ಹೊಸದಿಲ್ಲಿ: ಫೈಜರ್ ಲಸಿಕೆಯು ಸುರಕ್ಷಿತವಾಗಿದ್ದು, 12-15 ವರ್ಷದ ಮಕ್ಕಳ ಮೇಲೂ ಪರಿಣಾಮಕಾರಿ ಎಂದು ಬಯೋನ್‌ಟೆಕ್ – ಫೈಜರ್ ಕಂಪೆನಿ ಬುಧವಾರ ಘೋಷಿಸಿವೆ. ಈ ಮೂಲಕ ಮಕ್ಕಳ ಮೇಲೆ ಶೇ.100ರಷ್ಟು ಪರಿಣಾಮಕತ್ವ ಹೊಂದಿರುವ ಜಗತ್ತಿನ ಮೊದಲ ಲಸಿಕೆ ಎಂಬ ಹೆಗ್ಗಳಿಕೆಗೆ ಫೈಜರ್ ಪಾತ್ರವಾಗಿದೆ.
3ನೇ ಹಂತದಲ್ಲಿ ಅಮೆರಿಕದ 2260 ಮಕ್ಕಳ ಮೇಲೆ ಇದನ್ನು ಪ್ರಯೋಗಿಸಲಾಗಿದೆ. ಸದ್ಯದಲ್ಲೇ ಹಲವು ದೇಶಗಳಲ್ಲಿ ಮಕ್ಕಳಿಗೂ ಲಸಿಕೆ ನೀಡುವ ಪ್ರಕ್ರಿಯೆ ಆರಂಭವಾಗಲಿದೆ. ಪ್ರಸ್ತುತ 16 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮಾತ್ರವೇ ಫೈಜರ್ ಲಸಿಕೆ ನೀಡಲಾಗುತ್ತಿದೆ.
ಪ್ರಾಣಿಗಳಿಗೂ ಲಸಿಕೆ: ಇದೇ ಮೊದಲ ಬಾರಿಗೆ ಪ್ರಾಣಿಗಳಿಗೂ ಕೋವಿಡ್ ಲಸಿಕೆಯನ್ನು ರಷ್ಯಾ ಅಭಿವೃದ್ಧಿಪಡಿಸಿದೆ. ಕಾರ್ನಿವ್ಯಾಕ್-ಕೋವ್ ಎಂಬ ಹೆಸರಿನ ಈ ಲಸಿಕೆಯನ್ನು ನಾಯಿ, ಬೆಕ್ಕು, ನರಿ ಮತ್ತಿತರ ಪ್ರಾಣಿಗಳ ಮೇಲೆ ಪ್ರಯೋಗಿಸಲಾಗಿದ್ದು, ಫಲಪ್ರದ ಕಂಡಿದೆ.
24 ಗಂಟೆಗಳಲ್ಲಿ 354 ಸಾವು: ಮಂಗಳವಾರದಿಂದ ಬುಧವಾರಕ್ಕೆ 24 ಗಂಟೆಗಳಲ್ಲಿ ದೇಶದ್ಯಂತ 53,480 ಮಂದಿಗೆ ಸೋಂಕು ದೃಢಪಟ್ಟು, 354 ಮಂದಿ ಸಾವಿಗೀಡಾಗಿದ್ದಾರೆ.
ಇಂದಿನಿಂದ ಕುಂಭಮೇಳ ಆರಂಭ: ಕೊರೊನಾ 2ನೇ ಅಲೆಯ ನಡುವೆಯೇ ಹರಿದ್ವಾರ ಮತ್ತು ಅಲಹಾಬಾದ್‌ನಲ್ಲಿ ಗುರು ವಾರದಿಂದ ಕುಂಭಮೇಳ ಆರಂಭವಾಗಲಿದ್ದು, ಸೋಂಕು ವ್ಯಾಪಿಸದಂತೆ ಸೂಕ್ತ ಮುನ್ನೆಚ್ಚರಿಕೆ ಕ್ರಮವನ್ನು ಸರಕಾರ ಕೈಗೊಂಡಿದೆ. ಉತ್ತರಾಖಂಡದ ಗಡಿಗಳಲ್ಲಿ ಕೋವಿಡ್ ಪರೀಕ್ಷಾ ಕಿಯೋಸ್ಕ್ ಗಳನ್ನು ರಚಿಸಲಾಗಿದ್ದು, ಕರ್ನಾಟಕ ಸೇರಿದಂತೆ 12 ರಾಜ್ಯಗಳಿಂದ ಆಗಮಿಸುವವರು ಕಡ್ಡಾಯವಾಗಿ ಕೋವಿಡ್ ನೆಗೆಟಿವ್ ಪ್ರಮಾಣಪತ್ರ ತರಬೇಕು ಎಂದು ಸೂಚಿಸಲಾಗಿದೆ.