ಬೆಂಗಳೂರು: ಲೋಕಸಭಾ ಚುನಾವಣೆ ಮುಗಿದ ಬೆನ್ನಲ್ಲೇ ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ಮೇಲಿನ ಮಾರಾಟ ತೆರಿಗೆ ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ. ಕಳೆದ ಒಂದೂವರೆ ವರ್ಷದಿಂದ ತೈಲ ಬೆಲೆ ಹೆಚ್ಚಳವಿಲ್ಲದೆ ಆರಾಮದಲ್ಲಿದ್ದ ವಾಹನ ಸವಾರರಿಗೆ ಸರ್ಕಾರ ಶಾಕ್ ನೀಡಿದೆ. ರಾಜ್ಯದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ತಲಾ ಮೂರು ರೂಪಾಯಿ ಹೆಚ್ಚಳವಾಗಿದೆ.
2020 ಏಪ್ರಿಲ್‌ನಲ್ಲಿ ಹೆಚ್ಚಳವಾಗಿದ್ದ ಮಾರಾಟ ತೆರಿಗೆ 2021ರ ನವೆಂಬರ್‌ನಲ್ಲಿ ಕಡಿಮೆಯಾಗಿತ್ತು. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ಸಂಪನ್ಮೂಲ ಮೀಸಲಿಟ್ಟಿದ್ದರಿಂದ ಇತರೆ ಅಭಿವೃದ್ಧಿ ಯೋಜನೆಗಳಿಗೆ ಹಣದ ಕೊರತೆ ನೀಗಿಸಲು ರಾಜ್ಯ ಸರ್ಕಾರ ಇದೀಗ ತೈಲ ಬೆಲೆಯಲ್ಲಿ ತಲಾ ಮೂರು ರೂ. ಹೆಚ್ಚಳ ಮಾಡಿ ಸಾರ್ವಜನಿಕರಿಗೆ ಬರೆ ಹಾಕಿದೆ.
ಪರಿಣಾಮಗಳೇನು?
ಇಂಧನ ದರ ಹೆಚ್ಚಳದಿಂದಾಗಿ ಸರಕು, ಸಾಗಣೆ, ಕೆಎಸ್‌ಆರ್‌ಟಿಸಿ, ಖಾಸಗಿ ಬಸ್, ಟ್ಯಾಕ್ಸಿ ಪ್ರಯಾಣ ದರ ಹೆಚ್ಚಲಿದೆ. ಇದರ ನೇರ ಹೊರೆ ಪ್ರಯಾಣಿಕರಿಗೆ ಬೀಳಲಿದೆ.
ಹಣ್ಣು, ತರಕಾರಿ, ಹಾಲು, ಹೋಟೆಲ್ ತಿಂಡಿ ತಿನಿಸುಗಳ ಮೇಲೆ ದರ ಬರೆ ಬೀಳುವ ಸಾಧ್ಯತೆ ಹೆಚ್ಚು.
ಕೆಎಸ್‌ಆರ್‌ಟಿಸಿ ಬಸ್ ಪ್ರಯಾಣ ದರ ಹೆಚ್ಚಳವಾದರೆ ಪುರುಷರ ಪ್ರಯಾಣ ಸಂಖ್ಯೆ ಇಳಿಮುಖವಾಗುವ ಸಾಧ್ಯತೆಯಿದೆ. ಮಹಿಳೆಯರಿಗೆ ಪ್ರಯಾಣ ಉಚಿತವಿರುವ ಕಾರಣ, ಪುರುಷರ ಸಂಖ್ಯೆ ಕಡಿಮೆಯಾದರ ಇಲಾಖೆಯ ಆದಾಯ ಖೋತಾ ಆಗಲಿದೆ.
ಬೆಂಗಳೂರಿನಲ್ಲಿ ಹೇಗಿದೆ ದರ
ಪೆಟ್ರೋಲ್: ಹಿಂದಿನ ದರ- 99.83 ರೂ. ಪರಿಷ್ಕೃತ ದರ- 102.85 ರೂ
ಡೀಸೆಲ್: ಹಿಂದಿನ ದರ- 85.93 ರೂ. ಪರಿಷ್ಕೃತ ದರ- 88.93 ರೂ
ಪವರ್ ಪೆಟ್ರೋಲ್: ಹಿಂದಿನ ದರ- 106.66 ರೂ. ಪರಿಷ್ಕೃತ ದರ- 109.89 ರೂ
ಉಡುಪಿ
ಉಡುಪಿಯಲ್ಲಿ ಪೆಟ್ರೋಲ್ ಬೆಲೆ 99.53 ರೂ ಇದ್ದು, ಮುಂದೆ 102.55 ರೂ ಆಗಿದೆ. ಡೀಸೆಲ್ ಬೆಲೆ ಪ್ರತಿ ಲೀಟರ್ ಗೆ 85.62 ರೂ ಇದ್ದು ಏರಿಕೆಯಾಗಿ 88.61 ರೂ ಆಗಿದೆ.
ಮಂಗಳೂರು
ಮಂಗಳೂರಿನಲ್ಲಿ 99.01 ರೂ ಇದ್ದ ಪೆಟ್ರೋಲ್ ಬೆಲೆ ಇದೀಗ 102.01ಗೆ ಹೆಚ್ಚಳವಾಗಿದೆ. ಪ್ರತಿ ಲೀಟರ್ ಗೆ 85.15 ರೂ ಇದ್ದ ಡೀಸೆಲ್ ಬೆಲೆ ಇದೀಗ 88.13 ರೂ ಆಗಿದೆ.