ದೀಪಾವಳಿ ಕೊಡುಗೆ ಎಂಬಂತೆ ಕೇಂದ್ರ ಮತ್ತು ರಾಜ್ಯ ಸರಕಾರಗಳು, ಗುರುವಾರದಿಂದಲೇ ಅನ್ವಯವಾಗುವಂತೆ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು ಕಡಿಮೆ ಮಾಡಿವೆ. ಇದರಿಂದಾಗಿ ಪ್ರತಿ ಲೀ. ಪೆಟ್ರೋಲ್ ಬೆಲೆ 12 ರೂ. ಮತ್ತು ಡೀಸೆಲ್ ಬೆಲೆ 17 ರೂ.ಗಳಷ್ಟು ಕಡಿಮೆಯಾಗಲಿದೆ. ಬೆಲೆ ಏರಿಕೆ ಮತ್ತು ಹಣದುಬ್ಬರದ ಮಧ್ಯೆಹಬ್ಬ ಆಚರಿಸುತ್ತಿದ್ದ ಜನರಿಗೆ ಸರಕಾರಗಳು ಈ ಮೂಲಕ ಕೊಂಚ
ನಿರಾಳತೆ ಒದಗಿಸಿದೆ.
ಆದರೆ ಇತ್ತೀಚೆಗಷ್ಟೇ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ಒಮ್ಮೆಗೇ 266 ರೂ. ಗಳಷ್ಟು ಹೆಚ್ಚಿಸಲಾಗಿದೆ. ಸಮಾಧಾನ ಸಂಗತಿ ಎಂದರೆ ಗೃಹ ಬಳಕೆಯ 14 ಕೆ.ಜಿ. ಸಿಲಿಂಡರ್ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ನವೆಂಬರ್ 1ರಿಂದಲೇ ದೇಶಾದ್ಯಂತ 19 ಕೆ.ಜಿ. ತೂಕದ ವಾಣಿಜ್ಯ ಸಿಲಿಂಡರ್ ಬೆಲೆ 2,000 ರೂ.ದಾಟಿದೆ. ಇನ್ನು ಗೃಹ ಬಳಕೆಯ ಸಿಲಿಂಡರ್ ಬೆಲೆ 14 ಕೆ.ಜಿ.ಗೆ 900 ರೂ. ದಾಟಿದೆ. ಸದ್ಯ ಬೆಂಗಳೂರಿನಲ್ಲಿ ಗೃಹ ಬಳಕೆ ಸಿಲಿಂಡರ್ ಬೆಲೆ 902.50 ರೂ. ಗಳಷ್ಟಿದೆ.
ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಳವಾಗಿರುವಂತೆಯೇ ಹಣದುಬ್ಬರವೂ ಹೆಚ್ಚಾಗುತ್ತಿದೆ. ಪೆಟ್ರೋಲ್ ಮತ್ತು ಡೀಸೆಲ್‌ಗೆ ಹೊಂದಿಕೊಂಡ ಉದ್ಯಮಗಳಲ್ಲಿ ಉತ್ಪಾದನ ವೆಚ್ಚವೂ ಹೆಚ್ಚಾಗುತ್ತಿದೆ. ಹೀಗಾಗಿ ಇದಕ್ಕೆ ಸಂಬಂಧಿಸಿದ ವಸ್ತುಗಳು, ಸಾರಿಗೆ ದರವೂ ಹೆಚ್ಚಾಗುವ ಆತಂಕವಿದೆ. ಆದರೆ ಈಗ ಕೊಂಚ ಬೆಲೆ ಇಳಿಕೆ ಮಾಡಿರುವುದರಿಂದ ಈ ಕ್ಷೇತ್ರಕ್ಕೆ ಒಂದಷ್ಟು ರಿಲೀಫ್ ಸಿಗಬಹುದು. ಆದರೆ ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆಯನ್ನು ಒಮ್ಮೆಲೇ 266 ರೂ. ಗಳಷ್ಟು ಏರಿಕೆ ಮಾಡಿರುವುದು ಸಣ್ಣಪುಟ್ಟ ಮತ್ತು ಮಧ್ಯಮ ಪ್ರಮಾಣದ ಹೊಟೇಲ್‌ಗಳನ್ನು ಇಟ್ಟುಕೊಂಡಿರುವವರಿಗೆ ದುಬಾರಿ ಎನಿಸಿದೆ.
ಈ ಹೊಟೇಲ್‌ಗಳು ತಮ್ಮ ಅಡುಗೆಗಾಗಿ ನೆಚ್ಚಿಕೊಂಡಿರುವುದು ಈ ವಾಣಿಜ್ಯ ಬಳಕೆಯ 19 ಕೆ.ಜಿ. ತೂಕದ ಸಿಲಿಂಡರ್‌ಗಳನ್ನೇ. ಈಗ ಒಂದು ಸಿಲಿಂಡರ್‌ಗೆ 266 ರೂ. ಹೆಚ್ಚುವರಿಯಾಗಿ ನೀಡಬೇಕು ಎಂದಾದರೆ ನಾವು ಈಗ ಕೊಡುತ್ತಿರುವ ದರಕ್ಕೆ ಊಟ, ತಿಂಡಿ, ಕಾಫಿ, ಟೀ ನೀಡಲು ಸಾಧ್ಯವೇ ಎಂಬುದು ಹೊಟೇಲ್ ಉದ್ಯಮಿಗಳ ಪ್ರಶ್ನೆಯಾಗಿದೆ.
ಮೊದಲೇ ಕೊರೊನಾ ವಿಚಾರದಲ್ಲಿ ಪೆಟ್ಟು ತಿಂದಿರುವ ನಮಗೆ ಹೊಟೇಲ್ ಉದ್ಯಮ ನಡೆಸುವುದೇ ಕಷ್ಟಕರವಾಗಿದೆ. ಇಂಥ ಸ್ಥಿತಿಯಲ್ಲಿ ತೈಲೋತ್ಪನ್ನಗಳು ಮತ್ತು ಸಿಲಿಂಡರ್ ಬೆಲೆ ಹೆಚ್ಚಳ ಮಾಡಿದರೆ ನಾವು ಏನು ಮಾಡಬೇಕು ಎಂದೂ ಪ್ರಶ್ನಿಸಿದ್ದಾರೆ. ವಿಷಯವನ್ನು ಸೂಕ್ಷ್ಮವಾಗಿ ಗಮನಿಸಿದರೆ ಇದು ಸತ್ಯದಂತೆಯೇ ಕಾಣಿಸುತ್ತದೆ. ಕಳೆದ ಎರಡು ವರ್ಷಗಳ ಕೊರೊನಾ ಪೆಟ್ಟಿನಿಂದ ಯಾರೊಬ್ಬರೂ ಚೇತರಿಸಿಕೊಂಡಿಲ್ಲ. ಇಂಥ ಹೊತ್ತಲ್ಲಿ ಹೊಟೇಲ್ ಉದ್ಯಮದಲ್ಲಿ ಹೆಚ್ಚಾಗಿ ಬಳಕೆಯಾಗುವ ವಸ್ತುಗಳ ಬೆಲೆ ಏರಿಕೆ ಮಾಡಿದರೆ ಇದನ್ನು ಸಹಿಸಿಕೊಳ್ಳುವುದು ಕಷ್ಟವಾಗುತ್ತದೆ. ಹೀಗಾಗಿ ಹೊಟೇಲ್ ಉದ್ಯಮಿಗಳು ಅನಿವಾರ್ಯವಾಗಿ ಊಟ-ತಿಂಡಿಯ ದರ ಹೆಚ್ಚಿಸುತ್ತಾರೆ.
ಈ ಮಧ್ಯೆ ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರಗಳು ಒಂದೇ ದಿನ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು ಕಡಿತಗೊಳಿಸಿದ್ದು ಉತ್ತಮ ನಿರ್ಧಾರ. ಬೆಲೆ ಏರಿಕೆಯಿಂದ ಈಗಾಗಲೇ ಬಳಲಿದ್ದ ಜನರಿಗೆ ಕೊಂಚ ಮಟ್ಟಿನ ನೆಮ್ಮದಿಯಾದರೂ ಸಿಕ್ಕಿದೆ. ಜತೆಗೆ ದೀಪಾವಳಿ ವೇಳೆಗೆ ಸಿಹಿ ಕೊಡುಗೆ ಕೊಟ್ಟಂತಾಗಿದೆ.