ಹೊಸದಿಲ್ಲಿ : ಪೆಟ್ರೋಲ್ ಮತ್ತು ಡೀಸಿಲ್ ದರವನ್ನು ಹಾಸ್ಯಾಸ್ಪದವಾಗಿ 1 ಪೈಸೆ ಇಳಿಸಿದ ಒಂದು ದಿನದ ತರುವಾಯ ತೈಲ ಮಾರಾಟ ಕಂಪೆನಿಗಳು ಇಂದು ಗುರುವಾರ ಪೆಟ್ರೋಲ್ ಬೆಲೆಯನ್ನು ಲೀಟರಿಗೆ 7 ಪೈಸೆ ಮತ್ತು ಡೀಸಿಲ್ ದರವನ್ನು ಲೀಟರ್‌ಗೆ 5 ಪೈಸೆ ಇಳಿಸಿದೆ.
ಪೆಟ್ರೋಲ್ ಮತ್ತು ಡೀಸಿಲ್ ದರಗಳು ನಿರಂತರ 16 ದಿನಗಳ ಕಾಲ ಏರಿಕೆಯನ್ನು ಕಂಡ ಬಳಿಕದಲ್ಲಿ ಎರಡನೇ ಬಾರಿಗೆ ಆಗುತ್ತಿರುವ ಕಿಂಚಿತ್ ದರ ಕಡಿತ ಇದಾಗಿದೆ.
ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆಗಳಲ್ಲಿ ಕೊಂಚ ಮಟ್ಟಿನ ಇಳಿಕೆ ಕಂಡು ಬಂದಿರುವ ಕಾರಣ ಭಾರತದಲ್ಲಿ ತೈಲ ಬೆಲೆಗಳು ಸ್ವಲ್ಪಮಟ್ಟಿಗೆ ಇಳಿದಿವೆ.
ದಿಲ್ಲಿಯಲ್ಲಿಂದು ಪೆಟ್ರೋಲ್ ಲೀಟರ್ ಬೆಲೆ 78.35, ಡೀಸಿಲ್ 69.25 ರೂ. ಇದೆ; ಮುಂಬಯಿ ಯಲ್ಲಿ ಪೆಟ್ರೋಲ್ ಲೀಟರ್ ಬೆಲೆ 86.16 ಮತ್ತು ಡೀಸಿಲ್ ಬೆಲೆ 73.73 ರೂ ಇದೆ.
ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಯ ಪ್ರಯುಕ್ತ 19 ದಿನಗಳ ಕಾಲ ಪೆಟ್ರೋಲ್ ಮತ್ತು ಡೀಸಿಲ್ ಬೆಲೆಗಳ ದೈನಂದಿನ ಪರಿಷ್ಕರಣೆಯನ್ನು ತಡೆಹಿಡಿದಿದ್ದ ತೈಲ ಮಾರಾಟ ಕಂಪೆನಿಗಳು, ಮೇ 14ರಿಂದ ಮತ್ತು ಆ ಪ್ರಕ್ರಿಯೆಯನ್ನು ಆರಂಭಿಸಿದ್ದವು.