ದಾವಣಗೆರೆ: ಮಂಗಳೂರಿನಲ್ಲಿ ಪೊಲೀಸರು ಅಮಾಯಕ ಮುಸ್ಲಿಂ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ಪಾಪುಲರ್ ಫ್ರಂಟ್ ಆಫ್ ಇಂಡಿಯಾ ಕಾರ್ಯಕರ್ತರು ಬುಧವಾರ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಮಂಗಳೂರು ಪೊಲೀಸರ ವಿರುದ್ಧ ಘೋಷಣೆ ಕೂಗಿದರು. ನಂತರ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿ, ತಪ್ಪಿತಸ್ಥ ಪೊಲೀಸರ ವಿರುದ್ಧ ಕ್ರಮ ಜರುಗಿಸುವಂತೆ ಮನವಿ ಮಾಡಿದರು.
ಮಂಗಳೂರಿನ ಅಹ್ಮದ್ ಖುರೇಷ್ ಎಂಬ ಯುವಕನನ್ನು ಪೊಲೀಸರು ಅಕ್ರಮವಾಗಿ ಬಂಧಿಸಿ, ಆತನ ಮೇಲೆ ಮಾರಣಾಂತಿಕ ಹಲ್ಲೆಮಾಡಿದ್ದಾರೆ. ಪ್ರತಿಭಟನೆಯೊಂದರಲ್ಲಿ ಭಾಗಿಯಾಗಿದ್ದ ಖುರೇಷ್‌ನನ್ನು ಮಂಗಳೂರು ಸಿಸಿಬಿ ಪೊಲೀಸರು ಅಕ್ರಮವಾಗಿ ಬಂಧಿಸಿದ್ದರು.
ಸತತ 7 ದಿನಗಳ ಕಾಲ ಆತನನ್ನು ವಿಚಾರಣೆ ನಡೆಸುವ ನೆಪದಲ್ಲಿ ಅಕ್ರಮವಾಗಿ ಬಂಧಿಸಿಟ್ಟಿದ್ದರು. ಈ ವೇಳೆ ಆತನ ಮೇಲೆ ಮಾರಣಾಂತಿಕ ಹಲ್ಲೆ ಮಾಡಲಾಗಿದೆ ಎಂದು ಅವರು ಆರೋಪಿಸಿದರು. ಸಂವಿಧಾನಬದ್ಧವಾಗಿ ನಮಗೆ ಪ್ರತಿಭಟಿಸುವ ಹಕ್ಕಿದೆ. ಅಲ್ಲಿನ ಪೊಲೀಸರು ಹಕ್ಕಯ ಕಸಿಯುವ ಮಾಡಿದ್ದಾರೆ. ಸರ್ಕಾರ ಪೊಲೀಸರ ಈ ವರ್ತನೆಯನ್ನು ಗಂಭೀರವಾಗಿ ಪರಿಗಣಿಸಬೇಕು.
ಅಮಾಯಕರ ಮೇಲೆ ಹಲ್ಲೆ ನಡೆಸಿದ ಪೊಲೀಸರ ವಿರುದ್ಧ ತಕ್ಷಣ ಕ್ರಮ ವಹಿಸಬೇಕು ಎಂದು ಅವರು ಒತ್ತಾಯಿಸಿದರು. ಸಂಘಟನೆಯ ಜಿಲ್ಲಾಧ್ಯಕ್ಷ ಫಯಾಜ್ ಅಹಮದ್, ಇಮಾದುದೀªನ್, ರಜ್ವಿ ಖಾನ್, ಟಿ. ಅಸರ್, ಮಹಾಂತೇಶ್, ಸಾದಿಕ್ ಉಲ್ಲಾ, ಸೈಫುಲ್ಲಾ, ಇಸ್ಮಾಯಿಲ್ ಜಬಿವುಲ್ಲಾ, ಆಸಿಫ್ ಖಾನ್ ಪ್ರತಿಭಟನೆ ನೇತೃತ್ವ ವಹಿಸಿದ್ದರು.