Advertisement

ಪೆಟ್ರೋಲ್‌ ಬೆಲೆ 3 ಪೈಸೆ ಇಳಿಕೆ : ಜನರ ವ್ಯಾಪಕ ಟೀಕೆ

10:53 AM May 31, 2018 | Team Udayavani |

ಮಂಗಳೂರು/ಉಡುಪಿ: ಮೂರು ತಿಂಗಳಿಂದ ನಿರಂತರವಾಗಿ ಪೆಟ್ರೋಲ್‌-ಡೀಸೆಲ್‌ ಬೆಲೆ ಏರುತ್ತಿರುವುದರ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜನರು ಆಕ್ರೋಶ ವ್ಯಕ್ತಪಡಿಸುತ್ತಿರುವ ಬೆನ್ನಲ್ಲೇ, ಪೈಸೆಗಳ ಲೆಕ್ಕದಲ್ಲಿ ಬೆಲೆ ಇಳಿಸುತ್ತಿರುವ ಕೇಂದ್ರ ಸರಕಾರದ ವಿರುದ್ಧ ಕಿಡಿಕಾರಿದ್ದಾರೆ.

Advertisement

ಮಂಗಳೂರಿನಲ್ಲಿ ಬುಧವಾರ ಪೆಟ್ರೋಲ್‌ ದರ 79.09 ಇದ್ದು, ಡೀಸೆಲ್‌ ಬೆಲೆ 69.90 ಇತ್ತು. ಗುರುವಾರ ಪೆಟ್ರೋಲ್‌ ಬೆಲೆ  79.06, ಡೀಸೆಲ್‌ ಬೆಲೆ 69.85 ಆಗಿದೆ. ಈ ಮೂಲಕ ಪೆಟ್ರೋಲ್‌ ಬೆಲೆ  3 ಪೈಸೆ, ಡೀಸೆಲ್‌ ಬೆಲೆ 5 ಪೈಸೆ ಇಳಿಕೆಯಾಗಿದೆ. ಉಡುಪಿಯಲ್ಲಿ ಡೀಸೆಲ್‌ ಬೆಲೆ ಲೀ. ಒಂದಕ್ಕೆ 2 ಪೈಸೆ ಹಾಗೂ ಪೆಟ್ರೋಲ್‌ ಬೆಲೆ 3 ಪೈಸೆ ಮಾತ್ರ ಇಳಿಕೆಯಾಗಿದೆ. ಗುರುವಾರ ಪೆಟ್ರೋಲ್‌ ಬೆಲೆ ಲೀ. ಒಂದಕ್ಕೆ 79.32 ರೂ. ಹಾಗೂ ಡೀಸೆಲ್‌ ಬೆಲೆ 70.12 ರೂ. ಇದ್ದಿತ್ತು. ಬುಧವಾರ ಕ್ರಮವಾಗಿ 79.35 ರೂ. ಹಾಗೂ ಡೀಸೆಲ್‌ ಬೆಲೆ 70.14 ರೂ. ಆಗಿತ್ತು. 

ಕಳೆದ 15 ದಿನಗಳಲ್ಲಿ ಹೆಚ್ಚು ಕಡಿಮೆ 5 ರೂ.ನಷ್ಟು ದರ ಏರಿಸಿ, ಈಗ 1ರಿಂದ 3 ಪೈಸೆಗಳ ಲೆಕ್ಕಾಚಾರದಲ್ಲಿ ಇಳಿಸಿರುವುದು ಅಣಕವೇ ಸರಿ ಎಂಬುದು ಜನರ ಅಭಿಮತ. ಮೋದಿ ಸರಕಾರ ಬಂದ ಬಳಿಕ ಇಂಧನ ಬೆಲೆ ಗಣನೀಯವಾಗಿ ಇಳಿಕೆಯಾಗುತ್ತಿದೆ ಎಂದು ನಿರೀಕ್ಷಿಸಿದ ನಮಗೆ ಆಘಾತವೆನಿಸಿದೆ ಎನ್ನುತ್ತಿದ್ದಾರೆ ಹಲವರು.
ಕಚ್ಚಾತೈಲ ಬೆಲೆ ಬ್ಯಾರಲ್‌ಗೆ 40 ಡಾಲರ್‌ ಆದಾಗಲೂ ಗ್ರಾಹಕರಿಂದ ಅಧಿಕ ಬೆಲೆಯನ್ನು ವಸೂಲು ಮಾಡಲಾಗಿದೆ. ಈ ಹೆಚ್ಚುವರಿ ಹಣವನ್ನು ಅಭಿವೃದ್ಧಿ ಕಾರ್ಯಗಳಿಗೆ ಬಳಸಲಾಗುತ್ತಿದೆ ಎಂದು ಹೇಳಲಾಗುತ್ತಿದ್ದರೂ ನಮಗೆ ಅನಗತ್ಯ ಹೊರೆ ಹಾಕಬೇಡಿ. ಮೂರು ಪೈಸೆ, ಎರಡು ಪೈಸೆ ಇಳಿಕೆಯಿಂದ ಯಾರಿಗೂ ಲಾಭವಿಲ್ಲ ಎಂಬುದು ಜನರ ಅಭಿಮತ.

ಯಾವ ಲಾಭವೂ ಇಲ್ಲ
ಪೆಟ್ರೋಲ್‌, ಡೀಸೆಲ್‌ ಬೆಲೆಯನ್ನು 1, 2 ಪೈಸೆ ಇಳಿಸಿದರೆ ಯಾವ ಪ್ರಯೋಜನವೂ ಇಲ್ಲ. ಪೆಟ್ರೋಲ್‌ ಬೆಲೆ ಯನ್ನು ಕೂಡ ಜಿಎಸ್‌ಟಿ ವ್ಯಾಪ್ತಿಗೆ ತರಬೇಕು. ದೇಶಾದ್ಯಂತ ಒಂದೇ ರೀತಿಯ ಬೆಲೆ ನಿಗದಿ ಗೊಳಿಸುವಂತಾಗಬೇಕು.
 - ಕೃಷ್ಣ ರಾವ್‌ ಕೊಡಂಚ, ಅಧ್ಯಕ್ಷರು, ಚೇಂಬರ್‌ ಆಫ್ ಕಾಮರ್ಸ್‌ ಇಂಡಸ್ಟ್ರೀ, ಉಡುಪಿ

ಎಲ್ಲ ಕಡೆಯಿಂದ ಹೊರೆ
ವಿವಿಧ ರೀತಿಯ ತೆರಿಗೆ, ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆ ಮಧ್ಯೆ ಹೇಗೆ ವ್ಯಾಪಾರ ಮಾಡುವುದೆಂಬುದೇ ಅರ್ಥವಾಗುತ್ತಿಲ್ಲ. ಯಾವುದೇ ಪಕ್ಷದ ಸರಕಾರವಾದರೂ ಅಧಿಕಾರಕ್ಕೆ ಬಂದ ಅನಂತರ ಒಂದೇ ಮರ್ಜಿ. ಬೆಲೆ ಏರಿಸುವಾಗ ವಿಪರೀತವಾಗಿ ಏರಿಸುತ್ತಾರೆ. ಇಳಿಸುವಾಗ ಸ್ವಲ್ಪವೇ ಇಳಿಸುತ್ತಾರೆ. 
-ವಾಲ್ಟರ್‌ ಸಲ್ದಾನ, ಜಿಲ್ಲಾ ವರ್ತಕರ ಹಿತರಕ್ಷಣಾ ವೇದಿಕೆ ಅಧ್ಯಕ್ಷ

Advertisement

ಬದುಕಲಾಗದ ಸ್ಥಿತಿ
ನಾವು ಟ್ಯಾಕ್ಸಿ, ಮ್ಯಾಕ್ಸಿ ಕ್ಯಾಬ್‌ನವರು ಬದುಕಲಾರದ ಸ್ಥಿತಿ ಉಂಟಾಗಿದೆ. ಪದೇ ಪದೇ ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆಯಾಗುತ್ತಿದೆ. ಈಗ ಕಡಿಮೆ ಮಾಡುವಾಗ ಪೈಸೆ ಲೆಕ್ಕದಲ್ಲಿ ಮಾಡಿದರೆ ಏನು ಲಾಭ? ಪೆಟ್ರೋಲ್‌, ಡೀಸೆಲ್‌ ಬೆಲೆಯನ್ನು ಜಿಎಸ್‌ಟಿ ವ್ಯಾಪ್ತಿಗೆ ತಂದು ಬೆಲೆ ಕಡಿಮೆಯಾಗುವಂತೆ ನೋಡಿಕೊಳ್ಳಲು ಕೇಂದ್ರ ಸರಕಾರಕ್ಕೆ ಈಗಾಗಲೆ ಮನವಿ ಸಲ್ಲಿಸಿದ್ದೇವೆ.
 -ರಮೇಶ್‌ ಕೋಟ್ಯಾನ್‌, ಪ್ರಧಾನ ಕಾರ್ಯದರ್ಶಿ, ಜಿಲ್ಲಾ ಟ್ಯಾಕ್ಸಿ ಆ್ಯಂಡ್‌ ಮ್ಯಾಕ್ಸಿ ಕ್ಯಾಬ್‌ ಅಸೋಸಿಯೇಶನ್‌

ಬಸ್‌ದರ ಏರಿಕೆ ಅನಿವಾರ್ಯ
ಡೀಸೆಲ್‌ಗೆ 56 ರೂ. ಇರುವಾಗ ನಮಗೆ ಬಸ್‌ದರ ನಿಗದಿ ಮಾಡಿದ್ದರು. ಈಗ ಅದು 71ರೂ.ಗಳಿಗೆ ತಲುಪಿದೆ. ಈ ನಡುವೆ ಬಸ್‌ದರವನ್ನು 1 ರೂ. ಮಾತ್ರ ಹೆಚ್ಚಿಸಿದ್ದೇವೆ. ಬಸ್‌ ಮಾಲಕರು ತೀವ್ರ ನಷ್ಟದಲ್ಲಿದ್ದಾರೆ. 5 ಪೈಸೆ, 50 ಪೈಸೆ, 1 ರೂ. ಹೀಗೆಲ್ಲಾ ಇಳಿಕೆ ಮಾಡಿದರೆ ಪ್ರಯೋಜನವಿಲ್ಲ. ಶೇ.20ರಷ್ಟು ದರ ಏರಿಸಬೇಕಾದೀತು. 
 -ಸುರೇಶ್‌ ನಾಯಕ್‌, ಕುಯಿಲಾಡಿ, ಅಧ್ಯಕ್ಷರು, ಬಸ್‌ ಮಾಲಕರ ಸಂಘ ಉಡುಪಿ

ಏನು ಲಾಭ?
ಕೆಲವು ತಿಂಗಳಿನಿಂದ ಪೆಟ್ರೋಲ್‌, ಡೀಸೆಲ್‌ ಬೆಲೆ ವಿಪರೀತ ಏರಿಕೆಯಾಗಿದ್ದು, ಇದರಿಂದ ಸಾಮಾನ್ಯ ಜನರ ಜೀವನಕ್ಕೆ ಹೊಡೆತ ಬಿದ್ದಂತಾಗಿದೆ. ಈಗ ಮೂರು ಪೈಸೆ ಇಳಿಸಿದರೆ ಏನು ಪ್ರಯೋಜನ?
-ನಾರಾಯಣ, ಶಿಬರೂರು

ಪೈಸೆ ಲೆಕ್ಕದಲ್ಲಿ ಯಾಕೆ?
ಬೆಲೆ ಏರಿಸುವಾಗ 2 ರೂ., 3 ರೂ. ಲೆಕ್ಕ. ಇಳಿಕೆ ಎಂದಾಗ 1 ಪೈಸೆ, 2 ಪೈಸೆ. ಇದರಿಂದ ಯಾವ ದೊಡ್ಡ ಪ್ರಯೋಜನವಾದಿತು?
-ವರ್ಷಿತಾ, ಮುಡೂರು

ಕಷ್ಟಕ್ಕೆ ಸ್ಪಂದಿ ಸುತ್ತಿಲ್ಲ
ಪೈಸೆ ಲೆಕ್ಕದಲ್ಲಿ ಇಳಿಸುವ ಮೂಲಕ ಜನರ ಕಣ್ಣಿಗೆ ಮಣ್ಣೆರಚುತ್ತಿರುವ ಕೇಂದ್ರ ಸರಕಾರ ಜನರ ಕಷ್ಟಕ್ಕೆ ಸ್ಪಂದಿಸುತ್ತಿಲ್ಲ ಎನ್ನಬಹುದು.  
-ಕೃಷ್ಣರಾಜ್‌, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next