ಚೀನ ಮತ್ತು ಪಾಕಿಸ್ಥಾನ ಜಂಟಿಯಾಗಿ ಭಾರತ ವಿರೋಧಿ ನಿಲುವನ್ನು ಮುಂದುವರಿಸಿದ್ದು ಉಭಯ ರಾಷ್ಟ್ರಗಳು ಒಂದಲ್ಲ ಒಂದು ವಿಷಯವನ್ನು ಮುಂದಿಟ್ಟು ಭಾರತದ ವಿರುದ್ಧ ಕಾಲು ಕೆರೆದು ಜಗಳ ಕಾಯಲು ಹಾತೊ ರೆಯುತ್ತಿವೆ. 26/11ರ ಮುಂಬಯಿ ದಾಳಿಯಲ್ಲಿ ಭಾಗಿಯಾಗಿದ್ದ ಲಷ್ಕರ್ ಈ ತಯ್ಯಬಾದ ಉಗ್ರ ಸಾಜಿದ್ ಮಿರ್‌ನನ್ನು ಜಾಗತಿಕ ಉಗ್ರ ಎಂದು ಘೋಷಿಸುವ ಸಂಬಂಧ ಭಾರತ ಮತ್ತು ಅಮೆರಿಕ ಜಂಟಿಯಾಗಿ ಮುಂದಿರಿಸಿದ್ದ ಪ್ರಸ್ತಾವನೆಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಖಾಯಂ ಸದಸ್ಯ ರಾಷ್ಟ್ರವಾಗಿರುವ ಚೀನ ಅಡ್ಡಗಾಲು ಇರಿಸುವ ಮೂಲಕ ಭಾರತದ ವಿರುದ್ಧದ ತನ್ನ ಕ್ಯಾತೆ ಮುಂದುವರಿಸಿದೆ.
26/11ರ ಮುಂಬಯಿ ದಾಳಿಯಲ್ಲಿ 166 ಮಂದಿ ಅಮಾಯಕರು ಹತ್ಯೆಗೀಡಾಗಿದ್ದರು. ಈ ದಾಳಿಯ ಪ್ರಮುಖ ರೂವಾರಿಗಳಿಗೆ ಪಾಕಿಸ್ಥಾನ ಆಶ್ರಯ ನೀಡಿರುವ ಸಂಬಂಧ ಭಾರತ, ಸಾಕ್ಷ್ಯಾಧಾರಗಳನ್ನು ನೀಡಿದ್ದರೂ ಅಲ್ಲಿನ ಸರಕಾರ ಮಾತ್ರ ಇದನ್ನು ನಿರಾಕರಿಸುತ್ತಲೇ ಬಂದಿತ್ತು. ಈ ಹಿನ್ನೆಲೆಯಲ್ಲಿ ಭಾರತ, ಅಂತಾರಾಷ್ಟ್ರೀಯ ವೇದಿಕೆಗಳಲ್ಲೆಲ್ಲ ಈ ವಿಷಯ ವನ್ನು ಪ್ರಸ್ತಾವಿಸಿ ಪಾಕಿಸ್ಥಾನದ ಬಣ್ಣ ಬಯಲು ಮಾಡುತ್ತಲೇ ಬಂದಿದೆ.
ಅದರಂತೆ ಮೋಸ್ಟ್ ವಾಂಟೆಡ್ ಉಗ್ರ ಸಾಜಿದ್ ಮಿರ್‌ನ ಕುರಿತಂತೆ ಭಾರತ ಸರಕಾರ ಸಾಕಷ್ಟು ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ 1267 ಅಲ್ ಕಾಯಿದಾ ನಿರ್ಬಂಧಗಳ ಸಮಿತಿಯ ಮುಂದಿಟ್ಟು ಮಿರ್‌ನನ್ನು ಜಾಗತಿಕ ಉಗ್ರ ಎಂದು ಘೋಷಿಸುವಂತೆ ಆಗ್ರಹಿಸಿತ್ತು. ಆರಂಭದಲ್ಲಿಯೇ ಈ ಪ್ರಸ್ತಾವನೆಗೆ ಚೀನ ತನ್ನ ತಕರಾರು ತೆಗೆಯುವ ಮೂಲಕ ತನ್ನ ಪರಮಾಪ್ತ ರಾಷ್ಟ್ರವಾದ ಪಾಕಿಸ್ಥಾನದ ಪರ ನಿಂತಿತ್ತು. ಆದರೆ ಅಮೆರಿಕ ಕೂಡ ಭಾರತದೊಂದಿಗೆ ಕೈಜೋಡಿಸಿ ಭದ್ರತಾ ಮಂಡಳಿಯ ಸಮಿತಿಯ ಮುಂದೆ ಪ್ರಸ್ತಾವನೆ ಇರಿಸಿತ್ತು. ಆದರೆ ಇಲ್ಲೂ ಚೀನ ತನ್ನ ಮೊಂಡಾಟ ಬಿಡದೆ ಪ್ರಸ್ತಾವನೆಗೆ ತಡೆ ಒಡ್ಡಿದೆ.
ಚೀನದ ಈ ಧೋರಣೆಗೆ ಭಾರತ, ಭದ್ರತಾ ಮಂಡಳಿಯ ಸಮಿತಿ ಸಭೆಯಲ್ಲಿಯೇ ಪ್ರಬಲ ಆಕ್ಷೇಪ ವ್ಯಕ್ತಪಡಿಸಿ, ಈ ಬೆಳವಣಿಗೆ ಭಯೋ ತ್ಪಾದನೆಯ ವಿರುದ್ಧ ಜಾಗತಿಕ ಸಮುದಾಯ ನಡೆಸುತ್ತಿರುವ ಸಾಮೂಹಿಕ ಹೋರಾಟಕ್ಕೆ ಬಲುದೊಡ್ಡ ಹಿನ್ನಡೆ ಎಂದು ಅಭಿಪ್ರಾಯಪಟ್ಟಿದೆ. ಕ್ಷುಲ್ಲಕ ಮತ್ತು ಭೌಗೋಳಿಕ ರಾಜಕೀಯ ಹಿತಾಸಕ್ತಿಯ ಕಾರಣಗಳಿಗಾಗಿ ಭಯೋ ತ್ಪಾದಕರನ್ನು ನಿಷೇಧಿಸುವ ಪ್ರಯತ್ನಗಳು ವಿಫಲವಾದದ್ದೇ ಆದಲ್ಲಿ ಭಯೋತ್ಪಾದನೆಯ ಸವಾಲನ್ನು ಪ್ರಾಮಾಣಿಕವಾಗಿ ಎದುರಿಸಲು ವಿಶ್ವ ಸಮುದಾಯಕ್ಕೆ ರಾಜಕೀಯ ಇಚ್ಛಾಶಕ್ತಿ ಇಲ್ಲ ಎಂಬುದು ಸಾಬೀತಾ ದಂತಾಗುತ್ತದೆ ಎಂದು ಕಟು ಶಬ್ದಗಳಲ್ಲಿ ಚೀನದ ಷಡ್ಯಂತ್ರವನ್ನು ಖಂಡಿಸಿದೆ. ಜತೆಗೆ ಉಗ್ರ ತ್ವದ ವಿರುದ್ಧದ ಹೋರಾಟದಲ್ಲಿ ಎಲ್ಲ ರಾಷ್ಟ್ರಗಳು ಕೈಜೋಡಿಸಲೇಬೇಕಾದ ಅನಿವಾರ್ಯತೆಯನ್ನು ಒತ್ತಿ ಹೇಳಿದೆ.
ಚೀನದ ಈ ಧೋರಣೆ ಭಯೋತ್ಪಾದನೆ ಕುರಿತಾಗಿನ ಅದರ ನಿಲುವು ಪ್ರಶ್ನಾರ್ಹವನ್ನಾಗಿಸಿದೆ. ಈ ಹಿಂದೆಯೂ ಭಯೋತ್ಪಾದನೆ ವಿಚಾರದಲ್ಲಿ ದ್ವಂದ್ವ ನಿಲುವು ತಾಳಿದ ರಾಷ್ಟ್ರಗಳು ಕ್ರಮೇಣ ಉಗ್ರರ ಕಪಿಮುಷ್ಟಿಗೆ ಸಿಲುಕಿ ನಲುಗುವಂತಾದ ನಿದರ್ಶನಗಳು ಸಾಕಷ್ಟಿವೆ. ಭಾರತವನ್ನು ವಿರೋಧಿಸುವ ಭರದಲ್ಲಿ ಸಣ್ಣತನ, ರಾಜಕೀಯ ಪ್ರದರ್ಶಿಸುವ ಚೀನದಂಥ ರಾಷ್ಟ್ರಗಳಿಗೆ ಭವಿಷ್ಯದಲ್ಲಿ ಉಗ್ರ ತ್ವ ಮಾರಕವಾಗಲಿರುವುದಂತೂ ಖಚಿತ. ಭಾರತ ಬೆಂಬಲಿತ ಪ್ರಸ್ತಾವನೆಗೆ ತಡೆ ಒಡ್ಡಿದಾಕ್ಷಣ ರಾಜತಾಂತ್ರಿಕವಾಗಿ ಭಾರೀ ಗೆಲುವು ಲಭಿಸಿತು ಎಂದು ಬೀಗಿದಲ್ಲಿ ಮುಂದಿನ ದಿನಗಳಲ್ಲಿ ಅದು ಚೀನಕ್ಕೇ ತಿರುಗುಬಾಣವಾಗಲಿದೆಯೇ ಹೊರತು ಭಾರತಕ್ಕಲ್ಲ.