೋದ್ ಜಿ. ಕುಲಕರ್ಣಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ. ವರಾಲೆ ಹಾಗೂ ನ್ಯಾ| ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗೀಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.
ಅರ್ಜಿದಾರರ ವಾದ ಆಲಿಸಿದ ನ್ಯಾಯಪೀಠ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಕೇಂದ್ರದ ಮೆಡಿಕಲ್ ಕೌನ್ಸೆಲಿಂಗ್ ಕಮಿಟಿ (ಎಂಸಿಸಿ) ಸೇರಿದಂತೆ ಇತರ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆ ಮುಂದೂಡಿತು.
ಕಳೆದ 10 ವರ್ಷಗಳಿಂದ ನೀಟ್-ಪಿಜಿ ಕಟ್ ಆಫ್ ಅಂಕಗಳು ಶೇ.50ರಷ್ಟಿತ್ತು. ಆದರೆ, 2023ನೇ ಸಾಲಿನ ನೀಟ್-ಪಿಜಿ ಕೌನ್ಸೆಲಿಂಗ್‌ಗೆ ಹಾಜರಾಗಲು ಕಟ್ ಆಫ್ ಅಂಕಗಳನ್ನು ಶೂನ್ಯಕ್ಕೆ ಇಳಿಸಿ ಎಂಸಿಸಿ 2023ರ ಸೆ.20ರಂದು ಅಧಿಸೂಚನೆ ಹೊರಡಿಸಿದೆ. ಇದರಿಂದ ನೀಟ್ ಪಿಜಿಗೆ ಹಾಜರಾದ ಪ್ರತಿಯೊಬ್ಬ ಅಭ್ಯರ್ಥಿ ತನ್ನಿಷ್ಟದ ಪಿಜಿ ಸೀಟ್ ಪಡೆದುಕೊಳ್ಳಬಹುದು. ಹೀಗಾದರೆ ದೇಶವು ಮುಂದೆ ವೈದ್ಯರನ್ನು ಉತ್ಪಾದಿಸುವ ದಾಸ್ತಾನು ಮಳಿಗೆ ಅಥವಾ ಉಗ್ರಾಣ ಆಗಲಿದೆ. ಪಿಜಿ ಪ್ರವೇಶಕ್ಕೆ ಮೆರಿಟ್ ಮಾತ್ರ ಮಾನದಂಡವಾಗಬೇಕು ಎಂದು ಸುಪ್ರೀಂಕೋರ್ಟ್ ಹಲವು ಬಾರಿ ಹೇಳಿದೆ. ಕೌನ್ಸೆಲಿಂಗ್ ಕಟ್ ಆಫ್ ಶೂನ್ಯಕ್ಕೆ ಇಳಿಸುವುದರಿಂದ ಖಾಸಗಿ ಮೆಡಿಕಲ್ ಕಾಲೇಜುಗಳ ಲಾಬಿ ಇನ್ನಷ್ಟು ಅವಕಾಶ ಮಾಡಿಕೊಟ್ಟಂತಾಗುತ್ತದೆ ಎಂದು ಅರ್ಜಿಯಲ್ಲಿ ದೂರಲಾಗಿದೆ.