Advertisement

ಎರಡೂವರೆ ತಿಂಗಳಲ್ಲಿ ಪೆಟ್ರೋಲ್‌ ದರ 6 ರೂ. ಏರಿಕೆ

10:00 AM Aug 28, 2017 | Karthik A |

ಬೆಂಗಳೂರು: ಪೆಟ್ರೋಲ್‌- ಡೀಸೆಲ್‌ ದರ ಪ್ರತಿ ದಿನ ಮುಂಜಾನೆ 6 ಗಂಟೆಗೆ ಪರಿಷ್ಕರಣೆಯಾಗುವ ವ್ಯವಸ್ಥೆ ಜಾರಿಯಾಗಿ ಎರಡೂವರೆ ತಿಂಗಳಲ್ಲಿ ಪೆಟ್ರೋಲ್‌ ದರ ಆರು ರೂ., ಡೀಸೆಲ್‌ ದರ ಸುಮಾರು 3.47 ರೂ. ಏರಿಕೆಯಾಗಿದ್ದು, ಸದ್ದಿಲ್ಲದೆ ಗ್ರಾಹಕರ ಮೇಲೆ ಹೊರೆ ಬೀಳುತ್ತಿದೆ.

Advertisement

ರಾಜ್ಯದಲ್ಲಿ ಪೆಟ್ರೋಲ್‌ ದರ ಸದ್ಯ 70.81 ರೂ. ಹಾಗೂ ಡೀಸೆಲ್‌ ದರ 57.66 ರೂ. ಇದೆ. ದಿಲ್ಲಿಯಲ್ಲಿ ಪೆಟ್ರೋಲ್‌ ದರ 69.04 ರೂ. ಹಾಗೂ ಡೀಸೆಲ್‌ ದರ 57.03ರಷ್ಟಿದ್ದು, ನಾಲ್ಕು ತಿಂಗಳಲ್ಲೇ ಅತೀ ಹೆಚ್ಚು ದರ ಎಂಬುದು ಅಂಕಿಸಂಖ್ಯೆಯಿಂದ ಗೊತ್ತಾಗಿದೆ. ದಿಲ್ಲಿಯಲ್ಲಿ 2014ರ ಆಗಸ್ಟ್‌ ನಲ್ಲಿ ಪೆಟ್ರೋಲ್‌ ದರ 70.33 ರೂ.ಗೆ ಏರಿಕೆಯಾಗಿದ್ದನ್ನು ಹೊರತುಪಡಿಸಿದರೆ ಅನಂತರದ ಅವಧಿಯಲ್ಲಿ ಸದ್ಯ 69.04 ರೂ.ಗೆ ಏರಿಕೆಯಾಗಿದೆ.

ಪ್ರತಿ ತಿಂಗಳ 1 ಹಾಗೂ 16ರಂದು ಎರಡು ಬಾರಿ ದರ ಪರಿಷ್ಕರಣೆಯಾಗುವ ವ್ಯವಸ್ಥೆ 15 ವರ್ಷಗಳಿಂದ ಜಾರಿಯಲ್ಲಿತ್ತು. ಆದರೆ ಕೇಂದ್ರ ಸರಕಾರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ಬೆಲೆಗೆ ಅನುಗುಣವಾಗಿ ಪ್ರತಿನಿತ್ಯ ಪರಿಷ್ಕರಣೆ ಮಾಡುವ ವ್ಯವಸ್ಥೆಯನ್ನು 2017ರ ಜೂ. 16ರಿಂದ ಜಾರಿಗೊಳಿಸಿತು. ಅನಂತರದ ಅವಧಿಯಲ್ಲಿ ಪೆಟ್ರೋಲ್‌ ದರ 6 ರೂ. ಏರಿಕೆಯಾಗಿದೆ. ಹೊಸ ವ್ಯವಸ್ಥೆ ಜಾರಿಯಾದ ಆರಂಭದ 15 ದಿನ ದರ ಅಲ್ಪ ಪ್ರಮಾಣದಲ್ಲಿ ಇಳಿಕೆಯಾಗಿದ್ದು ಹೊರತುಪಡಿಸಿದರೆ ಜು. 3ರಿಂದ ನಿರಂತರವಾಗಿ ಏರಿಕೆಯಾಗಿರುವುದರಿಂದ ಭಾರೀ ಏರಿಕೆ ಕಂಡುಬಂದಿದೆ.

ಹಿಂದೆಲ್ಲ ಒಂದು ಲೀಟರ್‌ ಪೆಟ್ರೋಲ್‌, ಡೀಸೆಲ್‌ ದರ 2 ಅಥವಾ 3 ರೂ. ಏರಿಕೆಯಾದರೆ ಎಲ್ಲರ ಗಮನಕ್ಕೂ ಬಂದು ಆಕ್ಷೇಪ ವ್ಯಕ್ತವಾಗುತ್ತಿತ್ತು. ಆದರೆ ಹೊಸ ವ್ಯವಸ್ಥೆಯಲ್ಲಿ ನಿತ್ಯ 1ರಿಂದ 15 ಪೈಸೆ ಏರಿಕೆಯಾಗುತ್ತಿದ್ದಂತೆ ಕ್ರಮೇಣ ಬೆಲೆ ಹೆಚ್ಚಳವಾದರೂ ಬಹುತೇಕ ಮಂದಿಯ ಗಮನಕ್ಕೆ ಬರುವುದಿಲ್ಲ ಎಂದು ತೈಲ ಕಂಪೆನಿಯೊಂದರ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇನ್ನೊಂದೆಡೆ ಹೆಚ್ಚಿನವರು 50, 100, 200 ರೂ. ಮೌಲ್ಯದ ಇಂಧನವನ್ನು ವಾಹನಗಳಿಗೆ ತುಂಬಿಸುತ್ತಿರುವುದರಿಂದ ಲೀಟರ್‌ನ ದರ ಏರಿಕೆಯು ಅರಿವಿಗೆ ಬರುವುದಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next