ಕಲಬುರಗಿ: ಪಾಪುಲರ್ ಫ್ರಂಟ್ ಆಫ್ ಇಂಡಿಯಾ ಸಂಸ್ಥಾಪನಾ ದಿನ ಸಂದರ್ಭದಲ್ಲಿ ಧ್ವಜಾರಾಹೋಣ ಸಿದ್ದತೆಯಲ್ಲಿದ್ದ ಸಂಘಟನೆ ಹತ್ತು ಮುಖಂಡರನ್ನು ಬಂಧಿಸಿ ದೌರ್ಜನ್ಯ ಎಸಗಿದ ಪೊಲೀಸ ಅಧಿಕಾರಿಗಳ ವಿರುದ್ದ ಕ್ರಮಕ್ಕೆ ಆಗ್ರಹಿಸಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಸಾತಗುಂಬಜ್ ಬಳಿ ಮುಸ್ಲಿಂ ಚೌಕ್‌ನಲ್ಲಿ ಪ್ರತಿಭಟನೆ ನಡೆಸಿದರು.
ಪಾಪುಲರ್ ಫ್ರಂಟ್ ಆಫ್ ಇಂಡಿಯಾದ ಮುಖಂಡ ಮೊಹ್ಮದ್ ಮೊಹಸೀನ್ ಹಾಗೂ ಇತರ ಕಾರ್ಯಕರ್ತರು ಹಾಗೂ ಮುಸ್ಲಿಂ ಯುವಕರನ್ನು ಕಾನೂನು ಬಾಹಿರವಾಗಿ ಬಂಧಿಸಿ, ಹಲ್ಲೆ ನಡೆಸಲಾಗಿದೆ. ಕೂಡಲೇ ಬಂಧಿತರನ್ನು ಬೇಷರತ್ತಾಗಿ ಬಿಡುಗಡೆ ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಘಟನೆಗೆ ಕಾರಣರಾದ ಐಜಿಪಿ ಅಲೋಕಕುಮಾರ, ಎಸ್‌ಪಿ ಎನ್. ಶಶಿಕುಮಾರ, ವಿಶ್ವವಿದ್ಯಾಲಯ ಠಾಣೆ ಪಿಎಸ್‌ಐ ರಾಘವೇಂದ್ರ ಅವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು. ವಿವಿ ಠಾಣೆ ಪಿಎಸ್‌ಐ ವಿರುದ್ಧ ಕಾನೂನುಬಾಹಿರ ಬಂಧನ ಹಾಗೂ ಹಲ್ಲೆಗೆ ಸಂಬಂಧಪಟ್ಟಂತೆ ಪ್ರಕರಣ ದಾಖಲಿಸಬೇಕು.
ಪಾರದರ್ಶಕ ತನಿಖೆಗಾಗಿ ಕೂಡಲೇ ಕಳಂಕಿತ ಪೊಲೀಸ್ ಅಧಿಕಾರಿಗಳನ್ನು ಸೇವೆಯಿಂದ ಅಮಾನತುಗೊಳಿಸಬೇಕು. ಇಲ್ಲವಾದರೇ ರಾಜ್ಯವ್ಯಾಪಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು. ಪ್ರತಿಭಟನೆ ಹಿನ್ನೆಲೆಯಲ್ಲಿ ಪೊಲೀಸರು ವ್ಯಾಪಕ ಬಂದೋಬಸ್ತ್ ಕಲ್ಪಿಸಿದ್ದರು.
ಪ್ರತಿಭಟನೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರಾದ ಶೇಖ್ ಏಜಾಜ್ ಅಲಿ, ನ್ಯಾಯವಾದಿ ನಾಗೇಂದ್ರ ಜವಳಿ, ನಾಸೀರ್ ಹುಸೇನ್ ಉಸ್ತಾದ್, ಮಜಹರ್ ಹುಸೇನ್, ಅಬ್ದುಲ್ ರಹೀಮ್ ಪಟೇಲ್, ಸೈಯ್ಯದ್ ಜಾಕೀರ್, ವಾಹಜ್‌ಬಾಬಾ, ಶಾಹೀದ್ ನಸೀರ್, ಸೈಯ್ಯದ್ ಅಲೀಮ್ ಇಲಾಹಿ, ಅನಿಲ ಟೆಂಗಳಿ, ಭೀಮನಗೌಡ,
ಸೈಯ್ಯದ್ ಹಬೀಬ್ ಸರಮಸ್ತ, ಮಹ್ಮದ್ ಯುಸೂಫ್, ಮಹ್ಮದ ಮೊಬೀನ್, ನ್ಯಾಯವಾದಿ ಖಲೀಮ್, ಮೌಲಾನಾ ಅತೀಕ್ ಉರ್ ರೆಹಮಾನ್, ಅಕಬರ್ ಜೆ.ಡಿ ಸೇರಿದಂತೆ ಭಾಗವಹಿಸಿದ್ದರು. ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಉಜ್ವಲಕುಮಾರ ಘೋಷ ಅವರು, ಎಸ್‌ಪಿ ಶಶಿಕುಮಾರ ಅವರೊಂದಿಗೆ ಭೇಟಿ ನೀಡಿ ಬೇಡಿಕೆಗಳ ಮನವಿ ಸ್ವೀಕರಿಸಿದರು.