Advertisement
ಕಳೆದ ವಾರ ಸರ್ವೋಚ್ಚ ನ್ಯಾಯಾಲಯ ಇಪಿಎಫ್ ಅಥವಾ ನೌಕರರ ಭವಿಷ್ಯ ನಿಧಿಯ ಬಗ್ಗೆ ಒಂದು ಮಹತ್ವದ ತೀರ್ಪು ನೀಡಿತು. ಇಪಿಎಫ್ ನಿಧಿಗಾಗಿ ಸಂಬಳದ ಶೇ. 12 ಕಡಿತ ಮಾಡುವುದು (ಎರಡೂ ಬದಿಯಿಂದ) ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಸಂಬಳ ಎಂದರೆ ಹಲವು ಭಾಗಗಳಾಗಿ ಬರುತ್ತದಷ್ಟೆ? (ಬೇಸಿಕ್, ಡಿಎ ಅಲೊವೆನ್ಸ್‌ಗಳು ಇತ್ಯಾದಿ). ಹಾಗಾಗಿ ಯಾವ ಭಾಗಗಳ ಮೇಲೆ ಪಿಎಫ್ ಕಡಿತ ಮಾಡಬೇಕು ಎನ್ನುವುದರ ಬಗ್ಗೆ ಹಲವರಲ್ಲಿ ಅಸಮಾಧಾನವಿತ್ತು. ಪಿಎಫ್ ಕಡಿತವನ್ನು ಬೇಸಿಕ್ ಮತ್ತು ಡಿಎಗಳ ಮೇಲೆ ಮಾತ್ರವಷ್ಟೆ ಮಾಡತಕ್ಕದ್ದು ಎಂಬುದಾಗಿ ಕಾನೂನು ಹೇಳುತ್ತದಾದರೂ ಬಾಕಿ ಉಳಿದ ಅಲೋವೆನ್ಸ್ ಕೂಡಾ ಸಂಬಳವೇ; ಅವುಗಳ ಮೇಲೆ ಕೂಡಾ ಪಿಎಫ್ ಕಡಿತ ಮಾಡಬೇಕು ಎನ್ನುವುದು ನೌಕರ ವರ್ಗದಲ್ಲಿ ಹಲವರ ಅಭಿಮತವಾಗಿತ್ತು. ಹಾಗೆ ಮಾಡುವುದರಿಂದ ಸಂಬಳದ ಪರಿಧಿ ಹೆಚ್ಚಳವಾಗಿ ಉದ್ಯೋಗದಾತರ ದೇಣಿಗೆಯಲ್ಲಿಯೂ ಹೆಚ್ಚಳವಾಗುತ್ತದೆ ಎನ್ನುವುದು ಅವರ ವಾದ. ಅದರಲ್ಲಿಯೇ ಒಂದು ಹೆಜ್ಜೆ ಮುಂದುವರಿದು, ಪಿಎಫ್ ದೇಣಿಗೆಯನ್ನು ಕಡಿಮೆ ಮಾಡುವುದಕ್ಕಾಗಿಯೇ ಸಂಬಳವನ್ನು ಕೃತಕವಾಗಿ ಬೇರೆ ಬೇರೆ ಚಿತ್ರ ವಿಚಿತ್ರ ಹೆಸರುಗಳ ಅಲೋವೆನ್ಸ್‌ಗಳಾಗಿ ಪ್ರತ್ಯೇಕಿಸುತ್ತಾರೆ ಎನ್ನುವುದು ಕೂಡಾ ಅವರ ಆರೋಪವಾಗಿತ್ತು. ಈ ವಿಚಾರದಲ್ಲಿ ಸರಕಾರ ಕೆಲ ವರ್ಷಗಳ ಹಿಂದೆ ಪಿಎಫ್ ಎಲ್ಲಾ ಅಲೋವೆನ್ಸ್‌ಗಳ ಮೇಲೆ ಕಡಿತಗೊಳಿಸತಕ್ಕದ್ದು ಎನ್ನುವ ಕಾನೂನು ಮಾಡಲು ಮುಂದುವರಿದಾಗ ಚರ್ಚೆ ಕೋರ್ಟ್ ಮೆಟ್ಟಲೇರಿತ್ತು. ಪಶ್ಚಿಮ ಬಂಗಾಳದ ಪಿ.ಎಫ್ ಕಮಿಶನರ್ ವಿರುದ್ಧ ವಿವೇಕಾನಂದ ವಿದ್ಯಾ ಮಂದಿರ್ ಮತ್ತಿತರರು ಹಾಕಿದ ಕೇಸಿನ ಮೇಲೆ ಇದೀಗ ಬಂದ ತೀರ್ಪಿನ ಪ್ರಕಾರ ಪಿಎಫ್ ಕಡಿತವನ್ನು ಈ ಹತ್ತು ಹಲವು ಅಲೋವೆನ್ಸ್‌ಗಳ ಮೇಲೆಯೂ ಮಾಡತಕ್ಕದ್ದು.
ಈ ಹತ್ತು ಹಲವು ಅಲೋವೆನ್ಸ್‌ಗಳು ಯಾವುವು ಮತ್ತು ಕೋರ್ಟ್ ಈ ಅಲೋವೆನ್ಸ್‌ಗಳ ಬಗ್ಗೆ ಏನು ಹೇಳಿದೆ? ಕೋರ್ಟ್ ಈ ಬಾರಿ ಅಲೋವೆನ್ಸ್‌ಗಳ ಬಗ್ಗೆ ಯುನಿವರ್ಸಾಲಿಟಿ ತತ್ವ ವನ್ನು ಪಾಲಿಸಿದೆ. ಅಂದರೆ ಯಾವ ಅಲೋವೆನ್ಸ್ ಶ್ರಮ ಮತ್ತು ಫಲವನ್ನು ಆಧರಿಸದೆ ಸಾರ್ವತ್ರಿಕವಾಗಿ ಎಲ್ಲಾ ನೌಕರರಿಗೆ ಸಮಾನವಾಗಿ ಸಲ್ಲುತ್ತದೆಯೋ ಆ ಅಲೋವೆನ್ಸ್ ಸಂಬಳದ ಒಂದು ಭಾಗವೇ ಆಗಿದ್ದು ಅದರ ಮೇಲೆ ಪಿಎಫ್ ಕಡಿತ ಮಾಡತಕ್ಕದ್ದು ಎಂದು ತೀರ್ಪು ನೀಡಿದೆ. ಯಾವ ಅಲೋವೆನ್ಸ್ ಒಬ್ಟಾತನ ಶ್ರಮದ ಆಧಾರದ ಮೇಲೆಯೋ ಅಥವಾ ಆತ ಉತ್ಪಾದಿಸುವ ಫಲದ ಆಧಾರದ ಮೇಲೆ ನೀಡಲಾಗುತ್ತದೆಯೋ ಆ ಅಲೋವೆನ್ಸ್‌ಗಳು ವೈಯಕ್ತಿಕ ಮತ್ತು ಅವುಗಳ ಮೇಲೆ ಪಿಎಫ್ ಕಡಿತ ಮಾಡಬೇಕಾದದ್ದಿಲ್ಲ. ಈ ತತ್ವದ ಪ್ರಕಾರ ಓವರ್‌ಟೈಮ…, ಪರ್ಫಾಮೆನ್ಸ್ ಮೇಲಿನ ಬೋನಸ್, ಕಮಿಶನ್ ಇತ್ಯಾದಿ ಶ್ರಮ ಮತ್ತು ಫಲ ಆಧಾರಿತ ಅಲೋವನ್ಸ್‌ಗಳ ಮೇಲೆ ಪಿಎಫ್ ಕಡಿತ ಮಾಡಬೇಕಾದ್ದಿಲ್ಲ. ಆದರೆ ಕನ್ವೇಯನ್ಸ್, ಕ್ಯಾಂಟೀನ್ ಅಲೋವೆನ್ಸ್, ಫುಡ್ ಅಲೋವೆನ್ಸ್, ಮೆಡಿಕಲ್ ಅಲೋವೆನ್ಸ್, ಸ್ಪೆಶಲ್ ಅಲೋವೆನ್ಸ್ ಇತ್ಯಾದಿಗಳ ಮೇಲೆ ಪಿಎಫ್ ಕಡಿತ ಮಾಡತಕ್ಕದ್ದು. ಪಿಎಫ್ ಕಾಯ್ದೆಯ ಸೆಕ್ಷನ್ 2ಬಿ ನಿಯಮವು ಹೌಸ್ ರೆಂಟ್ ಅಲೋವನ್ಸ್ ಅನ್ನು ಪಿಎಫ್ ಕಡಿತಕ್ಕೆ ಒಳಗಾಗಿಬಾರದು ಎಂದು ಸ್ಪಷ್ಟವಾಗಿ ನಮೂದಿಸಿರುವ ಕಾರಣ ಈ ಕೋರ್ಟ್ ತೀರ್ಪು ಆ ಅಂಶದ ಮೇಲೆ ಅನ್ವಯಿಸುವುದಿಲ್ಲ. ಅಂದರೆ, ಎಚ್‌ಆರ್‌ಎ ಪಾವತಿಯು ಮೊದಲಿನಂತೆ ಇನ್ನು ಮುಂದೆಯೂ ಪಿಎಫ್ ಕಡಿತಕ್ಕೆ ಒಳಗಾಗುವುದಿಲ್ಲ.
Related Articles
Advertisement
ದೇಣಿಗೆವೇತನದ ಶೇ.12 ಉದ್ಯೋಗಿಯ ಸಂಬಳದಿಂದ ಕಡಿದು ಈ ನಿಧಿಗೆ ಎಕೌಂಟ್ “ಎ’ ಅಡಿಯಲ್ಲಿ ಜಮೆ ಮಾಡಲಾಗುತ್ತದೆ. ಅದಲ್ಲದೆ ಉದ್ಯೋಗದಾತನ ವತಿಯಿಂದಲೂ ಕೂಡಾ ಪ್ರತ್ಯೇಕವಾಗಿ ಇನ್ನೊಂದು ಶೇ. 12 ಕಡಿತಗೊಳಿಸಿ ಎಕೌಂಟ್ “ಬಿ’ ಅಡಿಯಲ್ಲಿ ಉದ್ಯೋಗಿಯ ಪಿಎಫ್ ಖಾತೆಗೆ ಸೇರಿಸಲಾಗುತ್ತದೆ. ಹಾಗಾಗಿ ಒಟ್ಟು ಜಮೆ ಶೇ.24 ಸ್ಥೂಲವಾಗಿ ನಾವು ಶೇ.24 ಎಂದು ಹೇಳುತ್ತೇವಾದರೂ ಅಸಲಿಗೆ ನಮ್ಮ ಪಿಎಫ್ ಖಾತೆಗೆ ಈ ಶೇ.24 ಸಂಪೂರ್ಣವಾಗಿ ಜಮೆಯಾಗುವುದಿಲ್ಲ. ಉದ್ಯೋಗದಾತರ ಶೇ.12ರಲ್ಲಿ ಎರಡು ಭಾಗಗಳಿವೆ. ಮೊದಲನೆಯದಾಗಿ ಸಂಬಳದ ಶೇ.8.33 (ಗರಿಷ್ಠ ಸಂಬಳ ಮಿತಿ ರೂ. 15,000, ಅಂದರೆ ರೂ. 1250) ಪಿಎಫ್ ಅಡಿಯಲ್ಲಿಯೇ ಬರುವ ಒಂದು ಪೆನ್ಶನ್ ಉಪಖಾತೆಗೆ ಹೋಗುತ್ತದೆ. ಎಂಪ್ಲಾಯೀ ಪೆನ್ಶನ್ ಸ್ಕೀಮ್ ಅಥವಾ ಇಪಿಎಸ್ ಎನ್ನುವ ಈ ಸ್ಕೀಮು ನಿವೃತ್ತಿಯ ಬಳಿಕ ಸಿಗುವ ಪೆನ್ಶನ್‌ಗೆ ಮೀಸಲಾಗಿದೆ. ಹಾಗಾಗಿ ಈ ಪೆನ್ಶನ್ ದೇಣಿಗೆಯಾದ ಶೇ.8.33 ಕಳೆದು ಅಥವಾ ಗರಿಷ್ಠ ರೂ. 1250 ಕಳೆದು ಉಳಿದ ಮೊತ್ತ ಮಾತ್ರವೇ ಒಬ್ಟಾತನ ಇಪಿಎಫ್ನಲ್ಲಿ ಜಮೆಯಾಗುತ್ತದೆ. ಪರಿಣಾಮ
ಸರ್ವೋಚ್ಚ ನ್ಯಾಯಲಯದ ಈ ತೀರ್ಪಿನಿಂದ ಉಂಟಾಗುವ ಪರಿಣಾಮ ಏನು ಎನ್ನುವುದು ಮುಂಬರುವ ಸ್ವಾಭಾವಿಕ ಪ್ರಶ್ನೆ. ಸರಿ ಸುಮಾರಾಗಿ ಪ್ರತಿಯೊಬ್ಬ ಉದ್ಯೋಗಿಯ ಪಿಎಫ್ ಕಡಿತಕ್ಕೆ ಅರ್ಹ ಸಂಬಳ ಈ ತೀರ್ಪಿನಿಂದ ಹೆಚ್ಚಾಗುವುದರಲ್ಲಿ ಸಂಶಯವಿಲ್ಲ. ಹಾಗಾಗಿ ಆ ಹೆಚ್ಚಳಗೊಂಡ ಸಂಬಳದ ಅಡಿಪಾಯದ ಮೇಲಿನ ಶೇ.12 ಮತ್ತು ಇನ್ನೊಂದು ಶೇ.12 ಅಂದರೆ ಶೇ.24 ಕಡಿತದ ಮೊತ್ತವೂ ಹೆಚ್ಚಳವಾಗುತ್ತದೆ. ಅಂದರೆ ಪಿಎಫ್ ಖಾತೆಯಲ್ಲಿ ಜಮೆಯಾಗುವ ಮೊತ್ತ ಜಾಸ್ತಿ ಆದರೂ ನೀವು ಮನೆಗೆ ಕೊಂಡೊಯ್ಯುವ ಸಂಬಳ ಕಡಿಮೆಯಾದೀತು. ಈ ಪರಿಸ್ಥಿತಿ ಕೆಲವರಿಗೆ ಇಷ್ಟವಾದರೆ ಇನ್ನು ಕೆಲವರಿಗೆ ನಷ್ಟವೆನಿಸಬಹುದು.
ರೂ. 15,000ದಿಂದ ಕಡಿಮೆ ಪಿಎಫ್ ಅರ್ಹ ಸಂಬಳ ಇರುವ ಕೆಲವರು ಇದೀಗ ರೂ. 15,000 ಮಿತಿಯನ್ನು ಮೀರಿ ಕಡ್ಡಾಯವಾಗಿ ಪಿಎಫ್ ಪಡೆಯುವ ವರ್ಗದಿಂದ ಹೊರಬರಬಹುದು. ಆದರೂ ಇಂತವರಿಗೆ ಕಾನೂನು ಪ್ರಕಾರ ಪಿಎಫ್ ನೀಡಬೇಕಾಗಿ ಇಲ್ಲದಿದ್ದರೂ ಓರ್ವ ಉತ್ತಮ ಕಂಪೆನಿಯ ನೆಲೆಯಲ್ಲಿ ಹಲವು ಉದ್ಯೋಗದಾತರು ಪಿ.ಎಫ್ ಅನ್ನು ಮುಂದುವರಿಸುವರು. ಇನ್ನು ಕೆಲ ಕಂಪೆನಿಯಲ್ಲಿ ಪಿಎಫ್ ಅರ್ಹ ಸಂಬಳವು ರೂ. 15,000 ಮೀರಿದರೂ ಪಿಎಫ್ ಕಡಿತ ರೂ. 15,000 ಸಂಬಳದ ಮಿತಿಗೆ ಮಾತ್ರವೇ ಸೀಮಿತಗೊಳಿಸಿರುತ್ತಾರೆ. ಅಂತಹ ಕಂಪೆನಿಗಳಲ್ಲಿ ಈ ತೀರ್ಪು ಯಾವುದೇ ಬದಲಾವಣೆಯನ್ನು ಉಂಟು ಮಾಡದು. ಅಂಥವರ ಪಿಎಫ್ ಕಡಿತ ಮೊದಲಿನಂತೆಯೇ ಮಾಸಿಕ ರೂ. 1,800ರಲ್ಲಿಯೇ ಮುಂದುವರಿಯಲಿದೆ.